
ಒಂದೇ ಶಾಲೆಯಲ್ಲಿ ತಂದೆ ಹಾಗೂ ಮಗನಿಂದ ಇಂಗ್ಲಿಷ್ ಬೋಧನೆ!; ಪುತ್ರ ಸಹೋದ್ಯೋಗಿಯಾಗಿದ್ದಕ್ಕೆ ಅಪ್ಪನಿಗೆ ಖುಷಿ!
ಬೊಬ್ಬಿಲಿ ಪಟ್ಟಣದ ಗೊಲ್ಲಪಲ್ಲಿ ವೇಣುಗೋಪಾಲ್ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ತಂದೆ ಹಾಗೂ ಮಗ ಒಟ್ಟಿಗೆ ಇಂಗ್ಲಿಷ್ ಕಲಿಸುತ್ತಿದ್ದಾರೆ.

Published : October 13, 2025 at 2:03 PM IST
ಬೊಬ್ಬಿಲಿ, ಆಂಧ್ರಪ್ರದೇಶ: ಬಂಕುರು ರಾಮಕೃಷ್ಣ ಮತ್ತು ಅವರ ಮಗ ರಾಕೇಶ್ ಎಂಬುವವರು ಈಗ ಬೊಬ್ಬಿಲಿ ಪಟ್ಟಣದ ಗೊಲ್ಲಪಲ್ಲಿ ವೇಣುಗೋಪಾಲ್ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಒಟ್ಟಿಗೆ ಇಂಗ್ಲಿಷ್ ಕಲಿಸುತ್ತಿದ್ದಾರೆ.
ರಾಮಕೃಷ್ಣ ಅವರು ಸಮರ್ಪಿತ ಶಿಕ್ಷಕರಾಗಿದ್ದಾರೆ. ಅವರು ಬಹಳ ಹಿಂದಿನಿಂದಲೂ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅವರ ಮಗ ಇತ್ತೀಚೆಗೆ ಮೆಗಾ ಡಿಎಸ್‌ಸಿಯಲ್ಲಿ ಅರ್ಹತೆ ಪಡೆದು, ಜಿಲ್ಲಾ ಮಟ್ಟದಲ್ಲಿ ಪ್ರಭಾವಶಾಲಿ ಏಳನೇ ರ‍್ಯಾಂಕ್ ಗಳಿಸಿ ಅದೇ ಶಾಲೆಗೆ ಸೇರಿದ್ದಾರೆ. ತಂದೆಯ ಶಾಲೆಯಲ್ಲಿ ಎರಡು ಇಂಗ್ಲಿಷ್ ಹುದ್ದೆಗಳು ಖಾಲಿ ಇದ್ದಿದ್ದರಿಂದಾಗಿ ರಾಕೇಶ್ ಅವರು ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ರಾಕೇಶ್ ಅವರು ಮಾತನಾಡಿದ್ದು, 'ನನ್ನ ತಂದೆಯ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ, ಅವರು ನನಗೆ ಸ್ಫೂರ್ತಿ. ಅವರು ವರ್ಷಗಳಿಂದ ಯುವ ಮನಸ್ಸುಗಳನ್ನು ರೂಪಿಸುತ್ತಿರುವ ಅದೇ ಶಾಲೆಗೆ ಕೊಡುಗೆ ನೀಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದ್ದಾರೆ. ಮೇ 2026ರಲ್ಲಿ ನಿವೃತ್ತರಾಗಲಿರುವ ಬಂಕುರು ರಾಮಕೃಷ್ಣ ಅವರು ತಮ್ಮ ಮಗ ತನ್ನ ಹೆಜ್ಜೆಗಳನ್ನು ಅನುಸರಿಸುವುದನ್ನು ನೋಡಿ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ರಾಮಕೃಷ್ಣ ಅವರು, 'ನನ್ನ ಮಗನನ್ನು ಇದೇ ಶಾಲೆಯಲ್ಲಿ ನನ್ನ ಸಹೋದ್ಯೋಗಿಯನ್ನಾಗಿ ಹೊಂದಿರುವುದು ಒಂದು ವಿಶಿಷ್ಠ ಮತ್ತು ಸ್ಮರಣೀಯ ಅನುಭವ. ಇದು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ನಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ' ಎಂದು ಹೇಳಿದ್ದಾರೆ.
ತಂದೆ - ಮಗ ಜೋಡಿ ಸ್ಥಳೀಯ ಸಮುದಾಯದಲ್ಲಿ ಗಮನ ಸೆಳೆಯುವುದಲ್ಲದೇ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳಿಗೆ ಸ್ಫೂರ್ತಿ ನೀಡುತ್ತಿದೆ. ಅವರ ಕಥೆಯು ಶಿಕ್ಷಣದಲ್ಲಿನ ಹಂಚಿಕೆಯ ಉತ್ಸಾಹ, ಸಮರ್ಪಣೆ ಮತ್ತು ಮಾರ್ಗದರ್ಶನದ ಮಹತ್ವವನ್ನು ಎತ್ತಿ ತೋರಿಸುತ್ತಿದೆ.
ತಂದೆ ಮತ್ತು ಮಗ ತರಗತಿಗೆ ತರುವ ಸಂಯೋಜಿತ ಅನುಭವ ಮತ್ತು ತಾಜಾ ದೃಷ್ಟಿಕೋನಗಳಿಂದ ಪ್ರಯೋಜನ ಪಡೆಯುವ ಹಾಗೂ ಇಬ್ಬರೂ ಶಿಕ್ಷಕರು ತಮಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನೋಡಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ಸುಕರಾಗಿದ್ದಾರೆ.
ಬೋಧನೆಯಲ್ಲಿ ಕುಟುಂಬ ಸಹಯೋಗದ ಈ ಅಪರೂಪದ ನಿದರ್ಶನವನ್ನು ಸ್ಥಳೀಯ ಶಿಕ್ಷಣ ಅಧಿಕಾರಿಗಳು ಸಹ ಶ್ಲಾಘಿಸಿದ್ದಾರೆ. ಇಂತಹ ಉದಾಹರಣೆಗಳು ವಿದ್ಯಾರ್ಥಿಗಳಿಗೆ ಪೋಷಣೆ ಮತ್ತು ಪ್ರೇರಕ ವಾತಾವರಣವನ್ನು ಬೆಳೆಸುತ್ತವೆ ಎಂದು ಹೇಳಿದ್ದಾರೆ.
ಬೊಬ್ಬಿಲಿ ಸಮುದಾಯಕ್ಕೆ ಇದು ಕೇವಲ ಬೋಧನಾ ಮೈಲಿಗಲ್ಲಿಗಿಂತ ಹೆಚ್ಚಿನದ್ದಾಗಿದೆ. ಇದು ಕುಟುಂಬದ ಪರಂಪರೆ, ಶಿಕ್ಷಣ ಮತ್ತು ಸಮರ್ಪಣೆಯ ಆಚರಣೆಯಾಗಿದ್ದು, ಈ ಪ್ರದೇಶದಾದ್ಯಂತದ ಮಹತ್ವಾಕಾಂಕ್ಷಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಹಾಗೂ ಮಾದರಿಯಾಗಿದೆ.
ಇದನ್ನೂ ಓದಿ : ತುಂಡು ಭೂಮಿ, ಕೂಲಿ ಮಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣ: ಸಣ್ಣ ಕೋಣೆಯಲ್ಲಿ ಓದಿ NEET ಪಾಸಾದ ಸಹೋದರಿಯರು; ರೈತನ ಮಕ್ಕಳ ಸ್ಪೂರ್ತಿದಾಯಕ ಪ್ರಯಾಣ!

