ಹತ್ತಿ ಹೊಲದಿಂದ ಡಿಎಸ್ಪಿ ಹುದ್ದೆಗೆ! ಬಡತನ ಮೆಟ್ಟಿ ನಿಂತ ಪಂಕ್ಚರ್ ಅಂಗಡಿಯಾತನ ಮಗಳು
ಸಣ್ಣ ಪಟ್ಟಣದ ಹುಡುಗಿ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಮೌನಿಕಾರ ಯಶಸ್ಸಿನ ಪಯಣವು ಪರಿಶ್ರಮ, ದೃಢನಿಶ್ಚಯ ಮತ್ತು ಕೌಟುಂಬಿಕ ಬೆಂಬಲದ ಶಕ್ತಿಯನ್ನು ತೋರಿಸುತ್ತದೆ. ಡಿಎಸ್ಪಿ ಅಲ್ಲೆಪು ಮೌನಿಕಾ ಅವರ ಯಶಸ್ಸಿನ ಹಾದಿ ಹೀಗಿದೆ.

Published : October 10, 2025 at 2:38 PM IST
ಮುಲುಗು(ತೆಲಂಗಾಣ): "ನಾವು ವಿದ್ಯಾವಂತರಲ್ಲ ಮಗಳೇ. ನಿನ್ನ ಬದುಕು ನಮ್ಮಂತೆ ಆಗುವುದು ಬೇಡ. ನೀನು ಉನ್ನತ ಕೆಲಸ ಸಾಧಿಸಬೇಕು". ಹೆತ್ತವರ ಈ ಮಾತುಗಳು ತೆಲಂಗಾಣದ ಯುವತಿ ಅಲ್ಲೆಪು ಮೌನಿಕಾರ ದೃಢಸಂಕಲ್ಪಕ್ಕೆ ಉತ್ತೇಜನ ನೀಡಿದವು. ಹೊಲದಲ್ಲಿ ಕುಟುಂಬದೊಂದಿಗೆ ಹತ್ತಿ ಕೀಳುತ್ತಿದ್ದ ಮೌನಿಕಾ ಈಗ, ಶ್ರಮಪಟ್ಟು ಸ್ವಂತ ಬಲದಿಂದ ಓದಿ ಹೆಮ್ಮೆಯ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಹುದ್ದೆಗೇರುವ ಮೂಲಕ ಪೋಷಕರ ಕನಸನ್ನು ನನಸು ಮಾಡಿದ್ದಾರೆ.
ಬಡತನದಿಂದ ಬೆಳೆದು ಬಂದ ಮೌನಿಕಾರ ಸಾಧನೆಯನ್ನು ಕಂಡು ಸುತ್ತಮುತ್ತಲಿನ ಜನರೆಲ್ಲರೂ ಪ್ರಶಂಸೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಜೀವನದಲ್ಲಿ ಯಶಸ್ಸು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ, ಅದನ್ನು ಕಷ್ಟಪಟ್ಟು, ಇಟ್ಟ ಗುರಿಯನ್ನು ಶೃದ್ಧೆ, ಶ್ರಮದಿಂದ ಗಳಿಸಬೇಕು. ನಮಗೆ ಎದುರಾಗುವ ಅಡೆತಡೆಗಳನ್ನು ಮೆಟ್ಟಿನಿಂತು, ಬಡತನವನ್ನು ತೊಡೆದು, ಅಚಲ ಪರಿಶ್ರಮ ವಹಿಸಿದರೆ ಬದುಕಿನಲ್ಲಿ ಎಲ್ಲವೂ ಸಾಧ್ಯ ಎಂಬುದಕ್ಕೆ ಮೌನಿಕಾರ ಯಶೋಗಾಥೆಯೇ ಸಾಕ್ಷಿಯಾಗಿದೆ.
ಬಡತನದ ವಿರುದ್ಧದ ದಿಟ್ಟ ಹೋರಾಟ: ತೆಲಂಗಾಣದ ಮುಲುಗು ಜಿಲ್ಲೆಯ ಮಲ್ಲಂಪಳ್ಳಿಯ ಅಲ್ಲೆಪು ಮೌನಿಕಾ ಬಡ ಕುಟುಂಬದಿಂದ ಬಂದವರು. ಅವಳ ತಾಯಿ ಸರೋಜನಾ ಹೊಲಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆ, ತಂದೆ ಸಮ್ಮಯ್ಯ ಪಂಚರ್ ಅಂಗಡಿ ಇಟ್ಟುಕೊಂಡು ವಾಹನಗಳ ರಿಪೇರಿ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ದಂಪತಿಗಳಿಬ್ಬರೂ ದಣಿವರಿಯದೆ ಕೆಲಸ ಮಾಡುತ್ತಿದ್ದರೂ ಸಹ, ಕುಟುಂಬ ಸಾಗಿಸಲು ಹೆಣಗಾಡಬೇಕಿತ್ತು.
ಇತ್ತ, ಉನ್ನತ ಹುದ್ದೆಯ ಗುರಿ ಇಟ್ಟುಕೊಂಡಿದ್ದ ಮೌನಿಕಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಲೇ ಕುಟುಂಬದ ಪೋಷಣೆಗೂ ನೆರವಾಗುತ್ತಿದ್ದರು. ಲಕ್ಷಗಟ್ಟಲೇ ಹಣ ಖರ್ಚು ಮಾಡಲು ಶಕ್ತರಾಗದೆ, ಅರ್ಧದಲ್ಲೇ ಶಿಕ್ಷಣವನ್ನು ತ್ಯಜಿಸುವ ಯುವಕರ ನಡುವೆ ಮೌನಿಕಾ ಮಾತ್ರ ಭಿನ್ನ. ಬಡತನವನ್ನೇ ಸವಾಲಾಗಿ ಸ್ವೀಕರಿಸಿದ ಅವರು ಇಂದು ಯಶಸ್ಸಿನ ಮೆಟ್ಟಿಲೇರಿದ್ದಾರೆ.
