ವಲ್ಸಾದ್ (ಗುಜರಾತ್) : ನಮ್ಮ ಧರ್ಮ ಮತ್ತು ಆಚರಣೆ ಕೊಡುವಷ್ಟು ಸಂತಸ ಯಾವುದೂ ಸಿಗುವುದಿಲ್ಲ. ಧರ್ಮವೊಂದೇ ಸಂತೋಷದತ್ತ ಕೊಂಡೊಯ್ಯಬಲ್ಲದು. ಅಂತಹ ಧರ್ಮವನ್ನು ದುರಾಸೆ, ಆಮಿಷ ಅಥವಾ ಭಯದಿಂದ ಬದಲಿಸಬೇಡಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದರು.
ಗುಜರಾತಿನ ವಲ್ಸಾದ್ ಜಿಲ್ಲೆಯ ಬಾರುಮಹಲ್ ಸದ್ಗುರು ಧಾಮ್ನಲ್ಲಿನ ಶ್ರೀ ಭಾವ್ ಭಾವೇಶ್ವರ ಮಹಾದೇವ ದೇವಾಲಯದಲ್ಲಿ ಶನಿವಾರ ನಡೆದ ರಜತ ಮಹೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ನಿತ್ಯ ಬದುಕಿನಲ್ಲಿ ದುರಾಸೆ, ಪ್ರಲೋಭನೆ ಮತ್ತು ಆಮಿಷವು ಜನರನ್ನು ತಮ್ಮ ತಮ್ಮ ಧರ್ಮದಿಂದ ದೂರ ಮಾಡುತ್ತವೆ. ಆದರೆ, ನಾವು ಜನ್ಮತಃ ಹುಟ್ಟುವ ಧರ್ಮ ಕೊಡುವಷ್ಟ ಸಂತಸ, ನೆಮ್ಮದಿ ಎಲ್ಲೂ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಯಾರಿಗೂ ಭಯಪಡಬೇಡಿ: ದುರಾಸೆ ಅಥವಾ ಯಾರದ್ದೋ ಭಯಕ್ಕೆ ತುತ್ತಾಗಿ ಜನರು ಧರ್ಮ ಬದಲಾವಣೆ ಮಾಡಬಾರದು. ನಮಗೆ ಒಂದಾಗಿರುವುದು ಹೇಗೆಂದು ತಿಳಿದಿದೆ. ಇನ್ನೊಬ್ಬರನ್ನೂ ಕೂಡಿಸಿಕೊಂಡು ಒಂದಾಗಿರಲು ಬಯಸುತ್ತೇವೆ. ನಮ್ಮದು ಹೋರಾಟ ಮನೋಭಾವವಲ್ಲ. ಆದರೆ, ನಮ್ಮ ಉಳಿವಿಗಾಗಿ ಹೋರಾಡಬೇಕು ಎಂದರು.
ಏನೇ ಆದರೂ, ನಮ್ಮ ಧರ್ಮ ಬಿಡಬಾರದು ಎಂದು ಸಲಹೆ: ಇಂದು ನಮ್ಮನ್ನು ಮತಾಂತರಿಸಲು ಬಯಸುವ ಹಲವು ಶಕ್ತಿಗಳಿವೆ. ಅದಕ್ಕಾಗಿ ದೈನಂದಿನ ಜೀವನದಲ್ಲಿ ಪ್ರಲೋಭನೆ ತೋರುವ ಮತ್ತು ಆಮಿಷವೊಡ್ಡು ಘಟನೆಗಳು ನಡೆಯುತ್ತಿರುತ್ತವೆ. ಅದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ಏನೇ ಆದರೂ, ನಮ್ಮ ಧರ್ಮ ಬಿಡಬಾರದು ಎಂದು ಹೇಳಿದರು.
ನಮ್ಮದು ಧರ್ಮದ ದೇಶ. ಧಾರ್ಮಿಕ ನಡವಳಿಕೆಗಳು ಸಮಾಜವನ್ನು ಆವರಿಸಿದಾಗ, ನಮ್ಮ ದೇಶವು ಔನ್ನತ್ಯ ಸಾಧಿಸಲಿದೆ. ಇದಕ್ಕಾಗಿಯೇ ಜಗತ್ತು ನಮ್ಮತ್ತ ಚಿತ್ತ ನೆಟ್ಟಿದೆ. ಧಾರ್ಮಿಕ ಕೇಂದ್ರಗಳನ್ನು ಬಲಪಡಿಸುವುದು ನಮ್ಮ ಕರ್ತವ್ಯ. ಹಾಗೆ ಮಾಡುವುದರಿಂದ ನಮ್ಮ ಅಭಿವೃದ್ಧಿ, ರಾಷ್ಟ್ರ, ಮಾನವಕುಲಕ್ಕೆ ಸೇವೆ ಸಲ್ಲಿಸಿದಂತೆ ಎಂದರು.
ದೇವಾಲಯಗಳಿಂದ ಆರ್ಥಿಕತೆ ವೃದ್ಧಿ: ದೇವಾಲಯಗಳಲ್ಲಿ ನಡೆಯುವ ಆಚರಣೆಗಳು ಮತ್ತು ದೈನಂದಿನ ಪೂಜೆಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತವೆ. ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳವು ಎಷ್ಟು ಟ್ರಿಲಿಯನ್ ಡಾಲರ್‌ಗಳು ಉತ್ಪತ್ತಿ ಮಾಡಿದೆ ಎಂಬುದು ನಿಮಗೆ ಗೊತ್ತು. ನಾವು ಧರ್ಮದ ಹೆಸರಿನಲ್ಲಿ ವ್ಯಾಪಾರ ಮಾಡುವ ಜನರಲ್ಲ. ಅನಾನುಕೂಲತೆಗಳ ನಡುವೆ ಕೋಟ್ಯಂತರ ಸನಾತನಿಗಳು ಪವಿತ್ರ ಸ್ನಾನ ಮಾಡಲು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದರು. ಇದು ನಮ್ಮ ಧರ್ಮದ ಶಕ್ತಿ ಎಂದು ತಿಳಿಸಿದರು.
ಇದನ್ನೂ ಓದಿ: ಇವಿಎಂಗಳಿಗೆ ಇಂಟರ್ನೆಟ್, ಬ್ಲೂಟೂತ್ ಇಲ್ಲ- ಹ್ಯಾಕ್ ಮಾಡಲು ಬರಲ್ಲ: ಮತ್ತೊಮ್ಮೆ ಸ್ಪಷ್ಟಪಡಿಸಿದ ಚುನಾವಣಾ ಆಯೋಗ