ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತೊಮ್ಮೆ ಮಾಲಿನ್ಯದಿಂದಾಗಿ ಸುದ್ದಿಯಾಗಿದೆ. ಏಪ್ರಿಲ್‌ನಲ್ಲಿ ದೆಹಲಿ ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಂದಿದೆ. ಇದು ದೆಹಲಿಯ ನಿವಾಸಿಗಳಿಗೆ ಇನ್ನೂ ಶುದ್ಧ ಗಾಳಿ ಲಭ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬೇಸಿಗೆಯಲ್ಲಿಯೇ ಪರಿಸ್ಥಿತಿ ಹೀಗಿದ್ದರೆ, ಚಳಿಗಾಲದಲ್ಲಿ ಅದು ಮತ್ತಷ್ಟು ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.
ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (CREA) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್‌ನಲ್ಲಿ ದೆಹಲಿಯ ಸರಾಸರಿ PM 2.5 ಮಟ್ಟವು ಪ್ರತಿ ಘನ ಮೀಟರ್‌ಗೆ 119 ಮೈಕ್ರೋಗ್ರಾಂಗಳಷ್ಟಿತ್ತು. ಇದು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಮಾನದಂಡಕ್ಕಿಂತ ಎಂಟು ಪಟ್ಟು ಹೆಚ್ಚಾಗಿದೆ.
ಗಾಳಿಯ PM 2.5ರ ಈ ಮಟ್ಟವು ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲ, ಅಂತಹ ಮಾಲಿನ್ಯದ ನಡುವೆ ದೀರ್ಘಕಾಲ ಬದುಕುವುದು ಉಸಿರಾಟದ ಕಾಯಿಲೆಗಳು, ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚು ಕಲುಷಿತ ನಗರಗಳು: ಏಪ್ರಿಲ್‌ನಲ್ಲಿ ಭಾರತದ 273 ನಗರಗಳಲ್ಲಿ ಸುಮಾರು 248 ನಗರಗಳು WHO ಸುರಕ್ಷತಾ ಮಾನದಂಡಗಳಿಗಿಂತ ಹೆಚ್ಚು ಕಲುಷಿತಗೊಂಡಿವೆ ಎಂದು ವರದಿ ತಿಳಿಸಿದೆ. ಅತ್ಯಂತ ಕಲುಷಿತ ನಗರಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣ ನಗರಗಳು ಪ್ರಮುಖವಾಗಿ ಸೇರಿವೆ.
ವರದಿಯ ಪ್ರಕಾರ, ಕಲುಷಿತ ನಗರದಲ್ಲಿ ಬೈರ್ನಿಹತ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಸಿವಾನ್, ಮೂರನೇ ಸ್ಥಾನದಲ್ಲಿ ರಾಜಗೀರ್, ನಾಲ್ಕನೇ ಸ್ಥಾನದಲ್ಲಿ ಗಾಜಿಯಾಬಾದ್ ಹಾಗೂ ಐದನೇ ಸ್ಥಾನದಲ್ಲಿ ದೆಹಲಿ ಇದೆ. ಹಾಗೆಯೇ, ಆರನೇ ಸ್ಥಾನದಲ್ಲಿ ಗುರುಗ್ರಾಮ್, ಏಳನೇ ಸ್ಥಾನದಲ್ಲಿ ಹಾಜಿಪುರ, ಎಂಟನೇ ಸ್ಥಾನದಲ್ಲಿ ಬಾಗ್ಪತ್, ಒಂಬತ್ತನೇ ಸ್ಥಾನದಲ್ಲಿ ಔರಂಗಾಬಾದ್ ಮತ್ತು ಹತ್ತನೇ ಸ್ಥಾನದಲ್ಲಿ ಸಸಾರಾಮ್ ಇದೆ.
ದೆಹಲಿಯಲ್ಲಿ ಏಪ್ರಿಲ್ ತಿಂಗಳ 24 ದಿನಗಳಲ್ಲಿ PM 2.5 ಮಟ್ಟವು ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂಗಳಿಗಿಂತ ಹೆಚ್ಚಿತ್ತು. ಆದರೆ WHO ಮಾನದಂಡಗಳ ಪ್ರಕಾರ, ಈ ಮಟ್ಟವು ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳವರೆಗೆ ಮಾತ್ರ ಸುರಕ್ಷಿತವಾಗಿದೆ. ದೆಹಲಿಯ ಗಾಳಿಯು ಕೆಟ್ಟದಾಗಿದೆ ಮಾತ್ರವಲ್ಲದೆ, ನಿರಂತರವಾಗಿ ಅಪಾಯಕಾರಿ ಮಟ್ಟದಲ್ಲಿದೆ ಎಂದು ಈ ವರದಿ ತೋರಿಸುತ್ತದೆ.
ದೇಶದ ಹಲವು ಭಾಗಗಳಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ಸಕಾಲದಲ್ಲಿ ನಿರ್ದಿಷ್ಟ ನೀತಿಗಳು ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಮಾಡದಿದ್ದರೆ, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭಯಾನಕವಾಗಬಹುದು ಎಂದು ಎಚ್ಚರಿಸಿದೆ.
ನಿರ್ಮಾಣ ಚಟುವಟಿಕೆಗಳು, ವಾಹನಗಳು ಮತ್ತು ಕೈಗಾರಿಕಾ ಮಾಲಿನ್ಯ: ಹವಾಮಾನ, ನಿರ್ಮಾಣ ಚಟುವಟಿಕೆಗಳು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಕೈಗಾರಿಕಾ ಮಾಲಿನ್ಯದಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಪರಿಸರವಾದಿ ಡಾ.ಜಿತೇಂದ್ರ ನಗರ್ ಹೇಳಿದ್ದಾರೆ.
ಚಳಿಗಾಲದಲ್ಲಿ ಭತ್ತದ ಪೈರಿನ ಕೂಳೆ ಸುಡುವುದರಿಂದಾಗಿ ದೆಹಲಿ-ಎನ್‌ಸಿಆರ್‌ನ ಗಾಳಿಯ ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸಿದೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸಂಸ್ಥೆಗಳು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವುದಲ್ಲದೆ, ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ಮತ್ತು ವಾಹನಗಳ ನಿಯಮಿತ ತಪಾಸಣೆಯಂತಹ ದೀರ್ಘಕಾಲೀನ ಕಾರ್ಯತಂತ್ರಗಳ ಮೇಲೆ ಕೆಲಸ ಮಾಡಬೇಕು. ಇದರಿಂದ ದೆಹಲಿಯ ನಿವಾಸಿಗಳು ಶುದ್ಧ ಗಾಳಿಯನ್ನು ಪಡೆಯಬಹುದು ಎಂದಿದ್ದಾರೆ.