ವಾಷಿಂಗ್ಟನ್, ಅಮೆರಿಕ: ಹಾರ್ಮುಜ್ ಜಲಸಂಧಿಗೆ ಪ್ರವೇಶವನ್ನು ನಿರ್ಬಂಧಿಸಲು ಇರಾನ್ ಮುಂದಾಗುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ದೇಶಗಳು ತೈಲ ಬೆಲೆಗಳನ್ನು ಇಳಿಕೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ನಾನು ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದಿರುವ ಅವರು ನೀವು ಶತ್ರುವಿನ ಕೈಗೆ ಸಿಕ್ಕಿಬೀಳುತ್ತಿದ್ದೀರಿ. ಹಾಗೆ ಮಾಡಬೇಡಿ! ಎಂದು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಸಂಸತ್ ಹಾರ್ಮುಜ್ ಜಲಸಂಧಿಗೆ ಪ್ರವೇಶವನ್ನು ನಿರ್ಬಂಧಿಸಲು ಅನುಮೋದನೆ ನೀಡಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಬಾಕಿ ಇದೆ.
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯ ಕಿರಿದಾದ ಮುಖಭಾಗವಾಗಿದ್ದು, ಜಾಗತಿಕವಾಗಿ ವ್ಯಾಪಾರವಾಗುವ ಎಲ್ಲಾ ತೈಲದ ಸುಮಾರು ಶೇ 20ರಷ್ಟು ವ್ಯಾಪಾರ ಈ ಜಲಸಂಧಿಯ ಮೂಲಕವೇ ನಡೆಯುತ್ತದೆ. ಅದರ ಕಿರಿದಾದ ಭಾಗ ಎಂದರೆ ಇದು ಕೇವಲ 33 ಕಿಲೋಮೀಟರ್ ಅಗಲವಿದೆ. ಅಲ್ಲಿ ಯಾವುದೇ ಅಡಚಣೆ ಉಂಟಾದರೆ ವಿಶ್ವಾದ್ಯಂತ ತೈಲ ಬೆಲೆಗಳು ಏರಿಕೆಯಾಗಬಹುದು, ಇದು ಅಮೆರಿಕದ ವ್ಯವಹಾರಗಳಿಗೂ ಹೊಡೆತ ಬೀಳಬಹುದು.
ಇರಾನ್ ಬಲವಾದ ನೌಕಾಪಡೆ ಹೊಂದಿರುವುದರಿಂದ ಅದು ವೇಗವಾದ ದಾಳಿ ಮಾಡಬಹುದು. ಇದು ಹಡಗುಗಳ ಸಂಚಾರವನ್ನು ಅಸ್ತಿರಗೊಳಿಸಬಹುದಾಗಿದೆ. ಇನ್ನು ಅದರ ಮಿತ್ರರಾಷ್ಟ್ರಗಳಾದ ಯೆಮೆನ್‌ನ ಹೌತಿ ಬಂಡುಕೋರರು, ಕೆಂಪು ಸಮುದ್ರದಲ್ಲಿ ಮಾಡಿದಂತೆ ಪರ್ಷಿಯನ್ ಕೊಲ್ಲಿಯ ತೀರದಿಂದ ಕ್ಷಿಪಣಿ ದಾಳಿ ಮಾಡಬಹುದಾದ ಸಾಧ್ಯತೆಗಳಿವೆ.
ಈ ನಡುವೆ ಅಮೆರಿಕ ಬಹ್ರೇನ್ ನಲ್ಲಿ ನೆಲೆಗೊಂಡಿರುವ ತನ್ನ 5ನೇ ನೌಕಾಪಡೆ ಮೂಲಕ ಜಲಸಂಧಿಯಲ್ಲಿ ಹಡಗುಗಳಿಗೆ ರಕ್ಷಣೆ ನೀಡುವ ಸಾಧ್ಯತೆ ಇದೆ. ಹೀಗಂತಾ ಅದು ಪ್ರತೀಜ್ಞೆ ಕೂಡಾ ಮಾಡಿದೆ. ಅಮೆರಿಕದ ಅಭಯದ ನಡುವೆ ತುಲನಾತ್ಮಕವಾಗಿ ಸಂಕ್ಷಿಪ್ತ ಗುಂಡಿನ ಚಕಮಕಿ ಕೂಡ ಹಡಗು ಸಂಚಾರಕ್ಕೆ ಅಪಾಯ ತಂದೊಡ್ಡಬಹುದು.
ಈ ಜಲಸಂಧಿ ಮುಚ್ಚುವ ನಿರ್ಧಾರವನ್ನು ಇರಾನ್ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಗೆ ಬಿಟ್ಟಿದೆ. ಈ ಕುರಿತಾಗಿ ಇನ್ನೂ ಚರ್ಚೆ ನಡೆಸಲಾಗುತ್ತಿದೆ. ಸದ್ಯ ಜಲಸಂಧಿ ಮುಚ್ಚುವ ಕುರಿತು ಚಿಂತನೆ ನಡೆಯುತ್ತಿದ್ದು, ಅಂತಿಮ ನಿರ್ಧಾರವಾಗಿಲ್ಲ.
ಇರಾನ್‌ನ ನಟಾಂಜ್, ಫೋರ್ಡೋ ಮತ್ತು ಇಸ್ಫಹಾನ್ ಎಂಬಲ್ಲಿನ ಭೂಗತ ಪರಮಾಣು ತಾಣಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಲಾಗಿದೆ ಎಂದು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.
ಆಡಳಿತ ಬದಲಾವಣೆ' ಎಂಬ ಪದವನ್ನು ಬಳಸುವುದು ರಾಜಕೀಯವಾಗಿ ಸರಿಯಲ್ಲ, ಆದರೆ ಪ್ರಸ್ತುತ ಇರಾನಿನ ಆಡಳಿತವು ಇರಾನ್ ಅನ್ನು ಮತ್ತೆ ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಾಗದಿದ್ದರೆ, ಆಡಳಿತ ಬದಲಾವಣೆ ಏಕೆ ಆಗುವುದಿಲ್ಲ??? MIGA!!! ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.