ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಭಾನುವಾರ ಡ್ರೋನ್ಗಳ ಕಂಡುಬಂದಿವೆ ಮತ್ತು ಉಧಂಪುರದಲ್ಲಿ ಸ್ಫೋಟ ಶಬ್ಧ ಕೇಳಿಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸುಳ್ಳು ಎಂದು ಭಾನುವಾರ ಸರ್ಕಾರ ಸ್ಪಷ್ಟಪಡಿಸಿದೆ.
"ಉಧಂಪುರದಲ್ಲಿ ಭಾರೀ ಸ್ಫೋಟಗಳ ಸದ್ದು ಕೇಳಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲ ವದಂತಿಗಳು. ಇದು ಸುಳ್ಳು. ಉಧಂಪುರದಲ್ಲಿ ಯಾವುದೇ ಸ್ಫೋಟಗಳು ಸಂಭವಿಸಿಲ್ಲ" ಎಂದು ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕ್ ಘಟಕವು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
ಭಯ ಹುಟ್ಟುಹಾಕಲು ಈ ವದಂತಿಗಳನ್ನು ಹರಡಲಾಗುತ್ತಿದೆ ಮತ್ತು ನಿಖರವಾದ ಮಾಹಿತಿಗಾಗಿ ಜನರು ಅಧಿಕೃತ ಸರ್ಕಾರಿ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಪಿಐಬಿ ಮನವಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಡ್ರೋನ್‌ಗಳು ಕಂಡುಬಂದಿವೆ ಎಂಬುದು "ಸುಳ್ಳು" ಎಂದು ಪಿಐಬಿಯ ಸತ್ಯ ಪರಿಶೀಲನಾ ಘಟಕವು ತಿಳಿಸಿದೆ. "ಇದು ಸುಳ್ಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಡ್ರೋನ್ ಚಟುವಟಿಕೆ ಇಲ್ಲ" ಎಂದು ಪಿಐಬಿ ಎಕ್ಸ್‌ನಲ್ಲಿ ಹೇಳಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಮಾಹಿತಿ ಪೋಸ್ಟ್ ಆಗುತ್ತಿದೆ.
ಭಯೋತ್ಪಾದಕರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದೊಳಗಿನ ಭಯೋತ್ಪಾದಕ ತಾಣಗಳ ಮೇಲೆ ಆಪರೇಷನ್ ಸಿಂಧೂರ ಮೂಲಕ ದಾಳಿ ನಡೆಸಿದ್ದವು. ಬಳಿಕ ಲಡಾಖ್‌ನ ಲೇಹ್‌ನಿಂದ ಗುಜರಾತ್‌ನ ಭುಜ್‌ವರೆಗಿನ ಸ್ಥಳಗಳಲ್ಲಿ ಗಡಿಯುದ್ದಕ್ಕೂ ಭಾರತದೊಳಗೆ ಡ್ರೋನ್ ದಾಳಿಗೆ ಪಾಕ್ ಯತ್ನಸಿತ್ತು. ಆದರೆ ಭಾರತ ವಿಫಲಗೊಳಿಸಿತ್ತು.
ಬಳಿಕ ಭಾರತವುಪಾಕಿಸ್ತಾನದ ಸೇನಾ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಕದನ ವಿರಾಮ ಒಪ್ಪಂದಕ್ಕೆ ಪಾಕಿಸ್ತಾನ ಮಾತುಕತೆಗೆ ಮುಂದಾಗಿತ್ತು. ಇದರಿಂದಾಗಿ ಉಭಯ ದೇಶಗಳು ಕದನ ವಿರಾಮಕ್ಕೆ ಸಮ್ಮತಿ ನೀಡಿದ್ದವು. ಈ ಒಪ್ಪಂದ ಬಳಿಕ ಕೆಲ ಗಂಟೆಗಳ ಕಾಲ ಜಮ್ಮು ಕಾಶ್ಮೀರ, ಗುಜರಾತ್‌ನ ಕಛ್ ಸೇರಿ ಕೆಲವೆಡೆ ಡ್ರೋನ್ ದಾಳಿ ನಡೆದಿತ್ತು. ಆದರೆ ಇದನ್ನು ಭಾರತ ಹೊಡೆದುರುಳಿಸಿತ್ತು. ಜತೆಗೆ ಒಪ್ಪಂದ ಉಲ್ಲಂಘಿಸಿದರೆ ಕಠಿಣ ಕ್ರಮದ ಬಗ್ಗೆ ಪಾಕ್ಗೆ ಭಾರತ ಎಚ್ಚರಿಕೆಯ ಸಂದೇಶ ರವಾನಿಸಿತ್ತು.
ಇದನ್ನೂ ಓದಿ: 'ಕರಾಚಿ ಬಂದರು ಸೇರಿ ಪಾಕ್ನ ಸೇನಾ ಶಿಬಿರಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಭಾರತೀಯ ನೌಕಾ ಪಡೆ ಹೊಂದಿತ್ತು'