ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡದೇ ತಡೆಹಿಡಿದಿದ್ದ ರಾಜ್ಯಪಾಲ ಆರ್.ಎನ್.ರವಿ ಅವರ ಕ್ರಮಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಜೊತೆಗೆ ಮಸೂದೆಗಳಿಗೆ ಒಪ್ಪಿಗೆ ನೀಡದಿರುವುದು "ಸಂವಿಧಾನಬಾಹಿರ ಹಾಗೂ ಏಕಪಕ್ಷೀಯ ನಿರ್ಧಾರ. ಇಲ್ಲಿ ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಪಿ.ಪಾರ್ದಿವಾಲಾ ಹಾಗೂ ಆರ್.ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ "10 ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸದೇ ಕಾಯ್ದಿರಿಸಿದ ರಾಜ್ಯಪಾಲರ ಕ್ರಮ ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ. ರಾಜ್ಯಪಾಲರು ಸಂವಿಧಾನದ 200ನೇ ವಿಧಿಯಡಿ ರಾಜ್ಯ ಸಚಿವ ಸಂಪುಟ್ದ ಸಲಹೆಗೆ ಬದ್ಧರಾಗಿರಬೇಕು. ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗಿಲ್ಲ. ಅವರ ನಡೆ ಸಂವಿಧಾನಕ್ಕೆ ವಿರುದ್ಧವಾಗಿದೆ" ಎಂದು ಆರ್.ಎನ್.ರವಿ ವಿರುದ್ಧ ಚಾಟಿ ಬೀಸಿತ್ತು.
"ಹಾಗಾಗಿ ಅಂತಹ ನಿರ್ಧಾರವನ್ನು ರದ್ದುಗೊಳಿಸಲಾಗಿದೆ. 10 ಮಸೂದೆಗಳ ಬಗ್ಗೆ ರಾಜ್ಯಪಾಲರು ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ರದ್ದುಗೊಳಿಸಲಾಗಿದೆ. ಈ ಮಸೂದೆಗಳನ್ನು ರಾಜ್ಯಪಾಲರಿಗೆ ಎರಡನೇ ಬಾರಿಗೆ ಮಂಡಿಸಿದ ದಿನಾಂಕದಿಂದ ಅನುಮೋದನೆ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ" ಎಂದು ಪೀಠ ತೀರ್ಪು ನೀಡಿತ್ತು.
ತೀರ್ಪು ಶ್ಲಾಘಿಸಿದ್ದ ತಮಿಳುನಾಡು ಸಿಎಂ: ಸುಪ್ರೀಂ ಕೋರ್ಟ್ನ ತೀರ್ಪನ್ನು ಐತಿಹಾಸಿಕ ಎಂದು ಶ್ಲಾಘಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ನಿನ್ನೆ ವಿಧಾನಸಭೆಯಲ್ಲಿ, "ಇದು ತಮಿಳುನಾಡಿಗೆ ಮಾತ್ರವಲ್ಲ, ಎಲ್ಲಾ ರಾಜ್ಯಗಳಿಗೂ ಸಿಕ್ಕ ದೊಡ್ಡ ಗೆಲುವು. ರಾಜ್ಯಗಳ ಸ್ವಾಯತ್ತತೆ ಮತ್ತು ಫೆಡರಲ್ ತತ್ವಕ್ಕಾಗಿ ಡಿಎಂಕೆ ಹೋರಾಟ ಮುಂದುವರಿಯುತ್ತದೆ. ಮತ್ತು ಈ ಹೋರಾಟದ ಹಾದಿಯಲ್ಲಿ ಗೆಲ್ಲುತ್ತದೆ" ಎಂದು ಅವರು ಹೇಳಿದ್ದರು.
ಈ ಹಿನ್ನೆಲೆ ಈಟಿವಿ ಭಾರತ ಹಿರಿಯ ಪತ್ರಕರ್ತ ಎನ್. ರಾಮ್ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದು, ಅದರ ಆಯ್ದ ಭಾಗ ಇಲ್ಲಿದೆ. ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಎನ್ ರಾಮ್ ಅವರು, ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಮಸೂದೆಯ ಅನುಮೋದನೆ ಮತ್ತು ಅಂಗೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಪಾತ್ರದ ಬಗ್ಗೆ ಬೆಳಕು ಚೆಲ್ಲಿದರು.
