ಗುವಾಹಟಿ(ಅಸ್ಸಾಂ): ಅಸ್ಸಾಂನಾದ್ಯಂತ ಹೊಸ ವರ್ಷದ ಆಗಮನವನ್ನು ಗುರುತಿಸುವ ರೊಂಗಾಲಿ ಬಿಹುವನ್ನು ಆಚರಿಸಲಾಗುತ್ತಿದೆ. ಬೋಹಾಗ್ ಬಿಹು ಎಂದೂ ಕರೆಯಲ್ಪಡುವ ಈ ಹಬ್ಬವನ್ನು ಇಲ್ಲಿ ಕೇವಲ ಕಾಲೋಚಿತ ಆಚರಣೆಯಲ್ಲದೇ ಸಾಂಸ್ಕೃತಿಕ ಹಾಗೂ ಪರಂಪರೆಯ ಹೆಮ್ಮೆಯ ಪ್ರತೀಕವಾಗಿ ಆಚರಿಸುತ್ತಾರೆ.
ಅಸ್ಸಾಂನ ದೊಡ್ಡ ಹಬ್ಬಗಳಲ್ಲಿ ಇದೂ ಒಂದು. ಈ ಹಬ್ಬ ಸುಗ್ಗಿಯ ಅವಧಿಯ ಆರಂಭವನ್ನು ಸೂಚಿಸುತ್ತದೆ. ಜೋರ್ಹತ್ ಜಿಲ್ಲೆಯ ಮೊನೈಮಾಝಿ ಎಂಬ ಗ್ರಾಮ ಕೂಡ ಇದಕ್ಕೆ ಹೊರತಾಗಿಲ್ಲ. ಬೋಹಾಗ್ ಬಿಹು ಅಥವಾ ರೊಂಗಾಲಿ ಬಿಹು ಎಂದು ಕರೆಯಲ್ಪಡುವ ಈ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸೇರಿ ಆಚರಿಸುತ್ತಿರುವುದು ಇಲ್ಲಿನ ವಿಶೇಷ.

ಸಂತೋಷ, ಪ್ರೀತಿ ಮತ್ತು ಒಗ್ಗಟ್ಟನ್ನು ಬಿಂಬಿಸುವ ರೊಂಗಾಲಿ ಬಿಹು ಹಬ್ಬದ ನಿಮಿತ್ತ ಹಸುವಿನ ಪೂಜೆ ಸಲ್ಲಿಸುವುದು ರೂಢಿಗತ ಸಂಪ್ರದಾಯ. ವಸಂತಕಾಲದ ಆಗಮನ ಮತ್ತು ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುವ ಹಬ್ಬ ಇದಾಗಿದ್ದರಿಂದ ಬೆಳಗ್ಗೆಯೇ ಗ್ರಾಮಸ್ಥರು ತಮ್ಮ ಹಸು ಮತ್ತು ಎತ್ತುಗಳನ್ನು ಹತ್ತಿರದ ನದಿಗಳಿಗೆ ಕರೆದೊಯ್ದು ಅರಿಶಿನ ಮತ್ತು ಕರಿಬೇವಿನ ಪೇಸ್ಟ್‌ನಿಂದ ಸ್ನಾನ ಮಾಡಿಸುತ್ತಾರೆ. ಸ್ನಾನದ ಬಳಿಕ ಅವುಗಳಿಗೆ ಸೋರೆಕಾಯಿ, ಬದನೆಕಾಯಿ ಮತ್ತು ಇತರ ತರಕಾರಿಗಳಿಂದ ಮಾಡಿದ ಹಾರದಿಂದ ಅಲಂಕರಿಸುತ್ತಾರೆ. ಮಹಿಳೆಯರು, ಯುವತಿಯರು, ಮಕ್ಕಳು ಹೊಸ ಹೊಸ ಉಡುಗೆ ತೊಡುವ ಮೂಲಕ ಸಾಂಪ್ರದಾಯಿಕ ಹಾಡುಗಳನ್ನು ಹಾಡಿ ಹಬ್ಬಕ್ಕೆ ಮೆರುಗು ತರುತ್ತಾರೆ. ಅವರ ಹಾಡುಗಳಿಗೆ ತಕ್ಕಂತೆ ಪುರುಷರು ಡೋಲ್, ಪೆಪ್ಪಾ ಮತ್ತು ಟೋಕಾ ನುಡಿಸುವ ಮೂಲಕ ಅವರಿಗೆ ಸಾಥ್ ನೀಡುತ್ತಾರೆ. ಹಸುಗಳನ್ನು ಸ್ನಾನ ಮಾಡಿಸಿದ ನಂತರ, ಅವುಗಳಿಗೆ ಪಿಠಾ, ಬೆಲ್ಲ ಮತ್ತು ಹಸಿರು ಹುಲ್ಲು ತಿನ್ನಿಸುತ್ತಾರೆ.
ಮೊನೈಮಾಝಿ ಗ್ರಾಮದಲ್ಲಿ ನಡೆಯುವ ಈ ಹಬ್ಬವು ಅಸ್ಸಾಂನ ಕೃಷಿ ಸಂಪ್ರದಾಯ ಮತ್ತು ಸಮುದಾಯದ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ, ಮುಂದಿನ ಪೀಳಿಗೆಗಳನ್ನು ಸಾಂಪ್ರದಾಯಿಕ ಪರಂಪರೆ ಮತ್ತು ಸಂತೋಷದೊಂದಿಗೆ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಇಂದು, ಜೋರ್ಹತ್ ನದಿ ದಂಡೆಯಲ್ಲಿ ಆಯೋಜಿಸಲಾದ ಬೋಹಾಗ್ ಬಿಹು ನೋಡಲು ವಿದೇಶಿ ಪ್ರವಾಸಿಗರು ಕೂಡ ಆಗಮಿಸಿದ್ದರು. ಸ್ವೀಡನ್‌ನ ಪ್ರವಾಸಿ ದಂಪತಿ ಅಸ್ಸಾಮಿ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಕಂಡು ಖುಷಿ ವ್ಯಕ್ತಪಡಿಸಿದರು.

