ಜಮ್ಮು: ಕಿಶ್ತವಾರ್ ಜಿಲ್ಲೆಯ ಚಟ್ರೂ ಅರಣ್ಯ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಓರ್ವ ಭಯೋತ್ಪಾದಕನನ್ನು ಕೊಂದು ಹಾಕಿವೆ. ಪ್ರತಿಕೂಲ ಹವಾಮಾನದ ಮಧ್ಯೆಯೂ ಭದ್ರತಾ ಪಡೆಗಳು ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರೆಸಿವೆ.
"ನಿಖರ ಗುಪ್ತಚರ ಮಾಹಿತಿಯನ್ನು ಆಧರಿಸಿ ಏಪ್ರಿಲ್ 9 ರಂದು ಕಿಶ್ತವಾರ್ನ ಚಟ್ರೂ ಅರಣ್ಯ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದಲ್ಲಿ ಆಪ್ ಚಟ್ರೂ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಅದೇ ದಿನ ಸಂಜೆ ಉಗ್ರಗಾಮಿಗಳನ್ನು ಪತ್ತೆ ಮಾಡಲಾಯಿತು. ಆ ಸಂದರ್ಭದಲ್ಲಿ ಉಗ್ರಗಾಮಿಗಳೊಂದಿಗೆ ಗುಂಡಿನ ಚಕಮಕಿ ನಡೆಯಿತು. ಈವರೆಗೆ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಪ್ರತಿಕೂಲ ಹವಾಮಾನದ ಮಧ್ಯೆ ದುರ್ಗಮ ಪ್ರದೇಶದಲ್ಲಿ ನಮ್ಮ ವೀರ ಯೋಧರು ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರೆಸಿದ್ದಾರೆ" ಎಂದು 16 ಕಾರ್ಪ್ಸ್ ವಕ್ತಾರರು ಹೇಳಿದರು.
ಕೆಲ ಸಮಯದಿಂದ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಪ್ಯಾರಾ ಕಮಾಂಡೋಗಳು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಬೆಳಿಗ್ಗೆಯಿಂದ ಈ ಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ಈ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರು ಪರಾರಿಯಾಗದಂತೆ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಮುಂಬೈ ದಾಳಿ ಮಾಸ್ಟರ್ಮೈಂಡ್ ತಹವ್ವುರ್ ರಾಣಾ 18 ದಿನಗಳ ಕಾಲ NIA ಕಸ್ಟಡಿಗೆ - NIA TAKES RANA INTO 18 DAY CUSTODY
ಕಥುವಾದಲ್ಲಿದಲ್ಲಿ ಮೊದಲಿಗೆ ಮಾರ್ಚ್ 23 ರಂದು ಅಂತಾರಾಷ್ಟ್ರೀಯ ಗಡಿ ರೇಖೆ ಬಳಿಯ ಹಿರಾನಗರ ವಲಯದಲ್ಲಿರುವ ಸನಿಯಾಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ಶಂಕಿತ ಜೆಇಎಂ ಉಗ್ರರೊಂದಿಗೆ ಗುಂಡಿನ ಚಕಮಕಿ ಆರಂಭವಾಗಿತ್ತು. ಈ ಎನ್ಕೌಂಟರ್ನಲ್ಲಿ ಉಗ್ರರು ತಪ್ಪಿಸಿಕೊಳ್ಳಲು ಯಶಸ್ವಿಯಾದರೂ ಅವರ ಬಳಿ ಇದ್ದ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್‌ಗಳ ಮ್ಯಾಗಜೀನ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು.
ಎರಡನೇ ಎನ್‌ಕೌಂಟರ್ ಮಾರ್ಚ್ 29 ರಂದು ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದು, ಕೆಲ ಜನರು ಗಾಯಗೊಂಡರು. ಇಬ್ಬರು ಉಗ್ರರನ್ನು ಸದೆಬಡಿಯಲಾಯಿತು. ಈ ವೇಳೆ ಸ್ಥಳದಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಈ ಎನ್‌ಕೌಂಟರ್ ಕುರಿತು ಪೊಲೀಸರು ಕೂಡ ಎಕ್ಸ್ ಜಾಲತಾಣದಲ್ಲಿ ದೃಢಪಡಿಸಿದ್ದರು.
ಉಗ್ರರ ಅನುಮಾನಾಸ್ಪದ ಚಲನವಲನಗಳ ಕುರಿತ ಮಾಹಿತಿ ಲಭ್ಯವಾದ ಹಿನ್ನೆಲೆ ಮಾರ್ಚ್ 31 ರ ಸೋಮವಾರ ಮಧ್ಯಾಹ್ನದಿಂದ ಭದ್ರತಾ ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದವು. ಶೋಧ ಕಾರ್ಯದಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು, ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ), ಗಡಿ ಭದ್ರತಾ ಪಡೆ (ಬಿಎಸ್ಎಫ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಹೆಚ್ಚುವರಿ ಪಡೆಗಳು ಭಾಗಿಯಾಗಿದ್ದವು.