ನವದೆಹಲಿ: ಟ್ಯಾಕ್ಸಿ ಮತ್ತು ಟ್ರಕ್ ಚಾಲಕರನ್ನು ಕೊಂದು, ಶವಗಳನ್ನು ಮೊಸಳೆಗಳಿಗೆ ತಿನ್ನಿಸುತ್ತಿದ್ದ ಕುಖ್ಯಾತ ಆಯುರ್ವೇದ ವೈದ್ಯ ಹಾಗು ಸರಣಿ ಹಂತಕ ದೇವೇಂದರ್ ಶರ್ಮಾ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜನರನ್ನು ಹತ್ಯೆಗೈದು ಅವರ ಮೃತದೇಹಗಳನ್ನು ಬೇರೆಡೆ ಸಾಗಿಸಿ, ಮೊಸಳೆಗಳಿಗೆ ಹಾಕುತ್ತಿದ್ದ ಕಾರಣಕ್ಕೆ ಈತನನ್ನು 'ಡಾಕ್ಟರ್ ಡೆತ್' ಎಂದೇ ಕರೆಯಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ರಾಜಸ್ಥಾನದ ದೌಸಾದ ಆಶ್ರಮವೊಂದರಲ್ಲಿ ನಕಲಿ ಗುರುತಿನಡಿ ಅರ್ಚಕನಾಗಿ ಮಾರುವೇಷದಲ್ಲಿದ್ದ ನಿಖರ ಮಾಹಿತಿ ಪಡೆದು ಅಪರಾಧಿಯನ್ನು ಸೋಮವಾರ ಬಂಧಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿ ಈತ: 67 ವರ್ಷದ ದೇವೇಂದರ್ ಶರ್ಮಾ ಹಲವು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆ. ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಾದ್ಯಂತ 7 ಪ್ರತ್ಯೇಕ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗುರಗಾಂವ್ ನ್ಯಾಯಾಲಯವು ಈತನಿಗೆ ಮರಣದಂಡನೆ ಶಿಕ್ಷೆಯನ್ನೂ ವಿಧಿಸಿತ್ತು.
2002 ಮತ್ತು 2004ರ ನಡುವೆ ಅನೇಕ ಟ್ಯಾಕ್ಸಿ ಮತ್ತು ಟ್ರಕ್ ಚಾಲಕರನ್ನು ಕ್ರೂರವಾಗಿ ಹತ್ಯೆಗೈದಿರುವ ಈತ, ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. 2023ರ ಆಗಸ್ಟ್ ನಲ್ಲಿ ಪೆರೋಲ್ ಪಡೆದು ಹೊರಬಂದಿದ್ದ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ (ಅಪರಾಧ) ಆದಿತ್ಯ ಗೌತಮ್ ಹೇಳಿದರು.
"ಶರ್ಮಾ ಮತ್ತವನ ಸಹಚರರು ಚಾಲಕರನ್ನು ಪ್ರವಾಸಗಳಿಗೆಂದು ಸುಳ್ಳು ಹೇಳಿ ಕರೆಸಿಕೊಳ್ಳುತ್ತಿದ್ದರು. ನಂತರ ಅವರನ್ನು ಕೊಲೆ ಮಾಡಿ, ವಾಹನಗಳನ್ನು ಕಳ್ಳ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಸಾಕ್ಷ್ಯ ಅಳಿಸಿ ಹಾಕಲು ಶವಗಳನ್ನು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆಗಳಿರುವ ನೀರಿಗೆ ಎಸೆಯುತ್ತಿದ್ದರು. ಹೀಗೆ ಕೊಲೆ, ಅಪಹರಣ ಮತ್ತು ದರೋಡೆ ಸೇರಿದಂತೆ 27ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ದೀರ್ಘ ಅಪರಾಧ ಇತಿಹಾಸವನ್ನು ಶರ್ಮಾ ಹೊಂದಿದ್ದಾನೆ ಎಂದು ಡಿಸಿಪಿ ತಿಳಿಸಿದರು.
125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿ: ಇದಕ್ಕೂ ಮೊದಲು, 1995 ಮತ್ತು 2004ರ ನಡುವೆ ಅಕ್ರಮ ಮೂತ್ರಪಿಂಡ ಕಸಿ ಜಾಲ ನಡೆಸುತ್ತಿದ್ದ. ಬಿಎಎಂಎಸ್ (ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆ ಪದವಿ) ಮಾಡಿರುವ ಶರ್ಮಾ, 1984ರಲ್ಲಿ ರಾಜಸ್ಥಾನದಲ್ಲಿ ಒಂದು ಕ್ಲಿನಿಕ್ ತೆರೆದಿದ್ದ. ಹಲವಾರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಮಧ್ಯವರ್ತಿಗಳ ಸಹಾಯದಿಂದ 125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿ ಮಾಡಿದ್ದಾನೆ. ಇದನ್ನು ವಿಚಾರಣೆಯ ವೇಳೆ ಆತನೇ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಕಿಡ್ನಿ ದಂಧೆ ಮತ್ತು ಸರಣಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶರ್ಮಾನನ್ನು 2004ರಲ್ಲಿ ಮೊದಲ ಬಾರಿಗೆ ಬಂಧಿಸಲಾಗಿತ್ತು.
ಪೆರೋಲ್ ದುರುಪಯೋಗ: ಅಪರಾಧಿ ಶರ್ಮಾನಿಗೆ 2020ರ ಜನವರಿ 28ರಂದು ಕೋರ್ಟ್, 20 ದಿನಗಳ ಪೆರೋಲ್ ನೀಡಿತ್ತು. ಹೀಗೆ ಹೋದವ ಏಳು ತಿಂಗಳು ಪರಾರಿಯಾಗಿದ್ದ. ನಂತರ ದೆಹಲಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. 2023ರ ಜೂನ್ ನಲ್ಲಿ, ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮತ್ತೆ ಕೋರ್ಟ್ ಎರಡು ತಿಂಗಳ ಪೆರೋಲ್ ನೀಡಿತು. ಆಗಸ್ಟ್ 3, 2023ರ ನಂತರ ಮತ್ತೆ ನಾಪತ್ತೆಯಾಗಿದ್ದು, ಇದೀಗ ಸೆರೆ ಸಿಕ್ಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ: ಎನ್ಐಎ, ಐಬಿಯಿಂದ ಯೂಟ್ಯೂಬರ್ ಜ್ಯೋತಿ ತೀವ್ರ ವಿಚಾರಣೆ - YOUTUBER JYOTI INVESTIGATION