ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರದಿಂದ ಬಾಧಿತರಾದ ನೂರಾರು ಜನ ಭಾಗೀರಥಿ ನದಿಯನ್ನು ದಾಟಿ ಪಕ್ಕದ ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುರ್ಷಿದಾಬಾದ್ನಿಂದ ಬಂದು ಆಶ್ರಯ ಪಡೆದಿರುವ ಕುಟುಂಬಗಳಿಗೆ ಸ್ಥಳೀಯಾಡಳಿತವು ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಿದೆ ಹಾಗೂ ಶಾಲೆಗಳಲ್ಲಿ ಅವರಿಗೆ ಆಶ್ರಯ ನೀಡಲಾಗಿದೆ. ಅಲ್ಲದೆ, ದೋಣಿಗಳ ಮೂಲಕ ಬರುತ್ತಿರುವವರಿಗೆ ಸಹಾಯ ಮಾಡಲು ನದಿ ತೀರದಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.
ಸುತಿ, ಧುಲಿಯನ್, ಜಂಗಿಪುರ ಮತ್ತು ಶಂಶೇರ್ ಗಂಜ್ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್ನ ಹಲವಾರು ಪ್ರದೇಶಗಳಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಮುರ್ಷಿದಾಬಾದ್ನ ಈ ಭಾಗಗಳಲ್ಲಿ ಅಂಗಡಿಗಳು, ಹೋಟೆಲ್ಗಳು ಮತ್ತು ಮನೆಗಳನ್ನು ಸುಟ್ಟುಹಾಕಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ.
"ನಮ್ಮ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಮತ್ತು ಹೊರಗಿನವರು ಹಾಗೂ ಕೆಲ ಸ್ಥಳೀಯರ ಗುಂಪುಗಳು ಮಹಿಳೆಯರು ಮತ್ತು ಯುವತಿಯರಿಗೆ ಕಿರುಕುಳ ನೀಡಿದ್ದರಿಂದ ನಾವು ಧುಲಿಯನ್ನ ಮಂದಿರ್ ಪಾರಾ ಪ್ರದೇಶದಿಂದ ಪಲಾಯನ ಮಾಡಿ ಇಲ್ಲಿಗೆ ಬಂದಿದ್ದೇವೆ" ಎಂದು ನಾಲ್ಕು ಜನ ಕುಟುಂಬ ಸದಸ್ಯರೊಂದಿಗೆ ಅಲ್ಲಿಂದ ಪಲಾಯನಗೈದ ಸಂತ್ರಸ್ತ ಯುವತಿ ಸುದ್ದಿಗಾರರಿಗೆ ತಿಳಿಸಿದರು.
"ಅವರು ನಮ್ಮತ್ತ ಬಾಂಬ್ ಎಸೆದರು, ವಕ್ಫ್ (ತಿದ್ದುಪಡಿ) ಕಾಯ್ದೆಗಾಗಿ ನಮ್ಮನ್ನು ದೂಷಿಸಿದರು ಮತ್ತು ತಕ್ಷಣವೇ ಮನೆಗಳನ್ನು ತೊರೆಯುವಂತೆ ಹೇಳಿದರು. ನಮ್ಮ ಕುಟುಂಬದ ಪುರುಷರನ್ನು ಅವರು ಥಳಿಸಿದರು. ನಮ್ಮ ಜೀವಕ್ಕೆ ಅಪಾಯವಿದೆ ಎಂಬುದನ್ನು ಅರಿತ ನಾವು ಕೇಂದ್ರ ಭದ್ರತಾ ಪಡೆಗಳ ಸಹಾಯದಿಂದ ಅಲ್ಲಿಂದ ತಪ್ಪಿಸಿಕೊಂಡೆವು" ಎಂದು ಯುವತಿ ಹೇಳಿದರು.
ಈ ಬಗ್ಗೆ ಮಾತನಾಡಿದ ಮತ್ತೊಬ್ಬ ವೃದ್ಧ ಮಹಿಳೆ, "ನಾವು ಯಾವುದೇ ತಪ್ಪು ಮಾಡದಿದ್ದರೂ ಲೂಟಿಕೋರರ ಮುಂದೆ ಕೈಮುಗಿದು ಕ್ಷಮೆ ಕೋರಿದ್ದೇವೆ. ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರರು ನಮ್ಮ ಮೇಲೆ ದೌರ್ಜನ್ಯವೆಸಗಿದರು. ನಾನು, ನನ್ನ ಮಗ, ಸೊಸೆ ಮತ್ತು ಮೊಮ್ಮಗ ನಮ್ಮ ಕೆಲವು ವಸ್ತುಗಳೊಂದಿಗೆ ಓಡಿಹೋದೆವು. ಒಂದೊಮ್ಮೆ ನಾವು ಅಲ್ಲಿಯೇ ಇದ್ದರೆ ಅವರು ನಮ್ಮನ್ನು ಕೊಲ್ಲುತ್ತಿದ್ದರು." ಎಂದರು.
