ಕೋಟಾ(ರಾಜಸ್ಥಾನ): ಗ್ರಾಹಕರ ಗಮನಕ್ಕೆ ಬಾರದಂತೆ 43 ಜನರ 100 ಖಾತೆಗಳಿಂದ 4.60 ಕೋಟಿ ರೂಪಾಯಿ ಹಣವನ್ನು ಐಸಿಐಸಿ ಬ್ಯಾಂಕ್ ಮ್ಯಾನೇಜರ್ ಎಗರಿಸಿದ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಸಾಕ್ಷಿ ಗುಪ್ತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಐಸಿಐಸಿಐ ಬ್ಯಾಂಕ್ನಲ್ಲಿ ಪ್ರಕರಣ ನಡೆದಿದೆ. ಬ್ಯಾಂಕಿನ ಶ್ರೀರಾಮ್ ನಗರ ಶಾಖೆಯ ಗ್ರಾಹಕರ ಖಾತೆಗಳಿಂದ 4.60 ಕೋಟಿ ರೂ.ಗಳನ್ನು ಕದಿಯಲಾಗಿದೆ. ಮ್ಯಾನೇಜರ್ ಸಾಕ್ಷಿ ಗುಪ್ತಾ ಅವರು 2020ರಿಂದ 2023ರ ನಡುವೆ ಈ ಕೃತ್ಯ ಎಸಗಿದ್ದಾರೆ. ಕದ್ದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಜಿತೇಂದ್ರ ಸಿಂಗ್ ಶೇಖಾವತ್, ಆರೋಪಿ ಸಾಕ್ಷಿ ಗುಪ್ತಾ ಸುಮಾರು 43 ಗ್ರಾಹಕರ 100ಕ್ಕೂ ಹೆಚ್ಚು ಖಾತೆಗಳಿಂದ ಹಣ ಎಗರಿಸಿದ್ದಾರೆ. ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಖಾತೆಗಳಿಂದ ಹಣ ಕಡಿತವಾಗಿದ್ದು, ಗ್ರಾಹಕರಿಗೆ ತಿಳಿಯದಂತೆ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿದ್ದಾರೆ. ಗ್ರಾಹಕರ ಡೆಬಿಟ್ ಕಾರ್ಡ್‌ಗಳು, ಪಿನ್ ಮತ್ತು ಒಟಿಪಿಗಳನ್ನು ದುರುಪಯೋಗಪಡಿಸಿಕೊಂಡು ವಹಿವಾಟು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಹಕ ಕೇಳಿದ ಮಾಹಿತಿಯಿಂದ ಪ್ರಕರಣ ಬಯಲು: ಬ್ಯಾಂಕ್ ಮ್ಯಾನೇಜರ್ ತಮ್ಮ ಗ್ರಾಹಕರ ಖಾತೆಗಳಿಂದ ಹಣ ಎಗರಿಸಿದರೂ ಯಾರಿಗೂ ಅನುಮಾನ ಬಂದಿರಲಿಲ್ಲ. ಈಚೆಗೆ ಗ್ರಾಹಕರೊಬ್ಬರು ತಮ್ಮ ಎಫ್ಡಿ ಖಾತೆಯಲ್ಲಿ 1.50 ಲಕ್ಷ ರೂಪಾಯಿ ಹಣದ ಬಗ್ಗೆ ಮಾಹಿತಿ ಕೇಳಿದ್ದಾರೆ. ಪರಿಶೀಲಿಸಿದಾಗ, ಅವರ ಖಾತೆಯಲ್ಲಿದ್ದ ಹಣ ಖಾಲಿಯಾಗಿತ್ತು. ಈ ವೇಳೆ ಅಕ್ರಮ ನಡೆದಿದ್ದು ಬಯಲಾಗಿದೆ.
ಮ್ಯಾನೇಜರ್ ನಡೆಸಿದ ಕರಾಮತ್ತು ಹೀಗಿದೆ: ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕಿ ಸಾಕ್ಷಿ ಗುಪ್ತಾ ಅವರು, 40 ಖಾತೆಗಳನ್ನು ಓವರ್‌ಡ್ರಾಫ್ಟ್ ಮಾಡಿ ಹಣ ಪಡೆದುಕೊಂಡಿದ್ದಾರೆ. 31 ಗ್ರಾಹಕರ ಎಫ್‌ಡಿಗಳನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸಲಾಗಿದೆ. ಇದರಲ್ಲಿದ್ದ ಸುಮಾರು 1.35 ಕೋಟಿ ರೂ.ಗಳನ್ನು ಮತ್ತೊಂದು ಖಾತೆಗೆ ವರ್ಗಾಯಿಸಲಾಗಿದೆ. ಅದೇ ರೀತಿ, 2023 ರಲ್ಲಿ ವೃದ್ಧ ಮಹಿಳೆಯೊಬ್ಬರ ಖಾತೆಯಿಂದ 3 ಕೋಟಿ ರೂಪಾಯಿಗಳನ್ನು ಹಿಂಪಡೆಯಲಾಗಿದೆ. ಹೆಚ್ಚಿನ ವಹಿವಾಟುಗಳನ್ನು ಇನ್‌ಸ್ಟಾ ಕಿಯೋಸ್ಕ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ನಡೆಸಲಾಗಿದೆ. ಅವರು ನಾಲ್ಕು ಗ್ರಾಹಕರ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಎಟಿಎಂ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವೂ ವಹಿವಾಟುಗಳನ್ನು ನಡೆಸಿದ್ದಾರೆ. ಈ ಎಲ್ಲಾ ಹಣವನ್ನು ಅವರು ಡಿಮ್ಯಾಟ್ ಖಾತೆಗೆ ವರ್ಗಾಯಿಸಿದ್ದಾರೆ.
ಅಕ್ರಮ ಬಯಲಾದ ಬಳಿಕ ಬ್ಯಾಂಕ್ನಲ್ಲಿನ ಉಳಿದ ಖಾತೆಗಳ ತಪಾಸಣೆ ನಡೆಸಿದಾಗ 43 ಖಾತೆಗಳಿಗೆ ಕನ್ನ ಹಾಕಿದ್ದು ಗೊತ್ತಾಗಿದೆ. ಈ ಬಗ್ಗೆ ಎಲ್ಲ ಖಾತೆದಾರರಿಗೆ ಬ್ಯಾಂಕ್ ಆಡಳಿತ ಮಂಡಳಿ ಮಾಹಿತಿ ರವಾನಿಸಿದೆ. ಹಣ ಕಳೆದುಕೊಂಡ ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿ ತಮ್ಮ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.
ಇನ್ನು, ಬ್ಯಾಂಕ್ನಲ್ಲಿ ನಡೆದ ಅಕ್ರಮ ಬಯಲಾಗುತ್ತಿದ್ದಂತೆ ಬ್ಯಾಂಕ್ ಆಡಳಿತ ಮಂಡಳಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಾರಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮನಗೂಳಿ ಕೆನರಾ ಬ್ಯಾಂಕಿನಲ್ಲಿ 58 ಕೆಜಿ ಚಿನ್ನ ಕದ್ದೊಯ್ದ ಕಳ್ಳರು: ತನಿಖೆಗೆ 8 ತಂಡ ರಚಿಸಿದ ಪೊಲೀಸರು
ಜನರ ಬಳಿ ಇನ್ನೂ 6,181 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳಿವೆ: ರಿಸರ್ವ್ ಬ್ಯಾಂಕ್