ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ED) ಗುರುತರ ಆರೋಪಗಳನ್ನು ಮಾಡಿದೆ. ಇಬ್ಬರೂ 142 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಇಡಿ ಹೇಳಿದೆ.
ದೆಹಲಿಯ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ನಡೆದ ವಿಚಾರಣೆಯ ವೇಳೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕರ ವಿರುದ್ಧ ಈ ಆರೋಪಗಳನ್ನು ಮಾಡಿತು. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಸಂಬಂಧಿಸಿದ ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿನ ಕಟ್ಟಡಗಳ ಮೇಲೆ ನೋಟಿಸ್ ಅಂಟಿಸಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ವಶಪಡಿಸಿಕೊಂಡ ಆಸ್ತಿಗಳನ್ನು ಮರುಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಇಡಿ ತಿಳಿಸಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ವಿದೇಶಿ ನಿಧಿಯಿಂದ ಹಣಕಾಸು ಒದಗಿಸಲಾಗಿದೆ ಎಂಬ ದೂರಿನ ಕುರಿತು ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ. ಇದರಲ್ಲಿ ಸಿಬಿಐ ತನಿಖೆ ಸ್ಥಗಿತಗೊಂಡಿದ್ದರೂ, ಇಡಿ ತನಿಖೆ ಮುಂದುವರೆದಿದೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಗೆ ಸೇರಿದ 751.9 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯವು ಕ್ರಮಗಳನ್ನು ಪ್ರಾರಂಭಿಸಿದೆ.
ಇವುಗಳನ್ನು ನವೆಂಬರ್ 2023 ರಲ್ಲಿ ಮುಟ್ಟುಗೋಲು ಹಾಕಿಕೊಂಡು, ಸಂಬಂಧಿತರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಕಟ್ಟಡಗಳ ಬಾಡಿಗೆ ಪಡೆದವರು, ಅದರ ಮೊತ್ತವನ್ನು ಇಡಿಗೇ ಪಾವತಿಸಬೇಕು ಎಂದು ಸೂಚಿಸಲಾಗಿದೆ.
ಏನಿದು ಪ್ರಕರಣ? ನ್ಯಾಷನಲ್ ಹೆರಾಲ್ಡ್ 1938 ರಲ್ಲಿ ಜವಾಹರಲಾಲ್ ನೆಹರು ಸ್ಥಾಪಿಸಿದ ಪತ್ರಿಕೆಯಾಗಿದೆ. 2012 ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಈ ಪತ್ರಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಕಂಪನಿಯಲ್ಲಿ ಹಣದ ಅಕ್ರಮ ವರ್ಗಾವಣೆಯನ್ನು ಜಾರಿ ನಿರ್ದೇಶನಾಲಯ ಗುರುತಿಸಿದೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಂಬಂಧ ಹೊಂದಿರುವ ಯಂಗ್ ಇಂಡಿಯನ್ ಖಾಸಗಿ ಕಂಪನಿಯು ಎಜೆಎಲ್ ಸಂಸ್ಥೆಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಕೇವಲ 50 ಲಕ್ಷ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ವೈಐಎಲ್ನಲ್ಲಿ ರಾಹುಲ್ ಗಾಂಧಿ ಶೇಕಡಾ 38 ರಷ್ಟು ಮತ್ತು ಸೋನಿಯಾ ಶೇಕಡಾ 38 ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಎಜೆಎಲ್‌ನ ಶೇಕಡಾ 99 ರಷ್ಟು ಷೇರುಗಳನ್ನು ಯಂಗ್ ಇಂಡಿಯನ್ ಲಿಮಿಟೆಡ್‌ಗೆ ವರ್ಗಾಯಿಸಲಾಗಿದೆ. ಈ ವಹಿವಾಟು ಹಣ ಅಕ್ರಮ ವರ್ಗಾವಣೆಯ ಭಾಗವಾಗಿದೆ ಎಂಬುದು ಇಡಿಯ ಪ್ರಮುಖ ಆರೋಪವಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ, 2021 ರಲ್ಲಿ ಅಧಿಕೃತವಾಗಿ ತನಿಖೆ ಆರಂಭಿಸಿತು. ಏಪ್ರಿಲ್ 9, 2025 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಈ ಪ್ರಕರಣದಲ್ಲಿ ಇಡಿ ಸೋನಿಯಾ ಗಾಂಧಿ ಅವರನ್ನು ಎ1 ಮತ್ತು ರಾಹುಲ್ ಗಾಂಧಿ ಅವರನ್ನು ಎ2 ಎಂದು ಹೆಸರಿಸಿದೆ. ಸ್ಯಾಮ್ ಪಿತ್ರೋಡಾ ಮತ್ತು ಸುಮನ್ ದುಬೆ ಅವರಂತಹ ಕಾಂಗ್ರೆಸ್ ನಾಯಕರು ಕೂಡ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಕೆ
ನ್ಯಾಷನಲ್ ಹೆರಾಲ್ಡ್ ಕೇಸ್: ಚಾರ್ಜ್ಶೀಟ್ನಲ್ಲಿ ರಾಹುಲ್, ಸೋನಿಯಾ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿ ಪ್ರತಿಭಟನೆ