ಹಿಂಸಾಚಾರದ ನಂತರ 400 ಜನರು ಧುಲಿಯನ್ ನಿಂದ ಪಲಾಯನ ಮಾಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
"ಧಾರ್ಮಿಕ ಮತಾಂಧರ ಭಯದಿಂದ ಮುರ್ಷಿದಾಬಾದ್ನ ಧುಲಿಯನ್ನಿಂದ 400 ಕ್ಕೂ ಹೆಚ್ಚು ಹಿಂದೂಗಳು ನದಿಯನ್ನು ದಾಟಿ ಮಾಲ್ಡಾದ ಬೈಸ್ ನಾಬ್ನಗರದ ಡಿಯೋನಾಪುರ-ಸೋವಾಪುರ ಜಿಪಿಯ ಪಾರ್ ಲಾಲ್ಪುರ್ ಹೈಸ್ಕೂಲ್ನಲ್ಲಿ ಆಶ್ರಯ ಪಡೆದಿದ್ದಾರೆ. ಬಂಗಾಳದಲ್ಲಿ ಧಾರ್ಮಿಕ ಹಿಂಸಾಚಾರ ನಡೆಯುತ್ತಿರುವುದು ವಾಸ್ತವ" ಎಂದು ಸುವೇಂದು ಹೇಳಿದರು.
"ಟಿಎಂಸಿಯ ತುಷ್ಟೀಕರಣ ರಾಜಕೀಯವು ತೀವ್ರಗಾಮಿ ಶಕ್ತಿಗಳಿಗೆ ಧೈರ್ಯ ತುಂಬಿದೆ. ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ನಮ್ಮ ಜನ ತಮ್ಮ ಸ್ವಂತ ಭೂಮಿಯಲ್ಲಿಯೇ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಈ ಕುಸಿತಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸ್ಥಳಾಂತರಗೊಂಡ ಹಿಂದೂಗಳು ಸುರಕ್ಷಿತವಾಗಿ ಮರಳುವಂತೆ ಮತ್ತು ಈ ಜಿಹಾದಿ ಭಯೋತ್ಪಾದಕರಿಂದ ಅವರನ್ನು ರಕ್ಷಿಸಬೇಕೆಂದು ಜಿಲ್ಲೆಯಲ್ಲಿ ನಿಯೋಜಿಸಲಾದ ಕೇಂದ್ರ ಅರೆಸೈನಿಕ ಪಡೆಗಳು, ರಾಜ್ಯ ಪೊಲೀಸರು ಮತ್ತು ಜಿಲ್ಲಾಡಳಿತವನ್ನು ನಾನು ಒತ್ತಾಯಿಸುತ್ತೇನೆ. ಬಂಗಾಳ ಉರಿಯುತ್ತಿದೆ. ಸಾಮಾಜಿಕ ಚೌಕಟ್ಟು ಛಿದ್ರಗೊಂಡಿದೆ. ಇದು ಇಲ್ಲಿಗೆ ನಿಲ್ಲಬೇಕಿದೆ." ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರಂಭದಲ್ಲಿ ಕೆಲ ಜನರು ದೋಣಿಗಳ ಮೂಲಕ ಬರಲಾರಂಭಿಸಿದರು. ಆದರೆ ಶುಕ್ರವಾರ ಮಧ್ಯಾಹ್ನದಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಡಿಯೋನಾಪುರ-ಸೋವಾಪುರ ಗ್ರಾಮ ಪಂಚಾಯತ್ ಮುಖ್ಯಸ್ಥೆ ಸುಲೇಖಾ ಚೌಧರಿ ಹೇಳಿದರು. "ಶನಿವಾರ ರಾತ್ರಿಯವರೆಗೆ 500 ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಮಹಿಳೆಯರು. ಅವರಿಗೆ ಈ ಪ್ರದೇಶದ ಶಾಲೆಗಳಲ್ಲಿ ಆಶ್ರಯ ನೀಡಲಾಗಿದೆ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ" ಎಂದು ಚೌಧರಿ ತಿಳಿಸಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಗಲಭೆಗ್ರಸ್ತ ಜಿಲ್ಲೆಗಳಲ್ಲಿ ಕೇಂದ್ರ ಪಡೆ ನಿಯೋಜಿಸುವಂತೆ ಕೋಲ್ಕತಾ ಹೈಕೋರ್ಟ್ ಆದೇಶ - WEST BENGAL RIOTS