ಈ ಹಿಂದಿನ ತೀರ್ಪುಗಳಲ್ಲಿ ರಾಜ್ಯಪಾಲರ ಪಾತ್ರವನ್ನು ಸ್ಪಷ್ಟವಾಗಿ ಹೇಳಲಾಗಿದೆ: "ಈ ಹಿಂದೆ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಪ್ರಕರಣದಲ್ಲಿ, ರಾಜ್ಯಪಾಲರ ಅಧಿಕಾರ ಏನು ಎಂಬುದ ಬಗ್ಗೆ ನಿಖವಾರಗಿ ನ್ಯಾಯಾಲಯ ಈಗಾಗಲೇ ಸ್ಪಷ್ಟವಾಗಿ ಉಲ್ಲೇಖಿಸಿದೆ. ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವಿಲ್ಲ. ಮತ್ತು ರಾಜ್ಯ ಸರ್ಕಾರ ಹೇಳುವುದನ್ನು ಅವರು ಕೇಳಬೇಕು ಎಂದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ" ಎಂದು ವಿವರಿಸಿದರು.
ಎನ್ ರಾಮ್ ಹೇಳುವುದೇನು?: ಎನ್.ರಾಮ್ ಅವರ ಪ್ರಕಾರ, ಮಸೂದೆಯು ರಾಜ್ಯಪಾಲರ ಮುಂದೆ ಬಂದಾಗ, ಅವರ ಮುಂದೆ ಮೂರು ಆಯ್ಕೆಗಳಿರುತ್ತವೆ. ಒಂದು ಮಸೂದೆಯನ್ನು ಅನುಮೋದಿಸುವುದು. ಎರಡನೆಯದು ನಿರ್ದಿಷ್ಟ ಅವಧಿಯವರೆಗೆ ಅನುಮೋದನೆಯನ್ನು ತಡೆ ಹಿಡಿಯುವುದು. ತಿದ್ದುಪಡಿಗಳ ಅಗತ್ಯವಿದ್ದರೆ ಅವುಗಳನ್ನು ಉಲ್ಲೇಖಿಸಿ, ಮಸೂದೆಯನ್ನು ವಿಧಾನಸಭೆಗೆ ಹಿಂತಿರುಗಿಸುವುದು. ಮೂರನೇಯದು ಮಸೂದೆಗಳು ಅಪರೂಪದ ಪ್ರಕರಣಗಳಾಗಿದ್ದರೆ ಅಥವಾ ಹೈಕೋರ್ಟ್ನ ಅಧಿಕಾರವನ್ನು ಕಡಿಮೆ ಮಾಡುವಂತಿದ್ದರೆ, ಅವುಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಬಹುದು ಎಂದು ತಿಳಿಸಿದರು.
ಒಂದು ಮಸೂದೆಯ ಮೇಲೆ ಕ್ರಮ ಕೈಗೊಳ್ಳಲ ರಾಜ್ಯಪಾಲರಿಗಿರುವ ಅವಧಿಯ ಮಿತಿ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಕಾಲಮಿತಿ ಎರಡು ವರ್ಷಗಳು ಅಥವಾ ಐದು ವರ್ಷಗಳಲ್ಲ. ತಕ್ಷಣವೇ ಮಸೂದೆ ಬಗ್ಗೆ ಕ್ರಮ ಕೈಗೊಳ್ಳಬೇಕು" ಎಂದು ತೀಕ್ಷ್ಣವಾಗಿ ಹೇಳಿದರು.
ಮುಂದುವರಿದು ಮಾತನಾಡಿದ ಅವರು, "ಮಸೂದೆ ಮೇಲೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಸಮಯ ಮಿತಿಯನ್ನು ನಿಗದಿಪಡಿಸಿದೆ. ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ರಾಜ್ಯಪಾಲರು ಮಸೂದೆಗಳನ್ನು ಅಮಾನತುಗೊಳಿಸಲು ನಿರ್ಧರಿಸಿದಾದಲ್ಲಿ, ಒಂದು ತಿಂಗಳೊಳಗೆ ಅದನ್ನು ಮಾಡಬೇಕು. ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಲು ನಿರ್ಧರಿಸಿದಲ್ಲಿ, ಗರಿಷ್ಠ ಮೂರು ತಿಂಗಳೊಳಗೆ ಅದನ್ನು ಮಾಡಬೇಕು" ಎಂದು ಎನ್. ರಾಮ್ ತಿಳಿಸಿದರು.
