ಫರೀದಾಬಾದ್: ಮನೆ ಮನೆಗೆ ಹಾಲು ಹಾಕುವವರು ಸೈಕಲ್, ಬೈಕ್ ಅಥವಾ ಸಣ್ಣ ವಾಹನದಲ್ಲಿ ಬರುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಲಕ್ಷಾಂತರ ಬೆಲೆಯ ಐಷಾರಾಮಿ ಆಡಿ ಕಾರಿನಲ್ಲಿ ಮನೆ ಮನೆಗೆ ತೆರಳಿ ಹಾಲು ಹಾಕ್ತಾರೆ!. ಹೌದು, ಇದು ಅಚ್ಚರಿ ಅನಿಸಿದರೂ ಸತ್ಯ. ಹರಿಯಾಣದ ಪರಿದಾಬಾದ್ನಲ್ಲಿ ಸದ್ಯ ಇವರು 'ಆಡಿ ಮಿಲ್ಕ್ ಮ್ಯಾನ್' ಅಂತಾ ಫೇಮಸ್ ಆಗಿದ್ದಾರೆ.
ಈ ಮಿಲ್ಕ್ ಮ್ಯಾನ್ ಹೆಸರು ಅಮಿತ್ ಭಡಾನಾ. ನಿತ್ಯ ಆಡಿ ಕಾರಿನಲ್ಲಿ ಹಾಲಿನ ಕ್ಯಾನ್ಗಳನ್ನಿಟ್ಟುಕೊಂಡು ಮನೆ ಮನೆಗೆ ತೆರಳಿ ಹಾಲು ಹಾಕ್ತಾರೆ. ಸಾಮಾನ್ಯವಾಗಿ ಗ್ರಾಹಕರಿಗಾಗಿ ಹಾಲಿನವರು ಮನೆ ಮುಂದೆ ಕಾಯ್ತಾರೆ. ಆದರೆ ಇಲ್ಲಿ ಆಡಿ ಕಾರು ಮತ್ತು ಅಮಿತ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಆಡಿ ವಾಲಾ ಮಿಲ್ಕ್ ಮ್ಯಾನ್ಗಾಗಿ ಜನ ಕಾಯ್ತಾರೆ. ಹಾಲು ತೆಗೆದುಕೊಳ್ಳಲು ಬರುವ ಜನರು ಆಡಿ ಜೊತೆಗೊಂದು ಫೋಟೋ ಕ್ಲಿಕ್ಕಿಸಿಕೊಂಡು ಹೋಗ್ತಾರೆ.
ಬ್ಯಾಂಕ್ ಕೆಲಸ ಬಿಟ್ಟು ಹಾಲು ಮಾರಾಟ: ಪದವಿ ಶಿಕ್ಷಣದ ಬಳಿಕ ನಿರೀಕ್ಷೆಯಂತೆ ಅಮಿತ್ಗೆ ಉತ್ತಮ ಸಂಬಳದ ಬ್ಯಾಂಕ್ ಕೆಲಸ ಸಿಕ್ಕಿತ್ತು. ಆದರೆ ಮೊದಲಿನಿಂದಲೂ ಬೈಕ್ ಮತ್ತು ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದ ಅಮಿತ್ಗೆ ಬ್ಯಾಂಕ್ ಕೆಲಸ ಖುಷಿ ಕೊಡಲಿಲ್ಲ. ಇದರಿಂದಾಗಿ ಆ ಕೆಲಸಕ್ಕೆ ಗುಡ್ಬೈ ಹೇಳಿ ತಮ್ಮ ಕುಟುಂಬ ನಡೆಸುತ್ತಿದ್ದ ಹಾಲಿನ ವ್ಯಾಪಾರಕ್ಕೆ ಇಳಿದಿದ್ದರು. ಹಾಲು ಮಾರಾಟದಲ್ಲಿ ತಮ್ಮ ಕೌಶಲ್ಯ ಬಳಸಿ ಉತ್ತಮ ಸಂಪಾದನೆ ಮಾಡಿ, ಆರ್ಥಿಕವಾಗಿ ಸದೃಢರಾಗಿದ್ದಾರೆ. ಇದರ ಪರಿಣಾಮವಾಗಿ ತಮ್ಮ ಇಷ್ಟದ ಬೈಕ್ ಮತ್ತು ಕಾರುಗಳನ್ನು ಖರೀದಿಸಿದ್ದಾರೆ.

