ಅವಂತಿಪೋರಾ (ಜಮ್ಮು ಮತ್ತು ಕಾಶ್ಮೀರ): ಗುರುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದ ನಾದರ್, ಟ್ರಾಲ್ ಪ್ರದೇಶದಲ್ಲಿ ಪೊಲೀಸ್ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿದೆ.
ಈ ಬಗ್ಗೆ ಕಾಶ್ಮೀರ ಪೊಲೀಸರು ತಮ್ಮ ಅಧಿಕೃತ 'X' ಹ್ಯಾಂಡಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಅವಂತಿಪೋರಾದ ನಾದರ್, ಟ್ರಾಲ್ ಪ್ರದೇಶದಲ್ಲಿ ಎನ್ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ' ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತಂಡವು ಟ್ರಾಲ್‌ನ ನಾಡರ್ ಪ್ರದೇಶದಲ್ಲಿ ಸುತ್ತುವರೆದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಆಗ ಪರಸ್ಪರ ಗುಂಡಿನ ಚಕಮಕಿ ಆರಂಭಗೊಂಡಿದೆ. ಎರಡೂ ಕಡೆಯಲ್ಲೂ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#Encounter has started at Nader, Tral area of #Awantipora. Police and security forces are on the job. Further details shall follow.@JmuKmrPolice
— Kashmir Zone Police (@KashmirPolice) May 15, 2025
"ಪೊಲೀಸರು ಶಂಕಿತರನ್ನು ಪತ್ತೆ ಮಾಡುತ್ತಿದ್ದಂತೆ, ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಆಗ ಪರಸ್ಪರ ಗುಂಡಿನ ಕಾಳಗ ಶುರುವಾಗಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಇತ್ತೀಚೆಗೆ, ಮಂಗಳವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೈಬಾಗೆ ಸೇರಿದ ಮೂವರು ಭಯೋತ್ಪಾದಕರನ್ನು ಸೇನಾಪಡೆಗಳು ಹೊಡೆದುರುಳಿಸಿದ್ದವು. ಲಷ್ಕರ್-ಎ-ತೈಬಾದ (LeT) ಮೂವರು ಭಯೋತ್ಪಾದಕರಲ್ಲಿ ಇಬ್ಬರ ಗುರುತು ಪತ್ತೆಯಾಗಿತ್ತು.
ಶೋಪಿಯಾನ್ ಜಿಲ್ಲೆಯ ಕೆಲ್ಲರ್‌ನ ಶುಕ್ರೂ ಅರಣ್ಯ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದರು. ಮೂಲಗಳ ಪ್ರಕಾರ, ಭಯೋತ್ಪಾದಕರಲ್ಲಿ ಒಬ್ಬನನ್ನು ಶೋಪಿಯಾನ್‌ನ ಚೋಟಿಪೋರಾ ಹೀರ್‌ಪೋರಾದ ನಿವಾಸಿ ಶಾಹಿದ್ ಕುಟ್ಟಾಯ ಎಂದು ಗುರುತಿಸಲಾಗಿತ್ತು.
ಈತ ಎಲ್‌ಇಟಿ ಸಂಘಟನೆಯವನಾಗಿದ್ದು, ಮಾರ್ಚ್ 8, 2023ರಂದು ಭಯೋತ್ಪಾದಕ ಸಂಘಟನೆಗೆ ಸೇರಿದ್ದ. ಏಪ್ರಿಲ್ 8, 2024ರಂದು ಶ್ರೀನಗರದ ಡ್ಯಾನಿಶ್ ರೆಸಾರ್ಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ. ಇದರಲ್ಲಿ ಇಬ್ಬರು ಜರ್ಮನ್ ಪ್ರವಾಸಿಗರು ಮತ್ತು ಓರ್ವ ವಾಹನ ಚಾಲಕ ಗಾಯಗೊಂಡಿದ್ದರು. ಜೊತೆಗೆ, ಮೇ 18, 2024ರಂದು ಹೀರ್‌ಪೋರಾದಲ್ಲಿ ಬಿಜೆಪಿ ಸರಪಂಚ್ ಹತ್ಯೆಯಲ್ಲಿ ಕುಟ್ಟಾಯ ಭಾಗವಹಿಸಿದ್ದ. ಅಲ್ಲದೆ, ಫೆಬ್ರವರಿ 3, 2025 ರಂದು ಕುಲ್ಗಾಮ್‌ನ ಬೆಹಿಬಾಗ್‌ನಲ್ಲಿ ಪ್ರಾದೇಶಿಕ ಸೇನಾ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದನೆಂಬ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುತಿಸಲ್ಪಟ್ಟ ಇನ್ನೊಬ್ಬ ಭಯೋತ್ಪಾದಕ ಅದ್ನಾನ್ ಶಫಿ ದಾರ್, ಶೋಪಿಯಾನ್‌ನ ವಂಡುನಾ ಮೆಲ್ಹೋರಾ ನಿವಾಸಿ. ಅಕ್ಟೋಬರ್ 18, 2024ರಂದು ಎಲ್‌ಇಟಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಈತ, ಅಕ್ಟೋಬರ್ 18, 2024ರಂದು ಶೋಪಿಯಾನ್‌ನ ವಾಚಿಯಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ. ಮತ್ತೋರ್ವ ಭಯೋತ್ಪಾದಕನ ಗುರುತು ಇನ್ನೂ ದೃಢವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತ - ಪಾಕ್ ಸಂಘರ್ಷದಲ್ಲಿ ತನ್ನ ಶಕ್ತಿ - ಸಾಮರ್ಥ್ಯ ತೋರಿದ ಆಕಾಶ್ತೀರ್: ಹೀಗಿದೆ ಇದರ ರಣಾರ್ಭಟ!!