ಪಾಲಕ್ಕಾಡ್ (ಕೇರಳ): ಶೋರನೂರ್ ರೈಲು ನಿಲ್ದಾಣದ ಬಳಿ ನವದೆಹಲಿ-ತಿರುವನಂತಪುರಂ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಶೋರನೂರ್ ಸೇತುವೆಯ ಬಳಿ ರೈಲ್ವೆ ಹಳಿಯ ಮೇಲೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೃತದೇಹಗಳು ಛಿದ್ರವಾಗಿ ಬಿದ್ದಿವೆ. 3 ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, ಮತ್ತೊಬ್ಬರ ಶವ ನದಿಗೆ ಬಿದ್ದಿರುವುದರಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲು ಬರುತ್ತಿರುವುದನ್ನು ಕಾರ್ಮಿಕರು ಗಮನಿಸದೆ ಇರುವುದರಿಂದ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೀರ್ತನೆ ಮುಗಿಸಿ ಬರುತ್ತಿದ್ದವರಿಗೆ ಎದುರಾದ ಯಮ: 7 ಜನ ಸಾವು, ಐವರ ಸ್ಥಿತಿ ಗಂಭೀರ