ಕೋಟಿ ಬೆಲೆಯ ಆಡಿ ಕಾರಲ್ಲಿ ಹಾಲು ಮಾರಾಟ: ಮೊದಲು ಲಕ್ಷಾಂತರ ಬೆಲೆಯ ಹ್ಯಾರ್ಲೆ ಡೆವಿಡ್ ಸನ್ ಬೈಕ್ನಲ್ಲಿ ಅಮಿತ್ ಹಾಲು ಮಾರಾಟ ಮಾಡುತ್ತಿದ್ದರು. ಆಗ ಇವರು ಹಾರ್ಲೆ ಡೇವಿಡ್ ಸನ್ ಮಿಲ್ಕ್ ಮ್ಯಾನ್ ಎಂದು ಖ್ಯಾತಿ ಗಳಿಸಿದ್ದರು. ಇದೀಗ ಅವರು ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸಿ ಇತ್ತೀಚೆಗೆ 1 ಕೋಟಿ ಬೆಲೆಯ ಆಡಿ ಕಾರು ಖರೀದಿಸಿದ್ದಾರೆ. ಇದೇ ಕಾರಿನಲ್ಲಿ ಹಾಲಿನ ಕ್ಯಾನ್ಗಳನ್ನು ಇಟ್ಟುಕೊಂಡು ನಿತ್ಯ ಮನೆ ಮನೆಗೆ ತೆರಳಿ ಹಾಲು ಮಾರಾಟ ಮಾಡ್ತಾರೆ. ಇದರಿಂದಾಗಿ ಆಡಿ ಮಿಲ್ಕ್ ಮ್ಯಾನ್ ಎಂದು ಸುದ್ದಿಯಾಗಿದ್ದಾರೆ. ಈ ಮೂಲಕ ಈ ಭಾಗದಲ್ಲಿ ಇವರು ಸೆಲಿಬ್ರೆಟಿಯಂತಾಗಿದ್ದಾರೆ.
"ಬಾಲ್ಯದಿಂದಲೂ ಬೈಕ್ ಮತ್ತು ಕಾರುಗಳ ಬಗ್ಗೆ ಹೆಚ್ಚು ಪ್ರೀತಿ ಇತ್ತು. ಆದ್ದರಿಂದ ಕೆಲಸಕ್ಕೆ ಸೇರಿದ ಬಳಿಕ ಇಷ್ಟದ ಬೈಕ್ ಮತ್ತು ಕಾರು ಖರೀದಿಸಬೇಕೆಂದಿದ್ದೆ. ಆದರೆ ಆ ಹಣದಲ್ಲಿ ಸಾಧ್ಯವಾಗಲಿಲ್ಲ. ಇದರಿಂದ ಬೇಜಾರಿ ಆ ಕೆಲಸ ಬಿಟ್ಟೆ. ಬಳಿಕ ನಮ್ಮ ಕುಟುಂಬ ನಿರ್ವಹಿಸುತ್ತಿದ್ದ ಹಾಲಿನ ವ್ಯಾಪಾರವನ್ನೇ ಪ್ಯಾಷನ್ ಮತ್ತು ಪ್ರೊಪೆಷನ್ ಮಾಡಿಕೊಂಡು ನನ್ನ ಆಸೆಗಳನ್ನು ಈಡೇರಿಸಿಕೊಂಡಿದ್ದೇನೆ" ಅಂತಾ ಈಟಿವಿ ಭಾರತ ಜೊತೆ ಅಮಿತ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಅಮಿತ್ ಅವರು ತಮ್ಮ ಹ್ಯಾರ್ಲೆ ಡೆವಿಡ್ಸನ್ ಬೈಕ್ನಲ್ಲಿ ಹಾಲು ಮಾರಾಟ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಕೆಲವೇ ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ಜನರ ಗಮನ ಸೆಳೆದಿದೆ. ಈ ಮೂಲಕವೂ ಇವರು ಇಲ್ಲಿ ಸುದ್ದಿಯಾಗಿದ್ದಾರೆ.
