ಅಹಮದಾಬಾದ್ (ಗುಜರಾತ್): ನಕಲಿ ನೋಟು, ನಕಲಿ ಅಂಕಪಟ್ಟಿ, ನಕಲಿ ವಕೀಲರು, ನಕಲಿ ನ್ಯಾಯಾಧೀಶರು, ನಕಲಿ ಶಿಕ್ಷಕರು, ನಕಲಿ ವೈದ್ಯರುಗಳ ಹಾವಳಿ ಹೆಚ್ಚಾದ ಬಗ್ಗೆ ವರದಿಯಾಗಿತ್ತು. ಇದೀಗ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಕಲಿ ಆಸ್ಪತ್ರೆಯೊಂದು ಪತ್ತೆಯಾಗಿದ್ದು, ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.
ಅಹಮದಾಬಾದ್‌ನ ನಾನಾ ಚಿಲೋಡಾ ಎಂಬ ಗ್ರಾಮದಲ್ಲಿ ಈ ನಕಲಿ ಆಸ್ಪತ್ರೆ ತೆರೆದಿರುವುದು ಪತ್ತೆಯಾಗಿದ್ದು, ವೈದ್ಯನಾಗಿ ಈ ಆಸ್ಪತ್ರೆ ನಡೆಸುತ್ತಿದ್ದ ಧರ್ಮೇಂದ್ರ ಅಲಿಯಾಸ್ ಸಂಜಯ್ ಪಟೇಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಚಿಲೋಡಾದಲ್ಲಿ "ತ್ರೀ ಸ್ಟಾರ್ ಆಸ್ಪತ್ರೆ" ಎಂಬ ಹೆಸರಿನಲ್ಲಿ ನಕಲಿ ಆಸ್ಪತ್ರೆ ತೆರೆದಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಆರೋಪಿ ಧರ್ಮೇಂದ್ರ ನಕಲಿ AMC (ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್) ಪ್ರಮಾಣಪತ್ರವನ್ನು ಪಡೆದಿರುವುದು ಪತ್ತೆಯಾಗಿದ್ದು, ನಿಜವಾದ ಆಸ್ಪತ್ರೆಯಂತೆ "ತ್ರೀ ಸ್ಟಾರ್ ಆಸ್ಪತ್ರೆ"ಯ ಹೆಸರಿನಲ್ಲಿ ICU (ತೀವ್ರ ನಿಗಾ ಘಟಕ) ಮತ್ತು ಟ್ರಾಮಾ ಸೆಂಟರ್ ಸೇರಿದಂತೆ ವಿವಿಧ ವೈದ್ಯಕೀಯ ಸಲಕರಣೆಗಳನ್ನು ಇಟ್ಟಿರುವುದು ಪತ್ತೆಯಾಗಿದೆ. ಸರಿಯಾದ ವೈದ್ಯಕೀಯ ನೋಂದಣಿ ಇಲ್ಲದಿರುವುದು ಕೂಡ ಗಮನಕ್ಕೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಕಲಿ ಸಹಿ ಹೊಂದಿರುವ ದಾಖಲೆಗಳು: ಆರೋಪಿಯು ವಿವಿಧ ವೈದ್ಯರ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಮತ್ತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC)ನ ಮುದ್ರೆಗಳನ್ನು ಹೊಂದಿರುವ ನಕಲಿ "ಫಾರ್ಮ್-ಸಿ" ಹೊಂದಿರುವುದು ಸಹ ಗೊತ್ತಾಗಿದೆ. ನೋಡಿದರೆ ಅದು ಸಹಜಬಾಗಿ ನಿಜವಾದ ಆಸ್ಪತ್ರೆಯಂತೆ ಕಾಣಿಸುತ್ತಿತ್ತು. ಆದರೆ, ಆಸ್ಪತ್ರೆ ನಕಲಿ ಎಂದು ಗೊತ್ತಾಗಿದೆ. ಆರೋಪಿ ಸಹ ನಕಲಿ ವೈದ್ಯನಾಗಿದ್ದು, ಗುಜರಾತ್ ವೈದ್ಯಕೀಯ ಕೌನ್ಸೆಲಿಂಗ್ ನೀಡಿದ ಸಂಖ್ಯೆಯನ್ನು ದುರುಪಯೋಗ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ತಪಾಸಣೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕಾನೂನುಬಾಹಿರ ಚಿಕಿತ್ಸಾ ಶುಲ್ಕವನ್ನು ವಿಧಿಸುತ್ತಿದ್ದ. ಚಿಕಿತ್ಸೆಗೆ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿ ಬಂದ ರೋಗಿಗಳ ಪರವಾಗಿ ವಿಮಾ ಕಂಪನಿಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಹಣ ಪಡೆಯುತ್ತಿದ್ದ. ಹಲವು ವಿಮಾ ಕಂಪನಿ ಮತ್ತು ಪಾಲಿಸಿದಾರರು ವಂಚನೆಗೊಳಗಾದ ಮಾಹಿತಿ ಇದೆ. ವೈದ್ಯರ ನೋಂದಣಿ ಸಂಖ್ಯೆಯ ದುರುಪಯೋಗ, ನಕಲಿ ವೈದ್ಯಕೀಯ ಪ್ರಮಾಣಪತ್ರ, ನಕಲಿ ಫಾರ್ಮ್-ಸಿ ಸೃಷ್ಟಿಸಿ ಬಹುಮಹಡಿಯುಳ್ಳ ಮನೆಯಲ್ಲಿ 'ತ್ರೀ ಸ್ಟಾರ್ ಆಸ್ಪತ್ರೆ' ಎಂಬ ಹೆಸರಿನಡಿ ಜನರಿಗೆ ಮೋಸ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ಈ ಬಗ್ಗೆ ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಸ್ತ್ರೀರೋಗ ತಜ್ಞೆಯ ಬಂಧನ: ಮತ್ತೊಂದೆಡೆ ಕಚ್‌ನ ದಯಾಪರ್ ಗ್ರಾಮದಲ್ಲಿಯೂ ಇಂತಹದ್ದೇ ಪ್ರಕರಣವೊಂದು ಬೆಳೆಕಿಗೆ ಬಂದಿದೆ. ದಯಾಪರ್ ಗ್ರಾಮದಲ್ಲಿ ನಕಲಿ ಸ್ತ್ರೀರೋಗ ತಜ್ಞೆಯಾಗಿದ್ದ ಮಹಿಳಾ ವೈದ್ಯೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಅನುರಾಧಾ ಮಂಟು ಪ್ರಸಾದ್ ಯಾದವ್ ಸಿಕ್ಕಿಬಿದ್ದ ನಕಲಿ ಸ್ತ್ರೀರೋಗ ತಜ್ಞೆ.

ಈ ನಕಲಿ ಮಹಿಳಾ ವೈದ್ಯೆಯು ಸ್ತ್ರೀರೋಗ ಆಸ್ಪತ್ರೆ ನಡೆಸುತ್ತಿದ್ದು, ಹೆರಿಗೆ ನಡೆಸುವುದರ ಜೊತೆಗೆ ಗರ್ಭಿಣಿಯರಿಗೆ ಔಷಧ ಮತ್ತು ಚಿಕಿತ್ಸೆ ಸಹ ನೀಡುತ್ತಿದ್ದಳು. ಯಾವುದೇ ವೈದ್ಯಕೀಯ ಪದವಿ ಮತ್ತು ಅಲೋಪತಿ ಅಥವಾ ಸ್ತ್ರೀರೋಗ ಶಾಸ್ತ್ರದ ಯಾವುದೇ ಪ್ರಮಾಣಪತ್ರವಿಲ್ಲದೇ ಚಿಕಿತ್ಸೆ ನೀಡುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ. ನಕಲಿ ವೈದ್ಯೆ ಎಂದು ಹೇಳಿಕೊಂಡು ಅನುರಾಧಾ, ಕಚ್ ಗಡಿಯಲ್ಲಿರುವ ಲಖ್‌ಪತ್ ತಾಲೂಕಿನ ದಯಾಪರ್‌ನಲ್ಲಿ ಸ್ತ್ರೀರೋಗ ಆಸ್ಪತ್ರೆ ನಡೆಸುತ್ತಿದ್ದಳು. ಗರ್ಭಿಣಿಯರಿಗೆ ಹೆರಿಗೆಯ ಜೊತೆಗೆ ಚಿಕಿತ್ಸೆ ನೀಡುತ್ತಿದ್ದಳು. ಆರೋಗ್ಯ ಅಧಿಕಾರಿಗಳು ಮತ್ತು ದಯಾಪರ್ ಪೊಲೀಸ್ ಠಾಣೆಯ ಜಂಟಿ ತಂಡವು ಈ ನಕಲಿ ಮಹಿಳಾ ವೈದ್ಯೆಯನ್ನು ಬಂಧಿಸಿದೆ. ಮಹಿಳೆಯಿಂದ ವೈದ್ಯಕೀಯ ಉಪಕರಣಗಳು ಮತ್ತು ಅಲೋಪತಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲದ ವಿರುದ್ಧ ಕಠಿಣ ಕ್ರಮ: ಸಚಿವ ದಿನೇಶ್ ಗುಂಡೂರಾವ್ - DISCUSSION ON FAKE MEDICINES