ನವದೆಹಲಿ: "ಬೆಲ್ಜಿಯಂನಲ್ಲಿ ಬಂಧನವಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದ ಆರೋಪಿ, ವಜ್ರ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರುವುದು ಅಷ್ಟು ಸುಲಭವಲ್ಲ" ಎಂದು ಹಗರಣವನ್ನು ಬೆಳಕಿಗೆ ತಂದ ಉದ್ಯಮಿ ಎಸ್.ವಿ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, "ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಕಠಿಣವಾಗಿದೆ. ಕಾರಣ ಉದ್ಯಮಿಯ ಬಳಿ ಜೇಬು ತುಂಬಾ ಹಣವಿದೆ. ಆತ ಅತ್ಯುತ್ತಮ ವಕೀಲರನ್ನು ನೇಮಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ" ಎಂದು ಹೇಳಿದ್ದಾರೆ.
#WATCH | On fugitive Mehul Choksi's arrest in Belgium, Punjab National Bank Scam whistle-blower Hariprasad SV says, " extradition is not going to be an easy task. his wallet is full, and he will employ the best advocates in europe, as vijay mallya has been doing. it is not easy… pic.twitter.com/Gz6HQCL79i
— ANI (@ANI) April 14, 2025
"ಈ ಹಿಂದೆ ಡೊಮಿನಿಕಾ ದೇಶದಲ್ಲಿ ಚೋಕ್ಸಿಯನ್ನು ಬಂಧಿಸಲಾಗಿತ್ತು. ಭಾರತಕ್ಕೆ ಹಸ್ತಾಂತರಿಸಲು ಕೋರಿದಾಗ ಅವರ ವಕೀಲರ ಪಡೆಯು ಇದನ್ನು ಬಲವಾಗಿ ವಿರೋಧಿಸಿ, ಪ್ರಕ್ರಿಯೆಯಿಂದ ತಪ್ಪಿಸಿತ್ತು. ವಿಜಯ್ ಮಲ್ಯ ಕೇಸ್ನಲ್ಲೂ ಇದೇ ಆಗಿದೆ. ದೇಶವನ್ನು ಕೊಳ್ಳೆ ಹೊಡೆದು ವಿದೇಶಗಳಲ್ಲಿ ತಲೆಮರೆಸಿಕೊಂಡವರನ್ನು ಇಲ್ಲಿಗೆ ವಾಪಸ್ ಕರೆ ತರುವುದು ಅಷ್ಟು ಸುಲಭವಲ್ಲ" ಎಂದಿದ್ದಾರೆ.
"ಡೊಮಿನಿಕಾದಲ್ಲಿ ಸಿಕ್ಕಿಬಿದ್ದು ತಪ್ಪಿಸಿಕೊಂಡಂತೆ ಈ ಬಾರಿ ಆಗಬಾರದು. ಭಾರತ ಸರ್ಕಾರ ಇದರಲ್ಲಿ ಯಶಸ್ಸು ಸಾಧಿಸಲಿ ಎಂದು ಬಯಸುತ್ತೇನೆ. ಭಾರತದಲ್ಲಿ ಕಾನೂನು ವ್ಯವಸ್ಥೆ ನಿಸ್ಸಂದೇಹವಾಗಿಯೂ ಉತ್ತಮವಾಗಿದೆ. ಆದರೆ ಹಸ್ತಾಂತರ ಪ್ರಕ್ರಿಯೆಯು ಇನ್ನೊಂದು ದೇಶದ ಮೇಲೆ ಅವಲಂಬಿತವಾಗಿರುತ್ತದೆ. ಸಾಕಷ್ಟು ಹಣ ಹೊಂದಿರುವ ಚೋಕ್ಸಿ ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ" ಎಂದು ಹರಿಪ್ರಸಾದ್ ಹೇಳಿದ್ದಾರೆ.
ಯಾರು ಈ ಹರಿಪ್ರಸಾದ್?: ಬೆಂಗಳೂರಿನ ಉದ್ಯಮಿಯಾಗಿರುವ ಹರಿಪ್ರಸಾದ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದ ಕುರಿತು 2016ರ ಜುಲೈನಲ್ಲಿ ಪ್ರಧಾನಮಂತ್ರಿಗಳ ಕಚೇರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು.
ಬೆಲ್ಜಿಯಂನಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತದ ಕೋರಿಕೆಯ ಮೇರೆಗೆ ಅಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ಉದ್ಯಮಿಯನ್ನು ಹಸ್ತಾಂತರಿಸಲು ಭಾರತ ಮನವಿ ಮಾಡಲು ಸಜ್ಜಾಗಿದೆ.
ಚೋಕ್ಸಿ ಬಿಡುಗಡೆಗೆ ಅರ್ಜಿ?: ಮೆಹುಲ್ ಚೋಕ್ಸಿ ಬಂಧನದ ಬೆನ್ನಲ್ಲೇ, ಅವರ ಬಿಡುಗಡೆಗೆ ಅರ್ಜಿ ಸಲ್ಲಿಸಲಾಗುವುದು ಎಂದು ಉದ್ಯಮಿ ಪರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ. ಉದ್ಯಮಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರನ್ನು ಬಂಧಮುಕ್ತ ಮಾಡಲು ಕೋರಲಾಗುವುದು ಎಂದು ಹೇಳಿದ್ದಾರೆ.
13,850 ಕೋಟಿ ರೂಪಾಯಿ ಪಿಎನ್ಬಿ ಹಗರಣ ಪ್ರಕರಣದಲ್ಲಿ ಚೋಕ್ಸಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿವೆ. ಈತನ ಸಂಬಂಧಿಯಾದ ನೀರವ್ ಮೋದಿ ಕೂಡ ಹಗರಣದಲ್ಲಿ ಪಾಲುದಾರ ಆರೋಪವಿದೆ. ನೀರವ್ ಸದ್ಯ ಲಂಡನ್ ಜೈಲಿನಲ್ಲಿದ್ದಾರೆ. 2018ರಲ್ಲಿ ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದರು.
ಇದನ್ನೂ ಓದಿ: ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಬಂಧನ: ಭಾರತದ ಹಸ್ತಾಂತರ ಕೋರಿಕೆಯ ಮೇರೆಗೆ ಕ್ರಮ