ನವದೆಹಲಿ : "ಪಕ್ಷ ಮತ್ತು ಕುಟುಂಬ ಬಯಸಿದರೆ, ರಾಜಕೀಯಕ್ಕೆ ಬರಲು ಸಿದ್ಧ" ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜಕೀಯ ಸೇರುವ ಬಗ್ಗೆ ಮಾತನಾಡಿರುವ ಅವರು, "ಗಾಂಧಿ ಕುಟುಂಬದೊಂದಿಗೆ ಸಂಬಂಧ ಬೆಳೆಸಿಕೊಂಡ ಬಳಿಕ ರಾಜಕೀಯ ಸಂಪರ್ಕವೂ ಇದೆ. ಹಲವು ಬಾರಿ ತಮ್ಮನ್ನು ರಾಜಕೀಯ ವಿಚಾರಗಳಿಗೆ ಎಳೆದು ತಂದಿದ್ದಾರೆ. ಅನೇಕ ರಾಜಕೀಯ ಪಕ್ಷಗಳು ತಮ್ಮ ಹೆಸರನ್ನು ಬಳಸಿಕೊಂಡಿವೆ" ಎಂದಿದ್ದಾರೆ.
"ಗಾಂಧಿ ಕುಟುಂಬದಲ್ಲಿರುವ ಕಾರಣ, ನನ್ನನ್ನು ರಾಜಕೀಯಕ್ಕೆ ಎಳೆದು ತರುತ್ತಲೇ ಇರುತ್ತಾರೆ. ಪತ್ನಿ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಂಸತ್ತಿನ ಕಲಾಪಗಳಲ್ಲಿ ಉತ್ತಮವಾಗಿ ಭಾಗವಹಿಸುತ್ತಾರೆ. ಅವರಿಂದ ಕಲಿಯುವುದು ತುಂಬಾ ಇದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಾಂಕಾ ಮೊದಲು, ಆಮೇಲೆ ನಾನು: "ಪ್ರಿಯಾಂಕಾ ವಾದ್ರಾ ಮೊದಲು ರಾಜಕೀಯಕ್ಕೆ ಬರಬೇಕು ಎಂಬುದು ಇಚ್ಛೆಯಾಗಿತ್ತು. ಈಗ ಅವರು ಸಂಸದೆಯಾಗಿದ್ದಾರೆ. ಪಕ್ಷ ಮತ್ತು ಕ್ಷೇತ್ರಕ್ಕಾಗಿ ತುಂಬಾ ಶ್ರಮಿಸುತ್ತಿದ್ದಾರೆ. ನಾನು ಅವರು ಮತ್ತು ಕುಟುಂಬದಿಂದಲೂ ತುಂಬಾ ಕಲಿತಿದ್ದೇನೆ" ಎಂದರು.
"ರಾಜಕೀಯಕ್ಕೆ ಬರಬೇಕು ಎಂದು ಕಾಂಗ್ರೆಸ್ ಬಯಸಿದಲ್ಲಿ, ಅದರ ನಾಯಕರು ಇಚ್ಛಿಸಿದಲ್ಲಿ ಇದಕ್ಕೆ ನಾನು ಸಿದ್ಧ. ವಿಭಜಕ ಶಕ್ತಿಗಳ ವಿರುದ್ಧ ಹೋರಾಡಲು ಮತ್ತು ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಹೆಜ್ಜೆ ಇಡುವುದಾಗಿ" ವಾದ್ರಾ ಹೇಳಿದ್ದಾರೆ.
ಚೋಕ್ಸಿ ಬಂಧನಕ್ಕೆ ಮೆಚ್ಚುಗೆ: ಹಗರಣ ನಡೆಸಿ ದೇಶ ಬಿಟ್ಟು ಪರಾರಿಯಾಗಿ ಬೆಲ್ಜಿಯಂನಲ್ಲಿ ಬಂಧಿತನಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಬಂಧನ ಕುರಿತು ಮಾತನಾಡಿ, "ಇದು ದೇಶಕ್ಕೆ ಸಿಕ್ಕ ದೊಡ್ಡ ಜಯ. ಆರೋಪಿಯಿಂದ ನಷ್ಟವಾದ ಹಣವನ್ನು ವಸೂಲಿ ಮಾಡಬೇಕು. ವಂಚಿತರಿಗೆ ಪರಿಹಾರ ಸಿಗಬೇಕು" ಎಂದರು.
"ಚೋಕ್ಸಿ, ನೀರವ್ ಮೋದಿ ಸೇರಿ ದೇಶದಿಂದ ಪರಾರಿಯಾದವರನ್ನು ಮರಳಿ ತರಬೇಕು. ಜನರಿಗಾದ ನಷ್ಟವನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕು" ಎಂದು ವಾದ್ರಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉರ್ದು ಭಾಷೆಗೆ 'ರಾಮಾಯಣ'ವನ್ನು ಅನುವಾದಿಸಿದ ಹಿಂದೂ ವ್ಯಕ್ತಿ; ಇದು 14 ವರ್ಷಗಳ ಪರಿಶ್ರಮ