ಪ್ರೊಪೆಷನ್ ಜೊತೆ ಪ್ಯಾಷನ್: ಹಾಲು ಮಾರಾಟದ ಬಗ್ಗೆ ಎಂದಿಗೂ ಇವರು ಕೀಳರಿಮೆ ಪಟ್ಟುಕೊಂಡಿಲ್ಲ. ಈ ಕೆಲಸವನ್ನು ವೃತ್ತಿಯಾಗಿಸಿಕೊಂಡು ಅದರಲ್ಲೇ ಉತ್ಕೃಷ್ಟತೆ ಮೆರೆದು ಯಶಸ್ವಿಯಾಗಿದ್ದಾರೆ. 'ಕಾರು ಡ್ರೈವ್ ಮಾಡುವುದು ನನ್ನ ಹವ್ಯಾಸ. ಸದ್ಯ ನನ್ನ ಕುಟುಂಬದ ವ್ಯಾಪಾರದ ಜೊತೆ ನನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿರುವೆ' ಅಂತಾರೆ ಅಮಿತ್.

ಯಾವುದೇ ಕೆಲಸ ಚಿಕ್ಕದು ಮತ್ತು ದೊಡ್ಡದಲ್ಲ. ಶ್ರದ್ಧೆಯಿಂದ ಶ್ರಮಪಟ್ಟರೆ ನಮ್ಮ ಎಲ್ಲ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಅನ್ನೋದು ಅಮಿತ್ ಅವರ ಮಾತಾಗಿದೆ. ಕುಟುಂಬಸ್ಥರು ಕೂಡ ಅಮಿತ್ ಅವರಿಗೆ ಈ ಕೆಲಸ ಮಾಡಲು ಸಂಪೂರ್ಣ ಬೆಂಬಲ ನೀಡಿದ್ದಾರೆ. ಸದ್ಯ ಇಂದಿನ ಬೆಳವಣಿಗೆಯಿಂದ ಕುಂಟುಂಬಸ್ಥರು ಹೆಮ್ಮೆ ಪಡುತ್ತಿದ್ದಾರೆ.
ಗ್ರಾಹಕರು ಹೇಳೋದೇನು?: "ಮದುವೆಯಾಗಿ ನಾನು ಬಂದಾಗಿನಿಂದ ಕಳೆದ 13 ವರ್ಷಗಳಿಂದ ಹಾಲು ಖರೀದಿಸುತ್ತಿದ್ದೇನೆ. ಪ್ರತಿ ದಿನ ಅಮಿತ್ ಮನೆ ಮನೆಗೆ ಬಂದು ಹಾಲು ಕೊಡ್ತಾರೆ. ಈ ಮೊದಲು ಅವರು ಲಕ್ಷಾಂತರ ಬೆಲೆಯ ಬೈಕ್ನಲ್ಲಿ ಬರುತ್ತಿದ್ದರು. ಈಗ ಕೋಟಿ ಬೆಲೆಯ ಆಡಿ ಕಾರಿನಲ್ಲಿ ಆಗಮಿಸುತ್ತಾರೆ" ಎಂದು ಗ್ರಾಹಕರಾದ ನೀತಿ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಯಾವುದೇ ಕೀಳರಿಮೆ ಇಲ್ಲದೇ ಆಡಿ ಕಾರಿನಲ್ಲಿ ಹಾಲು ಮಾರಾಟ ಮಾಡುತ್ತಿರುವ ಅಮಿತ್ ಫರೀದಾಬಾದ್ನಲ್ಲಿ ಫೇಮಸ್ ಆಗಿದ್ದಾರೆ. ಜನರು ಇವರ ಜೊತೆ ಮತ್ತು ಕಾರಿನ ಜೊತೆ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಮಿಲ್ಕ್ ಮ್ಯಾನ್: ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವ ಡೈರಿ ಉದ್ಯಮಿ