ಪಾಟ್ನಾ (ಬಿಹಾರ): ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಸಿಗರೇಟ್‌ಗಳನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯನ್ನು ಪತ್ತೆ ಹಚ್ಚಿದ ಬಿಹಾರ ಪೊಲೀಸರು, ಕೋಟಿ ಮೌಲ್ಯದ ಉತ್ಪನ್ನವನ್ನು ವಶಪಡಿಸಿಕೊಂಡಿದ್ದಾರೆ. ಪಾಟ್ನಾದಿಂದ ನೈಋತ್ಯಕ್ಕೆ ಸುಮಾರು 180 ಕಿ.ಮೀ ದೂರದಲ್ಲಿರುವ ರೋಹ್ತಾಸ್ ಜಿಲ್ಲೆಯ ಬಾಲತುವಾನ್‌ನಲ್ಲಿ ಈ ನಕಲಿ ಸಿಗರೇಟ್‌ಗಳನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆ ಪತ್ತೆಯಾಗಿದ್ದು, ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಕಾರ್ಖಾನೆಯ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೇ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಮಾರುಕಟ್ಟೆಗೆ ಸಾಗಿಸಲು ಸಿದ್ಧವಾಗಿದ್ದ ಹಲವು ಯಂತ್ರ ಮತ್ತು ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಬಾಲತುವಾನ್ ಗ್ರಾಮದ ಕಟ್ಟಡವೊಂದರ ನೆಲಮಾಳಿಗೆಯಲ್ಲಿ ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಸಿಗರೇಟ್‌ಗಳನ್ನು ಉತ್ಪಾದಿಸುವ ಕಾರ್ಖಾನೆ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಬಂದಿತ್ತು. ಈ ಮಾಹಿತಿ ಖಚಿತವಾಗುತ್ತಿದ್ದಂತೆ ಕಾರ್ಖಾನೆ ಮೇಲೆ ದಾಳಿ ನಡೆಸಲಾಯಿತು" ಎಂದು ರೋಹ್ತಾಸ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ರೌಶನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ತಡವಾಗಿ ಈ ಸುಳಿವು ಸಿಕ್ಕಿತು. ಮಾಹಿತಿ ಖಚಿತಗೊಳ್ಳುತ್ತಿದ್ದಂತೆ ಸಸಾರಾಂ ಉಪ - ವಿಭಾಗೀಯ ಪೊಲೀಸ್ ಅಧಿಕಾರಿ (SDPO) - IIರ ನೇತೃತ್ವದ ತಂಡ ಶನಿವಾರ ಬೆಳಗ್ಗೆ ಈ ದಾಳಿ ನಡೆಸಿತು. ದಾಳಿಗೂ ಮುನ್ನ ತಂಡವು ರಹಸ್ಯವಾಗಿ ಮಾಹಿತಿ ಕಲೆ ಹಾಕಿತ್ತು. ಪ್ರಾಥಮಿಕ ವಿಚಾರಣೆ ಬಳಿಕ ಅಲ್ಲಿ ಕೆಲಸ ಮಾಡುತ್ತಿದ್ದ 27 ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿದೆ. ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆ ಮೂಲದ ಕಾರ್ಖಾನೆ ಮೇಲ್ವಿಚಾರಕ ರಾಜೇಶ್ ಕುಮಾರ್ ಮಿಶ್ರಾ ಎಂಬಾತನನ್ನು ಬಂಧಿಸಲಾಗಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಸಸಾರಾಮ್ ನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ಖಾನೆಯ ಮಾಲೀಕ ಗೋಪಾಲ್ಜಿ ಓಜಾ ಎಂಬುವರನ್ನೂ ಬಂಧಿಸಲಾಗಿದೆ ಎಂದು ರೌಶನ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಬಂಧಿತರು ಕಳೆದ 7 ವರ್ಷಗಳಿಂದ ನಕಲಿ ಸಿಗರೇಟ್ ತಯಾರಿಸುವಲ್ಲಿ ನಿರತರಾಗಿದ್ದರು. ದಾಳಿ ವೇಳೆ 3 ಕೋಟಿ ರೂ. ಮೌಲ್ಯದ ವಿವಿಧ ಬ್ರಾಂಡ್‌ಗಳ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಸಿಗರೇಟ್‌ಗಳು ಮತ್ತು ಸುಮಾರು 1 ಕೋಟಿ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ಕಚ್ಚಾ ವಸ್ತು, ವಿಶೇಷವಾಗಿ ತಂಬಾಕು ತುಂಬಾ ಕಡಿಮೆ ಗುಣಮಟ್ಟದ್ದಾಗಿದೆ. ಇದನ್ನು ಸಿಗರೇಟ್‌ಗಳಲ್ಲಿ ತುಂಬಲಾಗಿತ್ತು. ನೋಡಿದ ತಕ್ಷಣ ಸಿಗರೇಟ್ನಂತೆಯೇ ಕಾಣುತ್ತದೆ. ಅಂತಹ ಸಿಗರೇಟ್‌ಗಳನ್ನು ದೊಡ್ಡ ದೊಡ್ಡ ಕಂಪನಿಗಳು ಭರಿಸುವ ವೆಚ್ಚದ 10ನೇ ಒಂದು ಭಾಗದಷ್ಟು ಉತ್ಪಾದಿಸುತ್ತಿದ್ದರು. ಕೋಟಿ ರೂ. ಮೌಲ್ಯದ ಮೂರು ದೊಡ್ಡ ಸ್ವಯಂಚಾಲಿತ ಸಿಗರೇಟ್ ತಯಾರಿಕಾ ಯಂತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ದಾಳಿ ವೇಳೆ ಘಟಕದಿಂದ 50 ಲಕ್ಷ ರೂ. ಮೌಲ್ಯದ ಹೊಸದಾಗಿ ತಯಾರಿಸಿದ ನಕಲಿ ಸಿಗರೇಟ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಾರ್ಖಾನೆ ಮತ್ತು ಗೋದಾಮಿನ ಆವರಣವನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸೀಲ್ ಮಾಡಲಾಗಿದೆ. ದಂಧೆ ಸಂಬಂಧ ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ಇತರ ಜನರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ರೌಶನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೋಟೆಲ್‌ನಲ್ಲಿ ನಕಲಿ ನೋಟು ಪ್ರಿಂಟ್ ಮಾಡಿ ಪೊಲೀಸ್ ಅತಿಥಿಯಾದ ಯುವಕ - YOUNG MAN ARRESTED