ನವದೆಹಲಿ: ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು, ಫ್ರಾನ್ಸ್ ಜೊತೆಗೆ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಇಂದು ಸಹಿ ಹಾಕಲಿದೆ. 63 ಸಾವಿರ ಕೋಟಿ ರೂಪಾಯಿ ಮೌಲ್ಯದಲ್ಲಿ 26 ರಫೇಲ್ ಸಾಗರ ಯುದ್ಧ ವಿಮಾನಗಳನ್ನು ಭಾರತ ಖರೀದಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ರಾನ್ಸ್ ಪರವಾಗಿ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಮತ್ತು ಭಾರತದ ಕಡೆಯಿಂದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಈ ಒಪ್ಪಂದದಲ್ಲಿ ಭಾಗವಹಿಸಲಿದ್ದಾರೆ. ಎರಡೂ ದೇಶಗಳ ರಕ್ಷಣಾ ಸಚಿವರು ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಒಡಂಬಡಿಕೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಮೂಲಗಳ ಪ್ರಕಾರ, ಸೌತ್ ಬ್ಲಾಕ್‌ನಲ್ಲಿರುವ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಈ ಒಪ್ಪಂದ ನಡೆಯಲಿದೆ. ಈ ಮೊದಲು, ಫ್ರಾನ್ಸ್ ರಕ್ಷಣಾ ಸಚಿವರು ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಭಾಗವಹಿಸಬೇಕಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ಭೇಟಿಯನ್ನು ರದ್ದುಗೊಳಿಸಿದ್ದರು.
ಒಪ್ಪಿಗೆ ನೀಡಿದ್ದ ಸಿಸಿಎಸ್ : ಈ ತಿಂಗಳ ಆರಂಭದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯು (CCS) ಭಾರತದ ಅತಿದೊಡ್ಡ ಫೈಟರ್ ಜೆಟ್ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಇದು ಭಾರತೀಯ ನೌಕಾಪಡೆಗೆ 26 ರಫೇಲ್ ಸಾಗರ ಯುದ್ಧ ವಿಮಾನಗಳ ಖರೀದಿಗೆ ಅವಕಾಶ ನೀಡಲಿದೆ.
ಈ ಒಪ್ಪಂದದಂತೆ 22 ಸಿಂಗಲ್-ಸೀಟರ್ ಮತ್ತು ನಾಲ್ಕು ಡಬಲ್ ಸೀಟರ್ ನ ರಫೇಲ್ ಸಾಗರ ಜೆಟ್‌ಗಳನ್ನು ಒಳಗೊಂಡಿರಲಿದೆ. ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ, ಮತ್ತು ಹೊಣೆಗಾರಿಕೆಯನ್ನು ಹೊಂದಿದೆ. ಜೊತೆಗೆ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್ ಅನ್ನು ಕೂಡ ಈ ಒಪ್ಪಂದ ಒಳಗೊಂಡಿದೆ.
ಸದ್ಯ ನೌಕಾಪಡೆಗಳಲ್ಲಿರುವ ಮಿಗ್ -29 ಕೆ ಯುದ್ಧ ವಿಮಾನಗಳು ನಿರ್ವಹಣಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಯುದ್ಧ ಮತ್ತಿತರ ತುರ್ತು ಸಂದರ್ಭಗಳಲ್ಲಿ ಫೈಟರ್ ಜೆಟ್ ಗಳ ಅವಶ್ಯತೆ ಇದೆ. ಹೀಗಾಗಿ, ರಫೇಲ್ ಯುದ್ಧ ವಿಮಾನಗಳನ್ನು ನೌಕಾಪಡೆಗಳಿಗಾಗಿ ಖರೀದಿ ಮಾಡಲಾಗುತ್ತಿದೆ. ಐಎನ್‌ಎಸ್ ವಿಕ್ರಾಂತ್ ಸೇರಿದಂತೆ ಯುದ್ಧ ನೌಕೆಗಳಲ್ಲಿ ಈ ಫೈಟರ್ ಜೆಟ್ ಗಳನ್ನು ನಿಯೋಜಿಸಲಾಗುತ್ತದೆ.
ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು 5 ವರ್ಷಗಳ ನಂತರ ರಫೇಲ್ ಜೆಟ್‌ಗಳು ಸಿಗುವ ನಿರೀಕ್ಷೆಯಿದೆ. ಭಾರತೀಯ ವಾಯುಪಡೆ (ಐಎಎಫ್) ಈಗಾಗಲೇ ಅಂಬಾಲಾ ಮತ್ತು ಹಶಿಮಾರಾ ನೆಲೆಗಳಲ್ಲಿ 36 ರಫೇಲ್ ಜೆಟ್‌ಗಳನ್ನು ಹೊಂದಿದೆ. ಹೊಸ ರಫೇಲ್ ಯುದ್ಧ ವಿಮಾನಗಳ ಒಪ್ಪಂದವು ಇತರ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬಿಸುವ ಸಾಮರ್ಥ್ಯವನ್ನೂ ಹೆಚ್ಚಿಸಲಿದೆ.
ಇದನ್ನೂ ಓದಿ: ನೌಕಾಪಡೆಗೆ ರಫೇಲ್ ಬಲ: 26 ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆ ಒಪ್ಪಂದಕ್ಕೆ ಭಾರತ ಅನುಮೋದನೆ