ETV Bharat / bharat

'ಆಪರೇಷನ್ ಬ್ಲೂ ಸ್ಟಾರ್' ಸರಿಯಾದ ಮಾರ್ಗವಲ್ಲ, ಆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಚಿದಂಬರಂ

'ಆಪರೇಷನ್ ಬ್ಲೂ ಸ್ಟಾರ್' ಸರಿಯಾದ ಕ್ರಮವಾಗಿರಲಿಲ್ಲ. ಇದಕ್ಕಾಗಿ ಇಂದಿರಾ ಗಾಂಧಿ ಪ್ರಾಣ ತೆತ್ತರು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ. ಈ ಹೇಳಿಕೆಗೆ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ
ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ (IANS)
author img

By ETV Bharat Karnataka Team

Published : October 12, 2025 at 4:36 PM IST

|

Updated : October 12, 2025 at 4:42 PM IST

2 Min Read
Choose ETV Bharat

ಶಿಮ್ಲಾ(ಹಿಮಾಚಲ ಪ್ರದೇಶ): 1984ರಲ್ಲಿ ಗೋಲ್ಡನ್ ಟೆಂಪಲ್‌ನಲ್ಲಿ ಅಡಗಿದ್ದ ಉಗ್ರರನ್ನು ಸೆರೆ ಹಿಡಿಯಲು ಆಪರೇಷನ್ ಬ್ಲೂ ಸ್ಟಾರ್ ನಡೆಸಿದ್ದು ಸರಿಯಾದ ಮಾರ್ಗವಾಗಿರಲಿಲ್ಲ. ಇದರಿಂದಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಪ್ರಾಣ ತೆತ್ತರು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಶನಿವಾರ ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಖ್ಯಾತ ಲೇಖಕ ದಿ.ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಮತ್ತು ಲೇಖಕ ಹರಿಂದರ್ ಬವೇಜಾ ಅವರ 'ದೆ ವಿಲ್ ಶೂಟ್ ಯು ಮೇಡಂ: ಮೈ ಲೈಫ್ ಥ್ರೂ ಕಾನ್ಫ್ಲಿಕ್ಟ್' ಪುಸ್ತಕದ ಕುರಿತು ಮಾತನಾಡುತ್ತಾ ಚಿದಂಬರಂ ಈ ಹೇಳಿಕೆ ನೀಡಿದರು.

ಆದರೆ, ಇಂದಿರಾ ಗಾಂಧಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ-ಚಿದು: ಎಲ್ಲ ಉಗ್ರರನ್ನು ಹಿಮ್ಮೆಟ್ಟಿಸಲು ಮತ್ತು ಸೆರೆಹಿಡಿಯಲು ಬೇರೆ ಮಾರ್ಗವಿತ್ತು. ಆದರೆ ಇದಕ್ಕಾಗಿ ಆಪರೇಷನ್ ಬ್ಲೂ ಸ್ಟಾರ್ ನಡೆಸಿದ್ದು ತಪ್ಪು. ಶ್ರೀಮತಿ ಗಾಂಧಿ ಅವರು ಆ ತಪ್ಪಿಗೆ ತಮ್ಮ ಜೀವವನ್ನೇ ತೆತ್ತರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಸೇನೆ, ಗುಪ್ತಚರ, ಪೊಲೀಸ್ ಮತ್ತು ನಾಗರಿಕ ರಕ್ಷಣೆಯ ