ಕಾಸರಗೋಡು(ಕೇರಳ): ಹಲವು ವರ್ಷಗಳಿಂದ ರೂಢಿಯಲ್ಲಿದ್ದ ಸಂಪ್ರದಾಯವನ್ನು ವಿರೋಧಿಸಿ 30 ಭಕ್ತರು ಕಾಸರಗೋಡು ಜಿಲ್ಲೆಯ ಪಿಲಿಕೋಡ್ ಶ್ರೀ ರಯರಮಂಗಲ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದರ್ಶನ ಪಡೆದರು. ಈ ಮೊದಲು ದೇವಸ್ಥಾನ ಪ್ರವೇಶಿಸಲು ಕೆಲ ಸಮುದಾಯಗಳಿಗೆ ಮಾತ್ರ ಅವಕಾಶವಿದ್ದು, ಉಳಿದವರಿಗೆ ನಿರ್ಬಂಧವಿತ್ತು. ಆದರೆ ನಾಗರಿಕ ಸಮಿತಿ ಸದಸ್ಯರು ಭಾನುವಾರ ದೇವಾಲಯ ಪ್ರವೇಶಿಸಿದರು.
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಪುರಾತನ ದೇವಸ್ಥಾನದಲ್ಲಿ ಪೂಜೆ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ವಾರಿಯರ್ ಮತ್ತು ನಂಬೂತಿರಿ ಸಮುದಾಯಗಳಿಗೆ ಮಾತ್ರ (ದೇವಾಲಯದ ಒಳಾಂಗಣ) ಪ್ರವೇಶಿಸಲು ಅವಕಾಶವಿದೆ. ಆದ್ದರಿಂದ ಎಲ್ಲ ಸಮುದಾಯದವರಿಗೂ ಒಳಾಂಗಣ ಪ್ರವೇಶಿಸಿ ದರ್ಶನ ಪಡೆಯಲು ಅವಕಾಶ ನೀಡುವಂತೆ ನಾಗರಿಕ ಸಮಿತಿ ಒತ್ತಾಯಿಸಿತ್ತು. ಜೊತೆಗೆ, ಕಳೆದ ಡಿಸೆಂಬರ್ನಲ್ಲಿ ಈ ಸಮಿತಿ ಸಭೆ ಮಾಡಿ, ದೇವಾಲಯದ ಒಳಾಂಗಣ ಪ್ರವೇಶಿಸುವ ಕುರಿತು ನಿರ್ಣಯ ಕೈಗೊಂಡಿತ್ತು. ಬಳಿಕ ಜನರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸಿ ಕರೆ ನೀಡಲಾಗಿತ್ತು. ಅಂತೆಯೇ, ಭಾನುವಾರ 30 ಜನ ಸದಸ್ಯರು ದೇವಾಲಯದ ಒಳಾಂಗಣ ಪ್ರವೇಶಿಸಿ ದರ್ಶನ ಪಡೆದರು. ಈ ಮೂಲಕ ಹಳೆಯ ಸಂಪ್ರದಾಯವನ್ನು ಮುರಿದಿದ್ದಾರೆ.
"ದೇವಸ್ಥಾನದಲ್ಲಿನ ಪೂಜೆ ಮತ್ತು ಸಂಪ್ರದಾಯಗಳು ಸಾವಿರಾರು ವರ್ಷಗಳಿಂದ ರೂಢಿಯಲ್ಲಿರುವ ಪದ್ಧತಿಗಳಾಗಿದ್ದು, ಅವುಗಳನ್ನು ಎಲ್ಲರೂ ಅನುಸರಿಸಬೇಕಿದೆ" ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಗರ್ಭಗುಡಿ ಮತ್ತು ಒಳಾಂಗಣದ ಮಧ್ಯೆ ಒಂದು ಜಾಗ ಕೇವಲ ಅರ್ಚಕರ ಪ್ರವೇಶಕ್ಕೆ ಮಾತ್ರ ಮೀಸಲಾಗಿದೆ. ಇಲ್ಲಿ ಪೂಜಾ ಕೈಂಕರ್ಯಗಳು ನಡೆಯುವುದರಿಂದ ಬೇರೆ ಯಾರಿಗೂ ಪ್ರವೇಶಿಸಲು ಅವಕಾಶ ಇಲ್ಲ ಎಂದು ದೇವಾಲಯದ ಅರ್ಚಕರು ಸ್ಪಷ್ಟಪಡಿಸಿದ್ದಾರೆ.
ಪ್ರಾರ್ಥನೆ ಮತ್ತು ಪೂಜೆಗೆ ಬರುವ ಯಾವುದೇ ಭಕ್ತರನ್ನು ನಿರ್ಬಂಧಿಸಲ್ಲ. ಅರ್ಚಕರ ನಿರ್ಧಾರ ಮೇಲೆ ಮಂಡಳಿಯು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: ಈ ದೇವಾಲಯದಲ್ಲಿ ಹನುಮನಿಗೆ ಪತ್ನಿ ಸಹಿತ ಪೂಜಿಸಲಾಗುತ್ತೆ!: ಆಜನ್ಮ ಬ್ರಹ್ಮಚಾರಿಗೆ ಪತ್ನಿ ಇದ್ದರಾ?
ಇದನ್ನೂ ಓದಿ: ಬನಾರಸ್‌ನಲ್ಲಿದೆ 627 ವರ್ಷಗಳ ರಾಮ ದೇವಾಲಯ; ಇಲ್ಲಿ ಬ್ರಿಟಿಷರ ಕಣ್ತಪ್ಪಿಸಲು ಸ್ವಾತಂತ್ರ್ಯ ಹೋರಾಟಗಾರರಿಗಿತ್ತು ಆಶ್ರಯ