ವಿಶೇಷಾಧಿಕಾರ ಬಳಸಿ ಮಸೂದೆಗಳನ್ನ ಕಾನೂನಾಗಿಸಿದ ಸುಪ್ರೀಂ: "10 ಮಸೂದೆಗಳಲ್ಲಿ, ರಾಜ್ಯಪಾಲರು ಮೀನುಗಾರಿಕಾ ವಿಶ್ವವಿದ್ಯಾಲಯಕ್ಕೆ ಜಯಲಲಿತಾ ಅವರ ಹೆಸರನ್ನು ಮರುನಾಮಕರಣ ಮಾಡುವ ಹಳೆಯ ಮಸೂದೆಯನ್ನು ಸಹ ಇಟ್ಟುಕೊಂಡಿದ್ದರು. ಅಂತಹ 10 ಮಸೂದೆಗಳನ್ನು ರಾಜ್ಯಪಾಲರು ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದರು. ಇದು ಕಾನೂನುಬಾಹಿರ ಮತ್ತು ಸಂಪೂರ್ಣವಾಗಿ ಸರಿಯಾದ ಕ್ರಮ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್ ಸ್ವತಃ ವಿಶೇಷ ಅಧಿಕಾರಗಳನ್ನು ಬಳಸಿಕೊಂಡು 10 ಮಸೂದೆಗಳನ್ನು ಕಾನೂನುಗಳನ್ನಾಗಿ ಮಾಡಿದೆ. ಈ ರೀತಿ ಈ ಹಿಂದೆ ನಡೆದಿದೆಯೇ ಎಂದು ನನಗೆ ತಿಳಿದಿಲ್ಲ."
ಇದು ಕೇಂದ್ರ ಸರ್ಕಾರದ ಸೋಲೂ ಹೌದು: "ರಾಜ್ಯಪಾಲ ಆರ್.ಎನ್.ರವಿ ಇನ್ನು ಮುಂದೆ ವಿಶ್ವವಿದ್ಯಾಲಯಗಳ ಕುಲಪತಿಯಾಗಲು ಸಾಧ್ಯವಿಲ್ಲ. ಇದು ಐತಿಹಾಸಿಕವಾಗಿ ಮಹತ್ವದ ತೀರ್ಪು. ಇದನ್ನು ತಮಿಳುನಾಡಿನ ಜನರಿಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಸಿಕ್ಕ ವಿಜಯವೆಂದು ನೋಡಬೇಕು. ರಾಜ್ಯಪಾಲರು ಇನ್ನು ಮುಂದೆ ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ತಮಿಳುನಾಡು ತನ್ನ ಹೆಸರನ್ನು ಬದಲಾಯಿಸುತ್ತದೆ ಎಂದು ಹೇಳಿದವರು ಈ ರಾಜ್ಯಪಾಲರು. ಅವರು ರಾಜ್ಯ ಸರ್ಕಾರದ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದಾರೆ. ರಾಜ್ಯಪಾಲರು (ಆರ್.ಎನ್.ರವಿ) ಕೇಂದ್ರ ಸರ್ಕಾರದ ಏಜೆಂಟ್ ಆಗಿರುವುದರಿಂದ, ಈ ತೀರ್ಪು ಕೇಂದ್ರ ಸರ್ಕಾರಕ್ಕೂ ಸೋಲು" ಎಂದು ರಾಮ್ ಟೀಕಿಸಿದರು.
ಅಂಬೇಡ್ಕರ್ ಮಾತುಗಳನ್ನು ಪುನರುಚ್ಚರಿಸಿದ ರಾಮ್ "ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಅದನ್ನು ಆಳುವವರು ಸರಿಯಾಗಿಲ್ಲದಿದ್ದರೆ, ಕಾನೂನು ಕೆಟ್ಟದಾಗುತ್ತದೆ" ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಅವರು ಪುನರುಚ್ಚರಿಸಿದರು.
"ರಾಜ್ಯಪಾಲರು ತಮಗೆ ಅಧಿಕಾರವಿದೆ, ಪ್ರತ್ಯೇಕ ಸರ್ಕಾರ ನಡೆಸಬಹುದು ಎಂದುಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಈಗಾಗಲೇ, ಅಣ್ಣಾಮಲೈ ಇರುವವರೆಗೆ ನಮಗೆ ಒಳ್ಳೆಯದು ಎಂದು ಹೇಳಿದ್ದಾರೆ. ತಮಿಳುನಾಡು ರಾಜ್ಯಪಾಲರಿಗೆ ಸ್ವಾಭಿಮಾನವಿದ್ದರೆ ಅವರು ಹುದ್ದೆಗೆ ರಾಜೀನಾಮೆ ನೀಡಬೇಕು. ಅದು ನಡೆಯದಿದ್ದರೆ, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಜಾಗೊಳಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯಪಾಲರಿಗೆ ಹೆಚ್ಚಿನ ಅವಕಾಶವಿಲ್ಲ. ಈ ತೀರ್ಪು ಎಲ್ಲಾ ರಾಜ್ಯ ರಾಜ್ಯಪಾಲರಿಗೂ ಅನ್ವಯಿಸುತ್ತದೆ" ಎಂದರು.
ಇದನ್ನೂ ಓದಿ: ಮಸೂದೆಗಳಿಗೆ ಸಹಿ ಹಾಕದೆ ತಡೆಹಿಡಿಯುವುದು 'ಕಾನೂನುಬಾಹಿರ': ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡು ರಾಜ್ಯಪಾಲರಿಗೆ ಭಾರಿ ಹಿನ್ನಡೆ