ಚಂಡೀಗಢ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಬ್ಯೂರೋ ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ತೀವ್ರ ವಿಚಾರಣೆ ಆರಂಭಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿರುವ ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ, ಕೇಂದ್ರೀಯ ಸಂಸ್ಥೆಗಳು ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ಜ್ಯೋತಿ ಅವರ ಪ್ರಯಾಣದ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆ ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳಿಗೆ ಭೇಟಿ ನೀಡಿರುವುದು ತಿಳಿದುಬಂದಿದೆ. ಯಾವೆಲ್ಲಾ ದೇಶಗಳಿಗೆ ಭೇಟಿ ನೀಡಿದ್ದಾರೆ. ಯಾವಾಗ, ಯಾಕೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಯೂಟ್ಯೂಬರ್ನ ಆದಾಯದ ಮೂಲಗಳು, ವಿದೇಶಿ ಪ್ರಯಾಣ, ಅವರ ಹಣಕಾಸಿನ ವಹಿವಾಟುಗಳ ಮೇಲೂ ನಿಗಾ ವಹಿಸಲಾಗಿದೆ. ಜ್ಯೋತಿ ಅವರ ಲ್ಯಾಪ್‌ಟಾಪ್ ಅನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ನೀಡಲಾಗಿದೆ. ಯಾರೊಂದಿಗೆಲ್ಲಾ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜ್ಯೋತಿ ಪಾಕ್ನ ಆಸ್ತಿ: ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಜ್ಯೋತಿ ಅವರನ್ನು ತಮ್ಮ 'ಆಸ್ತಿ'ಯಾಗಿ ಬೆಳೆಸಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮತ್ತು ಭಾರತ- ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷದ ವೇಳೆ ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಭಾನುವಾರ ತಿಳಿಸಿದ್ದರು.
ಜ್ಯೋತಿ ಅವರಿಗೆ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಗೆ ನೇರ ಸಂಬಂಧವಿಲ್ಲದಿದ್ದರೂ, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕದಲ್ಲಿರುವ ಸಾಧ್ಯತೆ ಹೆಚ್ಚಿದೆ. ಇದು ಕೇವಲ ಗಡಿಗಳಲ್ಲಿ ನಡೆಯುವ ನೇರ ಯುದ್ಧವಲ್ಲದೆ, ಭಾರತದ ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ನೇಮಿಸಿಕೊಂಡು ಪಾಕ್ ಆಂತರಿಕವಾಗಿಯೇ ಯುದ್ಧ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಪಹಲ್ಗಾಮ್ ದಾಳಿಗೂ ಮೊದಲು ಪಾಕಿಸ್ತಾನಕ್ಕೆ ಭೇಟಿ: ಪಹಲ್ಗಾಮ್ ದಾಳಿಗೂ ಮೊದಲು ಜ್ಯೋತಿ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು ಆಕೆ ಪಾಕಿಸ್ತಾನಕ್ಕೆ ತೆರಳಿದ್ದರು. ಈ ಭೇಟಿಗಳ ನಡುವಿನ ಲಿಂಕ್ ಏನೆಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ.ಬಂಗಾಳದ ಸೂಕ್ಷ್ಮ ಪ್ರದೇಶಗಳಿಗೂ ಭೇಟಿ ನೀಡಿದ್ಧ ಬಂಧಿತ ಜ್ಯೋತಿ!: ತನಿಖೆಯಿಂದ ಆಘಾತಕಾರಿ ಸಂಗತಿಗಳು ಬೆಳಕಿಗೆ