ಮೇದಕ್, ತೆಲಂಗಾಣ: ಇಂದಿನ ಪೀಳಿಗೆಯವರು ಪ್ರೀತಿಯ ಹೆಸರಿನಲ್ಲಿ ಪುಸ್ತಕಗಳನ್ನು ಬದಿಗಿಟ್ಟು ಏನೇನೋ ಮಾಡುತ್ತಿದ್ದಾರೆ. ಭವಿಷ್ಯದ ಗುರಿಗಳನ್ನು ಬದಿಗಿಟ್ಟು ಬಂಗಾರದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಪ್ರೀತಿ ನಿಯಂತ್ರಣ ತಪ್ಪಿದಾಗ ಸಾವು,ಕೊಲೆ ಮತ್ತು ಆತ್ಮಹತ್ಯೆಯಂತಹ ಘಟನೆಗಳು ವರದಿಯಾಗುತ್ತಿರುತ್ತವೆ.
ಆದರೆ, ಇಲ್ಲೊಂದು ಜೋಡಿ ಹಿಡಿದ ಹಠ ಬಿಡದೇ ಸಾಧಿಸಿ ತೋರಿಸಿ ಇತರರಿಗೆ ಮಾದರಿಯಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟರು, ಮದುವೆಯೂ ಆಗಿದ್ದಾರೆ . ಬಾಳ ದೋಣಿಯಲ್ಲಿ ಜತೆಯಾಗಿ ಸಾಗಲು ನಿರ್ಧರಿಸಿದರೂ ಸರ್ಕಾರಿ ನೌಕರಿ ಪಡೆಯುವ ಗುರಿಯನ್ನು ಈ ಇಬ್ಬರು ಎಂದಿಗೂ ಮರೆಯಲಿಲ್ಲ.
ಜೀವನದಲ್ಲಿ ಜತೆಯಾಗಿ ಬದುಕಬೇಕು ಎಂದು ನಿರ್ಧರಿಸಿದ ಮೇಲೆ ಹಠ ಹಿಡಿದು ಓದಲು ನಿರ್ಧರಿಸಿದರು. ಅಂದ ಹಾಗೆ ನಾವು ಹೇಳಲು ಹೊರಟಿರುವ ಯಶಸ್ಸಿನ ಕಥೆ ಮೇದಕ್ ಜಿಲ್ಲೆಯ ನವೀನ್ ಮತ್ತು ಪದ್ಮಾ ಎಂಬ ಜೋಡಿಯದ್ದು. ಈ ಇಬ್ಬರು ದೃಢಸಂಕಲ್ಪದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ್ನು ಎದುರಿಸಿ ಒಬ್ಬರು ಅಂದರೆ ನವೀನ್ ಬರೋಬ್ಬರಿ 4 ಸರ್ಕಾರಿ ಕೆಲಸದ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಹಾಗೂ ಮತ್ತೊಬ್ಬರು 2 ಸರ್ಕಾರಿ ಉದ್ಯೋಗದ ಅವಕಾಶ ಪಡೆದು ಸಾಧನೆ ಮಾಡಿದ್ದಾರೆ.
ಈ ಸಾಧನೆ ಬಳಿಕ ತಮ್ಮಿಬ್ಬರ ಪ್ರೀತಿ ಬಗ್ಗೆ ಮನೆಯವರಲ್ಲಿ ಹೇಳಿ ಹಿರಿಯರ ಮನವೊಲಿಸಿ ತಾವು ಅಂದುಕೊಂಡಂತೆ ಮದುವೆ ಆಗಿದ್ದಾರೆ. ಮತ್ತೊಂದು ಕಡೆ ಈ ಯುವ ಜೋಡಿ ಪ್ರೀತಿಸಿ, ಎತ್ತರದ ಗುರಿಗಳನ್ನು ಸಾಧಿಸಿ ಈಗಿನ ಯುವ ಪೀಳಿಗೆಗೆ ಮಾದರಿಯಾಗಿ ನಿಂತಿದ್ದಾರೆ. ಇಬ್ಬರೂ ಒಂದೇ ವಿಷಯದಲ್ಲಿ ಜೂನಿಯರ್ ಲೆಕ್ಚರರ್ ಆಗಿ ಸ್ಥಾನ ಗಳಿಸಿದ್ದಾರೆ.
