ಕೋಲ್ಕತಾ: ಹಿಂದೂಗಳ ಮೇಲೆ ಪದೇ ಪದೆ ದಾಳಿ ನಡೆಯುತ್ತಿರುವ ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳನ್ನು ಪ್ರಕ್ಷುಬ್ಧ ಪ್ರದೇಶಗಳೆಂದು ಘೋಷಿಸಿ ಆ ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (ಎಎಫ್ಎಸ್ಪಿಎ) ಜಾರಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿಯ ಪುರುಲಿಯಾ ಸಂಸದ ಜ್ಯೋತಿರ್ಮಯ್ ಸಿಂಗ್ ಮಹತೋ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಮುರ್ಷಿದಾಬಾದ್, ಮಾಲ್ಡಾ, ನಾಡಿಯಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ನಡೆಯುತ್ತಿವೆ ಹಾಗೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ "ತುಷ್ಟೀಕರಣ" ರಾಜಕೀಯದಿಂದಾಗಿ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಮಹತೋ ಏಪ್ರಿಲ್ 13 ರಂದು ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ 86 ಕ್ಕೂ ಹೆಚ್ಚು ಹಿಂದೂ ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಅಥವಾ ನಾಶಪಡಿಸಲಾಗಿದೆ ಮತ್ತು ಹರ್ ಗೋಬಿಂದೋ ದಾಸ್ ಮತ್ತು ಅವರ ಮಗ ಸೇರಿದಂತೆ ನಾಗರಿಕರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಜೌಬೋನಾ ಗ್ರಾಮದಲ್ಲಿ ವೀಳ್ಯದೆಲೆ ತೋಟಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದು ಉದ್ದೇಶಿತ ಆರ್ಥಿಕ ವಿಧ್ವಂಸಕ ಕೃತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂಥ ಘಟನೆಗಳು ರಾಜ್ಯದ ಎಲ್ಲ ಕಡೆ ನಡೆಯುತ್ತಿವೆ. ಗಡಿ ಜಿಲ್ಲೆಗಳಲ್ಲಿ ಇದೇ ರೀತಿಯ ಅಶಾಂತಿ ಭುಗಿಲೆದ್ದಿದ್ದು, ಹಿಂದೂ ಸಮುದಾಯ ದುರ್ಬಲ ಮತ್ತು ಧ್ವನಿಯಿಲ್ಲದ ಸಮುದಾಯವಾಗುತ್ತಿದೆ ಎಂದು ಸಂಸದ ಮಹತೋ ಹೇಳಿದರು.
ವಕ್ಫ್ (ತಿದ್ದುಪಡಿ) ಕಾಯ್ದೆಯ ಬಗ್ಗೆ ಭುಗಿಲೆದ್ದ ಹಿಂಸಾಚಾರವನ್ನು ಉಲ್ಲೇಖಿಸಿದ ಮಹತೋ, ಗುಂಪುಗಳು ಹಿಂದೂಗಳ ಮನೆಗಳು, ಸಾರ್ವಜನಿಕ ಆಸ್ತಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿವೆ ಎಂದು ಆರೋಪಿಸಿದರು. ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನಿಯೋಜನೆಗೆ ಆದೇಶಿಸಬೇಕಾಯಿತು. ಇದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು.
1990 ರ ಕಾಶ್ಮೀರಿ ಪಂಡಿತರ ಪಲಾಯನಕ್ಕೆ ಈಗಿನ ಸಂದರ್ಭವನ್ನು ಹೋಲಿಸಿದ ಅವರು, ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಬಂಗಾಳದಲ್ಲಿ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಬಹುದು ಎಂದು ಎಚ್ಚರಿಸಿದರು. "ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಎಎಫ್ಎಸ್ಪಿಎ ಘೋಷಿಸುವುದನ್ನು ಪರಿಗಣಿಸುವಂತೆ ನಾನು ನಿಮ್ಮನ್ನು ಅತ್ಯಂತ ಗೌರವಯುತವಾಗಿ ಒತ್ತಾಯಿಸುತ್ತೇನೆ" ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ : ಮುರ್ಷಿದಾಬಾದ್ನಿಂದ ನೂರಾರು ಜನ ಪಲಾಯನ; ಜೀವ ಉಳಿಸಿಕೊಳ್ಳಲು ನದಿ ದಾಟಿ ಓಡಿ ಹೋದ ಜನ! - WAQF VIOLENCE