ಶಿಕ್ಷಣ ಮತ್ತು ಸಿದ್ಧತೆ: ಮೌನಿಕಾ 10ನೇ ತರಗತಿಯವರೆಗೆ ಮಲ್ಲಂಪಲ್ಲಿಯಲ್ಲಿ ತೆಲುಗು ಮಾಧ್ಯಮದಲ್ಲಿ ಓದಿದರು. ಬಳಿಕ ಇಂಟರ್ಮೀಡಿಯಟ್ ಅಧ್ಯಯನಕ್ಕಾಗಿ ಹನುಮಕೊಂಡದಲ್ಲಿರುವ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದರು. ತನ್ನ ಅಜ್ಜನಿಂದ ಪ್ರೇರಿತಳಾಗಿ ಹಾಗೂ ತನ್ನ ಕುಟುಂಬದ ಉನ್ನತಿಗಾಗಿ ದೃಢನಿಶ್ಚಯದಿಂದ, ಬಿಎ ಪದವಿಯನ್ನು ಪಡೆದು, ನಂತರ ತರಬೇತಿಗಾಗಿ ಬಿಸಿ ಸ್ಟಡಿ ಸರ್ಕಲ್‌ಗೆ ಸೇರಿದರು. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ, ಮನೆಯಲ್ಲಿ ಪ್ರತಿದಿನ 10-12 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದ ಮೌನಿಕಾ, ಪ್ರತಿಯೊಂದು ವಿಷಯವನ್ನೂ ಸ್ವತಃ ಕರಗತ ಮಾಡಿಕೊಳ್ಳುತ್ತಿದ್ದರು.
ಕೆಲವೊಮ್ಮೆ ಪರೀಕ್ಷೆಗಳು ವಿಳಂಬವಾದರೂ ಕೂಡ ಎಂದಿನಂತೆ ಆಶಾಭಾವದೊಂದಿಗೆ ಅವರು ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಅನೇಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಬಯಸುತ್ತಿದ್ದರೆ, ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೌನಿಕಾರಿಗೆ ಅದು ಅಸಾಧ್ಯವಾಗಿತ್ತು. ಸ್ವಂತವಾಗಿ ಅಧ್ಯಯನ ಮಾಡಿದ ಅವರು ದೃಢನಿಶ್ಚಯವಿದ್ದರೆ ಕಲಿಕೆಗೆ ಏನೂ ಅಡ್ಡಿ ಎದುರಾಗದು ಎಂಬುದನ್ನು ಸಾಬೀತುಪಡಿಸಿದರು.
ಡಿಎಸ್ಪಿ ಹುದ್ದೆ ಅಲಂಕರಿಸಿದ ಮೌನಿಕಾ: ಮೊದಲ ಪ್ರಯತ್ನದಲ್ಲೇ ಗ್ರೂಪ್-1 ಪರೀಕ್ಷೆಯಲ್ಲಿ 315ನೇ ರ‍್ಯಾಂಕ್ ಗಳಿಸಿದ ಮೌನಿಕಾ, ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಂದ ಡಿಎಸ್ಪಿ ನೇಮಕಾತಿ ಪತ್ರ ಪಡೆದರು. ಇದರೊಂದಿಗೆ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು. ಇಂದು, ಅವರ ಕುಟುಂಬದಲ್ಲಿ ಸಂತಸ, ಮನೆಮಾಡಿದ್ದು, ಹಲವು ವರ್ಷಗಳ ಶ್ರಮ ಮತ್ತು ಸಮರ್ಪಣೆಯನ್ನು ಸಂಭ್ರಮಿಸುತ್ತಿದೆ.
"ನಾನು ಎಂದಿಗೂ ನನ್ನ ಮೇಲಿನ ವಿಶ್ವಾಸ ಕಳೆದುಕೊಳ್ಳಲಿಲ್ಲ. ನಿರಂತರ ಅಭ್ಯಾಸ, ಪರಿಶ್ರಮ ಮತ್ತು ಸ್ವ-ಪ್ರಯತ್ನವನ್ನೇ ನಂಬಿದ್ದೆ. ಅಡೆತಡೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ ಯಶಸ್ಸು ಸಿಗಲ್ಲ, ಅವುಗಳನ್ನು ನೇರವಾಗಿ ಎದುರಿಸಿದರೆ ಮಾತ್ರ ಮೇಲುಗೈ ಸಾಧಿಸಬಹುದು" ಎನ್ನುತ್ತಾರೆ ಮೌನಿಕಾ.
ತೆಲುಗು ಮಾಧ್ಯಮದಲ್ಲಿ ಅಧ್ಯಯನ ಮಾಡುವುದರಿಂದ ಮಿತವಾದ ಅವಕಾಶ ಸಿಗುತ್ತದೆ. ಅಲ್ಲದೆ, ಬಡತನವೂ ಜೀವನಕ್ಕೆ ದೊಡ್ಡ ತಡೆಗೋಡೆ ಮತ್ತು ಅಡೆತಡೆಗಳು ಹತಾಶೆ ಮೂಡಿಸುತ್ತವೆ ಎಂಬ ಸಾಮಾನ್ಯ ತಪ್ಪು ಕಲ್ಪನೆಗಳನ್ನೇ ಪ್ರಶ್ನಿಸುವಂತಿಗೆ ಮೌನಿಕಾರ ಯಶಸ್ಸು.