ಈ ಇಬ್ಬರ ಸಾಧನೆಗೆ ಅಡ್ಡಿಯಾಗದ ಬಡತನ: ಕಡು ಬಡತನದಿಂದ ಬಂದ ಈ ಯುವಕರು ಯಾವುದೇ ತರಬೇತಿ ಪಡೆಯದೇ ಕಷ್ಟಪಟ್ಟು ಸರ್ಕಾರಿ ನೌಕರಿ ಗಳಿಸಿ ಒಗ್ಗೂಡಿದರು. ಇಬ್ಬರೂ ಉದ್ಯೋಗಿಗಳಾದ್ದರಿಂದ ಹಿರಿಯರೂ ಆಕ್ಷೇಪಿಸುತ್ತಿರಲಿಲ್ಲ. ಒಂದು ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಯುವಕರಿಗೆ ಸ್ಪೂರ್ತಿಯಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಯಶಸ್ಸು ಸಾಧಿಸಲಿದ್ದೇವೆ ಎನ್ನುತ್ತಾರೆ ನವೀನ್ ಮತ್ತು ಪದ್ಮಾ ಎಂಬ ಈ ಯುವ ಜೋಡಿ.
ಸಾಧಕ ಜೋಡಿಯ ಯಶಸ್ಸಿನ ಸಂತಸ ಹೀಗಿದೆ
"ನಾನು ಕೆಲಸ ಮಾಡುತ್ತಲೇ ಓದಿದೆ. ಅದಕ್ಕಾಗಿಯೇ ನಾನು ಕಠಿಣ ಪರಿಶ್ರಮದ ಮೌಲ್ಯ ಕಲಿತಿದ್ದೇನೆ. ನಾನು ಎಸ್‌ಜಿಟಿ ಗುರುಕುಲ ಪದವಿ ಉಪನ್ಯಾಸಕ ಪರೀಕ್ಷೆ, ಗ್ರೂಪ್ 4 ರಲ್ಲಿ ಮೆರಿಟ್ ಸಾಧಿಸಿದೆ. ಇನ್ನು ಜೂನಿಯರ್ ಲೆಕ್ಚರರ್ ಪರೀಕ್ಷೆಯಲ್ಲಿ ನನಗೆ 2 ನೇ ರ್‍ಯಾಂಕ್ ಬಂದಿತು. ನಾನು ಓದಿದ ಕಾಲೇಜಿನಲ್ಲಿ ನನ್ನ ಮೊದಲ ಪೋಸ್ಟಿಂಗ್ ಸಿಕ್ಕಿತು. ನನಗೆ ತುಂಬಾ ಸಂತೋಷವಾಗಿದೆ. - ನವೀನ್, ಜೂನಿಯರ್ ಲೆಕ್ಚರರ್
"YouTube ನನಗೆ ತುಂಬಾ ಸಹಾಯ ಮಾಡಿತು. ನಾನು ಅದರಲ್ಲಿ ಪ್ರಚಲಿತ ವಿದ್ಯಮಾನಗಳ ತರಗತಿಗಳನ್ನು ಕೇಳುತ್ತಿದ್ದೆ. ನಾನು ಗುರುಕುಲದಲ್ಲಿ ಪದವಿ ಉಪನ್ಯಾಸಕಿ ಮತ್ತು ಜೂನಿಯರ್ ಉಪನ್ಯಾಸಕಿಯಾಗಿ ಆಯ್ಕೆಯಾದೆ. ಈ ಎರಡು ಕೆಲಸಗಳನ್ನು ಸಾಧಿಸಿದ ನಂತರ ನನ್ನ ಪತಿ ಮತ್ತು ಕುಟುಂಬದವರು ನನಗೆ ತುಂಬಾ ಬೆಂಬಲವಾಗಿ ನಿಂತರು. ನಾನು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಲು ಬಯಸುತ್ತೇನೆ. - ಪದ್ಮಾ, ಜೂನಿಯರ್ ಲೆಕ್ಚರರ್