ಅಯೋಧ್ಯೆ: ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಶೇ 99ರಷ್ಟು ಪೂರ್ಣಗೊಂಡಿದೆ ಎಂದು ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ದೇವಾಲಯದ ಎರಡೂ ಬದಿಗಳಲ್ಲಿ ಸುಮಾರು 2,000 ಘನ ಕಲ್ಲುಗಳನ್ನು ಜೋಡಿಸುವ ಕಾರ್ಯ ಇನ್ನೂ ಬಾಕಿ ಇದೆಯಾದರೂ, ಗರ್ಭಗುಡಿಯಲ್ಲಿ ಹೆಚ್ಚಿನ ಕೆಲಸ ಬಾಕಿ ಉಳಿದಿಲ್ಲ ಎಂದು ಅವರು ಹೇಳಿದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಿಶ್ರಾ, "ನೀವು ನೋಡಿರುವಂತೆ ಈ ಯೋಜನೆಯ ಅಂತಿಮ ಹಂತ ಈಗ ಪ್ರಾರಂಭವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಿನ್ನೆ ನಡೆದ ಕಾರ್ಯಕ್ರಮ ವಿಶೇಷವಾಗಿ ಮಂಗಳಕರವಾಗಿತ್ತು. ಈ ಸಂದರ್ಭದಲ್ಲಿ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ತೋರಿಸಿದ ಸಾಮಾಜಿಕ ಸಾಮರಸ್ಯದ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು." ಎಂದು ಹೇಳಿದರು.
"ದೇವಾಲಯದ ಪ್ರಾಂಗಣ, ಮೊದಲ ಮತ್ತು ಎರಡನೇ ಮಹಡಿಗಳು ಪೂರ್ಣಗೊಂಡಿವೆ. ಮೇ ತಿಂಗಳಲ್ಲಿ ಮೊದಲ ಮಹಡಿಯಲ್ಲಿ ರಾಮ್ ದರ್ಬಾರ್ ಸ್ಥಾಪಿಸಲಾಗುವುದು. ಸ್ಥಾಪನೆಯ ದಿನಾಂಕವನ್ನು ಟ್ರಸ್ಟ್ ನಿರ್ಧರಿಸಲಿದೆ. ಅಲ್ಲದೇ ದೇವಾಲಯದ ಸುತ್ತಮುತ್ತಲಿನ ಗೋಪುರಗಳ ನಿರ್ಮಾಣವನ್ನು ಕಾರ್ಯವನ್ನು ವೇಗಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಅವರು ತಿಳಿಸಿದರು.
"ಕೆಲ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಮತ್ತು ಪೂರ್ಣಗೊಳಿಸಬೇಕಾಗಿದೆ. ಉತ್ತರ ಭಾಗದಲ್ಲಿರುವ ತಾತ್ಕಾಲಿಕ ಕಟ್ಟಡಗಳನ್ನು ಮುಂದಿನ ಮೂರು ತಿಂಗಳಲ್ಲಿ ನೆಲಸಮಗೊಳಿಸಲಾಗುವುದು. ಮಾಸ್ಟರ್ ಪ್ಲಾನ್ ಪ್ರಕಾರ ಅಲಂಕಾರಿಕ ಮತ್ತು ತೋಟಗಾರಿಕೆ ಕೆಲಸಗಳನ್ನು ಅಲ್ಲಿ ಕೈಗೊಳ್ಳಲಾಗುವುದು. ಉತ್ತರ ದ್ವಾರವೂ ಬಹುತೇಕ ಪೂರ್ಣಗೊಂಡಿದೆ. ಒಟ್ಟಾರೆಯಾಗಿ ದೇವಾಲಯಕ್ಕೆ ಸಂಬಂಧಿಸಿದ ಎಲ್ಲ ನಿರ್ಮಾಣ ಚಟುವಟಿಕೆಗಳು ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ." ಎಂದು ಮಿಶ್ರಾ ಮಾಹಿತಿ ನೀಡಿದರು.
ಭಗವಾನ್ ರಾಮನ ಜೀವನದ ಪ್ರಮುಖ ವ್ಯಕ್ತಿಗಳಾದ ಮಹರ್ಷಿ ವಾಲ್ಮೀಕಿ, ನಿಷಾದ್ ರಾಜ್, ಶಬರಿ, ಅಹಲ್ಯಾ, ಅಗಸ್ತ್ಯ ಮುನಿ ಮತ್ತು ವಸಿಷ್ಠರಿಗೆ ಸಮರ್ಪಿತವಾದ ಎಲ್ಲ ಏಳು ದೇವಾಲಯಗಳು ಪೂರ್ಣಗೊಂಡಿವೆ ಮತ್ತು ವಿಗ್ರಹಗಳು ಇಲ್ಲಿಗೆ ಆಗಮಿಸಿವೆ ಎಂದು ಮಿಶ್ರಾ ಹೇಳಿದರು.
"ದೇವಾಲಯದ ಶಿಖರ ಗೋಪುರ ಸಹ ಶೇಕಡಾ 99 ರಷ್ಟು ಪೂರ್ಣಗೊಂಡಿದೆ. ಶಿಖರದ ಮೇಲೆ ಕಲಶವನ್ನು ಸ್ಥಾಪಿಸಲಾಗಿದೆ ಮತ್ತು ಏಪ್ರಿಲ್ 30 ರೊಳಗೆ ದೇವಾಲಯದ ಪರಿಧಿಗಾಗಿ ಮತ್ತೊಂದು ಕಲಶವನ್ನು ಸ್ಥಾಪಿಸಲಾಗುವುದು. ಸಂಬಂಧಿತ ದೇವರುಗಳು ಮತ್ತು ದೇವತೆಗಳ ವಿಗ್ರಹಗಳನ್ನು ಸಹ ಕ್ರಮೇಣ ಸ್ಥಾಪಿಸಲಾಗುವುದು" ಎಂದು ಅವರು ಹೇಳಿದರು.
ಇದನ್ನೂ ಓದಿ : ತಮಿಳುನಾಡಿನ ಸ್ವಾಯತ್ತತೆ ಪರಿಶೀಲನೆಗೆ ಸಮಿತಿ; ಸಿಎಂ ಸ್ಟಾಲಿನ್ ಘೋಷಣೆ - TAMIL NADU AUTONOMY