"ಬೋಹಾಗ್ ಬಿಹುವಿನ ಭಾಗಿಯಾಗಲು ನನಗೆ ಖುಷಿ ಆಗಿದೆ. ಇದು ನನ್ನ ಎರಡನೇ ಭೇಟಿ. ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು, ವಿಶೇಷವಾಗಿ ಬಿಹು ಸಂಪ್ರದಾಯವನ್ನು ಆನಂದಿಸುತ್ತಿದ್ದೇನೆ" ಎಂದು ಸ್ವೀಡನ್‌ನಿಂದ ಬಂದ ಅನ್ನಾ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ದಿನವನ್ನು ವಿಶೇಷವಾಗಿ ಜಾನುವಾರುಗಳಿಗೆ ಸಮರ್ಪಿಸಲಾಗುತ್ತದೆ. ಹಸು ಮತ್ತು ಎತ್ತುಗಳನ್ನು ತೊಳೆದು, ಅಲಂಕರಿಸಿ, ಗೌರವದ ಸಂಕೇತವಾಗಿ ಪೂಜಿಸಲಾಗುತ್ತದೆ. ಅಸ್ಸಾಂನ ಜನರು ಬೊಹಾಗ್ ಬಿಹು ಎಂದೂ ಕರೆಯಲ್ಪಡುವ ರೊಂಗಾಲಿ ಬಿಹುವನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ರೊಂಗಾಲಿ ಬಿಹು ಅಸ್ಸಾಂನಲ್ಲಿ ನಡೆಯುವ ಅತಿ ದೊಡ್ಡ ಮತ್ತು ಪ್ರಮುಖ ಹಬ್ಬವಾಗಿದ್ದು, ಇದು ಅಸ್ಸಾಮಿ ಹೊಸ ವರ್ಷ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

"ಇದು ಸಾಮಾನ್ಯವಾಗಿ ಏಳು ದಿನಗಳ ಕಾಲ ನಡೆಯುತ್ತದೆ. ಗೋರು ಬಿಹುವಿನಿಂದ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಂಗೀತ, ನೃತ್ಯ, ಸಾಂಪ್ರದಾಯಿಕ ಆಹಾರ ಮತ್ತು ಸಂಬಂಧಿಕರ ಭೇಟಿಗಳನ್ನು ಒಳಗೊಂಡಿರುತ್ತದೆ. ಇದು ಅಸ್ಸಾಂನಲ್ಲಿ ಶ್ರೀಮಂತ ಸಂಸ್ಕೃತಿ ಮತ್ತು ಏಕತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಅತಿ ದೊಡ್ಡ ಹಬ್ಬವಾಗಿದೆ. ಗೋರು ಬಿಹು ಎಂದು ಕರೆಯಲ್ಪಡುವ ಮೊದಲ ದಿನ, ನಾವು ಅರಿಶಿನ ಮತ್ತು ಕರಿಬೇವಿನ ಪೇಸ್ಟ್ ಬಳಸಿ ಹಸುಗಳನ್ನು ತೊಳೆದು ಪೂಜಿಸುತ್ತೇವೆ. ಅದರ ನಂತರ, ಕುಟುಂಬದ ಎಲ್ಲರೂ ಸ್ನಾನ ಮಾಡಿ ಅರಿಶಿನವನ್ನು ಹಚ್ಚುತ್ತೇವೆ. ನಮ್ಮ ಹಿರಿಯರಿಗೂ ಗೌರವ ಅರ್ಪಿಸುತ್ತೇವೆ. ಪಿಠಾ ಮತ್ತು ಮೊಸರಿನಂತಹ ಸಾಂಪ್ರದಾಯಿಕ ಆಹಾರ ಇರುತ್ತದೆ" ಎಂದು ಅಸ್ಸಾಂನ ಸ್ಥಳೀಯ ವಿಪುಲ್ ಶರ್ಮಾ ಎಂಬುವರು ಈ ಹಬ್ಬದ ವಿಶೇಷತೆ ಬಗ್ಗೆ ತಿಳಿಸಿಕೊಟ್ಟರು.
ಇದನ್ನೂ ಓದಿ: ಉರ್ದು ಭಾಷೆಗೆ 'ರಾಮಾಯಣ'ವನ್ನು ಅನುವಾದಿಸಿದ ಹಿಂದೂ ವ್ಯಕ್ತಿ; ಇದು 14 ವರ್ಷಗಳ ಪರಿಶ್ರಮ - RAMAYANA IN URDU