ಭೀಮವರಂ(ಆಂಧ್ರಪ್ರದೇಶ): ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಭೀಮವರಂನ ಆರ್ಯನ್ ಉದಯ್ ಸಾಬೀತುಪಡಿಸಿದ್ದಾರೆ. ಹೌದು, ಆರ್ಯನ್ ಅವರು ಇಂಗ್ಲೆಂಡ್ನ ರಾಯಲ್ ಬರೋ ಆಫ್ ಕೆನ್ಸಿಂಗ್ಟನ್ ಮತ್ತು ಚೆಲ್ಸಿಯಾದ ಉಪ ಮೇಯರ್ ಆಗಿ ಆಯ್ಕೆಯಾದ ಮೊದಲ ತೆಲುಗು ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಂ ಮಂಡಲದ ತುಂಡುರು ಮೂಲದ ಆರ್ಯನ್ ಉದಯ್ ಅರೆಟಿ ಇತ್ತೀಚೆಗೆ ಯುಕೆಯ ರಾಯಲ್ ಬರೋ ಆಫ್ ಕೆನ್ಸಿಂಗ್ಟನ್ ಮತ್ತು ಚೆಲ್ಸಿಯಾದ ಉಪ ಮೇಯರ್ ಆಗಿ ಆಯ್ಕೆಯಾದರು. ಆರ್ಯನ್ ಉದಯ್ ಬುಧವಾರ ಭಾರತೀಯ ಕಾಲಮಾನ ರಾತ್ರಿ 11:30 ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಭೀಮವರಂನ ಯುವಕನೊಬ್ಬ ಬ್ರಿಟನ್‌ನಲ್ಲಿ ಉಪ ಮೇಯರ್ ಆಗಿ ನೇಮಕಗೊಂಡಿದ್ದಕ್ಕೆ ಅವರ ಸ್ನೇಹಿತರು ಮತ್ತು ಸಂಬಂಧಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ಆರ್ಯನ್ ಉದಯ್ ಪರಿಚಯ: ಆರ್ಯನ್ ಉದಯ್ ತುಂಡೂರು ಗ್ರಾಮದ ಆರೆಟಿ ವೀರಸ್ವಾಮಿ ಮತ್ತು ಗೊಬ್ಬೆಳ್ಲಮ್ಮ ದಂಪತಿಯ ಮೊಮ್ಮಗ. ಅವರ ತಂದೆ, ವೆಂಕಟ ಸತ್ಯನಾರಾಯಣ, ಭೀಮವರಂನ ಪ್ರಮುಖ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಉದಯ್ 7ನೇ ತರಗತಿಯವರೆಗೆ ಸೇಂಟ್ ಮೇರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಟೆನಿಸ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು, ಹೈದರಾಬಾದ್‌ಗೆ ತೆರಳಿ ಇಂಟರ್(ಪಿಯುಸಿ) ವರೆಗೆ ಅಲ್ಲಿಯೇ ಶಿಕ್ಷಣ ಪಡೆದರು. ಆ ನಂತರ ಭೀಮವರಂನಲ್ಲಿ ಪದವಿ ಹಾಗೂ ನರಸಾಪುರದಲ್ಲಿ ಎಂಬಿಎ ಮುಗಿಸಿದರು. ನಂತರ ಆರ್ಯನ್, ಲಂಡನ್‌ನಲ್ಲಿ ಎಂಎಸ್ ಮುಗಿಸಿ ಯುನೈಟೆಡ್ ಕಿಂಗ್‌ಡಮ್ ತೆಲುಗು ಅಸೋಸಿಯೇಷನ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ನಂತರ, ರಾಜಕೀಯದ ಮೇಲಿನ ಆಸಕ್ತಿಯಿಂದ ಅವರು ಕನ್ಸರ್ವೇಟಿವ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 2018 ಮತ್ತು 2022 ರಲ್ಲಿ ಸತತ ಎರಡು ಬಾರಿ ಆ ಪಕ್ಷದ ಚಿಹ್ನೆಯಲ್ಲಿ ಗೆದ್ದು ಕೌನ್ಸಿಲರ್ ಆಗಿದ್ದರು.
ರಾಯಲ್ ಬರೋ ಆಫ್ ಕೆನ್ಸಿಂಗ್ಟನ್, ಚೆಲ್ಸಿಯಾ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿರುವುದರ ಮಧ್ಯೆ ಇತ್ತೀಚೆಗೆ ಅವರು ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದರು. ಆರ್ಯನ್ ಉದಯ್ 2026 ರವರೆಗೆ ಉಪ ಮೇಯರ್ ಆಗಿ ಮುಂದುವರಿಯಲಿದ್ದಾರೆ. ಉದಯ್ ಪ್ರಸ್ತುತ ಬ್ರಿಟನ್‌ನಲ್ಲಿರುವ ಕನ್ಸರ್ವೇಟಿವ್ ಪಕ್ಷದ ಭಾರತ ವಿಭಾಗದ ಕಾರ್ಯಕಾರಿ ಸದಸ್ಯರಾಗಿ ಮತ್ತು ಯುರೋಪ್ ಇಂಡಿಯಾ ಸೆಂಟರ್ ಫಾರ್ ಬಿಸಿನೆಸ್ ಅಂಡ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯ್ ಮಾಜಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಆತ್ಮಯರಾಗಿದ್ದಾರೆ. ಇತ್ತೀಚೆಗೆ ಸಿಎಂ ಚಂದ್ರಬಾಬು ನಾಯ್ಡು, ನಟ ಚಿರಂಜೀವಿ ಲಂಡನ್‌ನಲ್ಲಿ ಉದಯ್ ಅವರನ್ನು ಭೇಟಿ ಮಾಡಿದ್ದರು. ಹೈದರಾಬಾದ್‌ನಲ್ಲಿ ಟೆನಿಸ್ ಕಾರಣದಿಂದ ಆದ ಪರಿಚಯಗಳೇ ತನ್ನನ್ನು ಲಂಡನ್‌ಗೆ ಕರೆದೊಯ್ದವು ಎಂದು ಉದಯ್ ಹೇಳಿದರು.
ಇದನ್ನೂ ಓದಿ: ಭಾರತದ ರಾಜತಾಂತ್ರಿಕ ನಿಯೋಗಗಳ ವಿಶ್ವಪರ್ಯಟನೆ ಆರಂಭ: ಜಪಾನ್, ಯುಎಇಗೆ ಪಾಕ್ನ 'ಉಗ್ರ ನೀತಿ' ಪರಿಚಯ
ಇದನ್ನೂ ಓದಿ: ಮದುವೆಗೆ ಮಳೆ ಅಡ್ಡಿ: ಒಂದೇ ವೇದಿಕೆಯಲ್ಲಿ ವಿವಾಹವಾದ ಹಿಂದೂ-ಮುಸ್ಲಿಂ ಜೋಡಿಗಳು