ಚೆನ್ನೈ (ತಮಿಳುನಾಡು): ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ಅವರನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಉಪ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲಾಗಿದೆ.
ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಪೊನ್ಮುಡಿ ಅವರನ್ನು ಪಕ್ಷದ ಪ್ರಮುಖ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ. ವಜಾಕ್ಕೆ ಕಾರಣ ಏನು ಎಂಬ ಕುರಿತು ಅವರು ಉಲ್ಲೇಖಿಸಿಲ್ಲ. ಪೊನ್ಮುಡಿ ಇತ್ತೀಚಿಗೆ ನೀಡಿದ್ದ ಶೈವ ಮತ್ತು ವೈಷ್ಣವ ಪಂತಗಳು ಹಾಗೂ ಅವುಗಳ ಧಾರ್ಮಿಕ ಗುರುತುಗಳು ಮತ್ತು ಲೈಂಗಿಕ ಕಾರ್ಯಕರ್ತರ ಕುರಿತು ನೀಡಿದ್ದ ಅವಹೇಳನಕಾರಿ ಹೇಳಿಕೆ ಸಾಕಷ್ಟು ಟೀಕೆಗೆ ಒಳಗಾಗಿದ್ದು, ಇದು ಅಸೂಕ್ಷ್ಮವಾದ ಹೇಳಿಕೆ ಎಂದು ಸ್ವ ಪಕ್ಷೀಯರು ಸೇರಿದಂತೆ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿತ್ತು.
ಪಕ್ಷದ ನಾಯಕಿ ಕನಿಮೋಳಿ ಅವರಿಂದಲೂ ಸಚಿವರ ಹೇಳಿಕೆಗೆ ಖಂಡನೆ: ಡಿಎಂಕೆ ಸಂಸದೆ ಮತ್ತು ಹಿರಿಯ ನಾಯಕಿ ಕನಿಮೋಳಿ, "ಸಚಿವ ಪೊನ್ಮುಡಿ ಅವರ ಇತ್ತೀಚಿನ ಹೇಳಿಕೆ ಸ್ವೀಕಾರ್ಹವಲ್ಲ. ಯಾವುದೇ ಸಂದರ್ಭ ಇರಲಿ ಈ ರೀತಿಯ ಹೇಳಿಕೆ ಖಂಡನಾರ್ಹ" ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಟೀಕಿಸಿದ್ದರು.
ಕನಿಮೋಳಿ ಹೇಳಿಕೆ ಬೆಂಬಲಿಸಿದ ಬಿಜೆಪಿ: ಕನಿಮೋಳಿ ಹೇಳಿಕೆಯನ್ನು ಬೆಂಬಲಿಸಿದ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣ್ ತಿರುಪತಿ, ಪೊನ್ನುಡಿ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಪೊನ್ನುಡಿ ಸ್ಥಾನಕ್ಕೆ ಸಂಸದ ತಿರುಚಿ ಶಿವ: ಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಪೊನ್ನುಡಿ ಅವರನ್ನು ತೆಗೆದು ಹಾಕಿದ ಬೆನ್ನಲ್ಲೇ, ರಾಜ್ಯಸಭಾ ಸಂಸದ ತಿರುಚಿ ಶಿವ ಅವರನ್ನು ನೇಮಕ ಮಾಡಲಾಗಿದೆ. ಡಿಎಂಕೆ ಸಂವಿಧಾನದ ನಿಯಮ 17, ಸೆಕ್ಷನ್ 3 ರ ಅಡಿ ಈ ಬದಲಾವಣೆಯನ್ನು ಮಾಡಲಾಗಿದೆ. ತಿರುಚಿ ಶಿವ ಈ ಹಿಂದೆ ಪಕ್ಷದ ನೀತಿ ಪ್ರಚಾರ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಪೊನ್ಮುಡಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲ ಸಲವೇನೂ ಅಲ್ಲ. ಈ ಹಿಂದೆಯೂ ಕೂಡ ಅವರು ಉತ್ತರ ಭಾರತೀಯ ವಲಸಿಗರು ಕೊಯಮತ್ತೂರಿನಲ್ಲಿ ಪಾನೀಪೂರಿ ಮಾರುವ ಕುರಿತು ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ; ಕೇರಳ ಸಿಎಂ ಪ್ರಧಾನ ಕಾರ್ಯದರ್ಶಿಯ ವಿರುದ್ಧ ಸಿಬಿಐ ತನಿಖೆಗೆ ಆದೇಶ
ಇದನ್ನೂ ಓದಿ: ಮುಟ್ಟಾದ ವಿದ್ಯಾರ್ಥಿನಿಗೆ ತರಗತಿಯಿಂದ ಹೊರಗೆ ಪರೀಕ್ಷೆ ಬರೆಸಿದ ಶಾಲಾ ಸಿಬ್ಬಂದಿ; ಸಾರ್ವಜನಿಕರಿಂದ ಆಕ್ರೋಶ