ತರ್ನ್ ತರಣ್ (ಪಂಜಾಬ್) : ಜಿಲ್ಲೆಯ ಕೋಟ್ ಮೊಹಮ್ಮದ್ ಖಾನ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಭೆ ತಡೆಯಲು ಹೋದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.
ಪ್ರಕರಣವು ಗೋಯಿಂಡ್ವಾಲ್ ಸಾಹಿಬ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿ ಎರಡು ಗುಂಪುಗಳ ನಡುವಿನ ಜಗಳವನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಉದ್ರಿಕ್ತರು ಗುಂಡು ಹಾರಿಸಿದ್ದಾರೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಚರಂಜಿತ್ ಸಿಂಗ್ ಗುಂಡೇಟಿನಿಂದ ಗಾಯಗೊಂಡು ಸಾವನ್ನಪ್ಪಿದ್ದರೆ, ಮತ್ತೊಬ್ಬ ಪೊಲೀಸ್ ಅಧಿಕಾರಿ ಜಸ್ಬೀರ್ ಸಿಂಗ್ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದ ತಕ್ಷಣ ತರ್ನ್ ತರಣ್ ಜಿಲ್ಲೆಯ ಎಸ್‌ಎಸ್‌ಪಿ ಅಭಿಮನ್ಯು ರಾಣಾ ಮತ್ತು ಫಿರೋಜ್‌ಪುರ ರೇಂಜ್ ಡಿಐಜಿ ಹರ್ಮನ್‌ಬೀರ್ ಸಿಂಗ್ ಗಿಲ್ ಅವರು ಸ್ಥಳಕ್ಕೆ ಧಾವಿಸಿ, ಘಟನೆಯ ತನಿಖೆ ಆರಂಭಿಸಿದ್ದಾರೆ.
ಏನಿದು ಘಟನೆ ? : ಕೋಟ್ ಮೊಹಮ್ಮದ್ ಖಾನ್ ಗ್ರಾಮದ ಸರಪಂಚ ಕುಲದೀಪ್ ಸಿಂಗ್ ಅವರ ಪುತ್ರ ಹಾಗೂ ಅದೇ ಗ್ರಾಮದ ಅರ್ಷದೀಪ್ ಸಿಂಗ್ ಎಂಬುವವರೊಂದಿಗೆ ಸುಮಾರು 10 ದಿನಗಳಿಂದ ಜಗಳ ನಡೆದಿತ್ತು. ಈ ಬಗ್ಗೆ ಎದುರಾಳಿ ಗುಂಪಿನವರು ಸರಪಂಚ್ ಕುಲದೀಪ್ ಸಿಂಗ್ ಮತ್ತು ಇತರರ ವಿರುದ್ಧ ಶ್ರೀ ಗೋಯಿಂಡ್ವಾಲ್ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ಎರಡು ಗುಂಪುಗಳ ನಡುವೆ ಮತ್ತೆ ವಾಗ್ವಾದ ನಡೆದಿದೆ.
ಈ ವೇಳೆ ಸರಪಂಚ್ ಗುಂಪಿನ ಗೂಂಡಾಗಿರಿಯ ಬಗ್ಗೆ ಎದುರಾಳಿ ಗುಂಪಿನವರು ಪೊಲೀಸ್ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಯ ಹೆಚ್ಚುವರಿ ಪ್ರಭಾರಿ ಸಬ್‌ಇನ್ಸ್‌ಪೆಕ್ಟರ್ ಚರಂಜಿತ್ ಸಿಂಗ್ ನೇತೃತ್ವದ ಸಿಬ್ಬಂದಿ ರಾತ್ರಿ 8.30ಕ್ಕೆ ಠಾಣೆಯಿಂದ ನಿರ್ಗಮಿಸಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ರಾತ್ರಿ 9.35ರ ಸುಮಾರಿಗೆ ಗ್ರಾಮದಲ್ಲಿ ಎರಡು ಗುಂಪಿನವರು ಗಲಭೆ ನಡೆಸಿದ್ದಾರೆ.
ಈ ವೇಳೆ ಉದ್ರಿಕ್ತರ ಗುಂಪಿನಿಂದ ಗುಂಡು ಹಾರಿಸಲಾಗಿದ್ದು, ಆ ಗುಂಡು ಎಸ್‌ಐಗೆ ತಗುಲಿದೆ. ಗುಂಡೇಟಿನಿಂದ ಸಬ್ಇನ್ಸ್ ಪೆಕ್ಟರ್ ಚರಂಜಿತ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಎಎಸ್‌ಐ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಪಂಚ್ ಸೇರಿ ಆರು ಮಂದಿ ವಿರುದ್ಧ ಪ್ರಕರಣ : ಸರಪಂಚ್ ಕುಲದೀಪ್ ಸಿಂಗ್ ಹಾಗೂ ಇತರೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರೊಬ್ಬರ ಬಂಧನವೂ ಆಗಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಮೊಮ್ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪತಿ - UNION MINISTER GRANDDAUGHTER KILLED