ನವದೆಹಲಿ /ನೋಯ್ಡಾ: ನೋಯ್ಡಾದ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಹೋಶಿಯಾಪುರ್ ಗ್ರಾಮದಲ್ಲಿ ಶಾಹಿ ಪನೀರ್ ನೀಡದಿದ್ದಕ್ಕಾಗಿ ದುಷ್ಕರ್ಮಿಗಳು ಹೋಟೆಲ್ ಮಾಲೀಕರು ಮತ್ತು ಉದ್ಯೋಗಿಗಳಿಗೆ ಥಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಹೋಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಶಾಹಿ ಪನೀರ್ ವಿಚಾರಕ್ಕೆ ಜಗಳ ನಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇತರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೋಟೆಲ್ ಮಾಲೀಕ ಮೋಹನ್ ಶಾ ಅವರು ಮಾತನಾಡಿದ್ದು, 'ಕಳೆದ 6-7 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ತಡರಾತ್ರಿ ನಾವು ಊಟ ಮಾಡುತ್ತಿದ್ದಾಗ ಹುಡುಗರು ಹೋಟೆಲ್‌ಗೆ ಬಂದಿದ್ದರು. ಆ ಹುಡುಗರು ಶಾಹಿ ಪನೀರ್ ಇದೆಯೇ ಎಂದು ಕೇಳಿದರು. ಆಗ ನಾನು ಹೋಟೆಲ್ ಮುಚ್ಚಲಾಗಿದೆ ಎಂದು ಹೇಳಿದೆ. ತದನಂತರ ಅವರು ನನ್ನನ್ನು ನಿಂದಿಸಿ, ಹೊಡೆಯಲು ಪ್ರಾರಂಭಿಸಿದರು. ಅಲ್ಲದೇ, ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಈ ಇಬ್ಬರು ಹುಡುಗರು ಈ ಹಿಂದೆಯೂ ಇದೇ ರೀತಿ ಜನರನ್ನು ಬೆದರಿಸಿ ಉಚಿತವಾಗಿ ಆಹಾರ ಸೇವಿಸಿದ್ದಾರೆ. ಈ ಘಟನೆಯ ನಂತರ ನಾನು ಮತ್ತು ನನ್ನ ಸಿಬ್ಬಂದಿ ತುಂಬಾ ಭಯಗೊಂಡಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.
'ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳಲ್ಲಿ ಒಬ್ಬನಾದ ರವಿ ಯಾದವ್ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಇತರ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ಮುಂದುವರಿದಿದೆ' ಎಂದು ನೋಯ್ಡಾ ಪೊಲೀಸ್ ಠಾಣೆ ಉಸ್ತುವಾರಿ ಕೊತ್ವಾಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಕಲಹ: ರಸ್ತೆಯಲ್ಲೇ ಗರ್ಭಿಣಿ ಪತ್ನಿಯ ಮೇಲೆ ಪತಿಯ ಕ್ರೌರ್ಯ - HUSBAND MURDER ATTEMPT ON WIFE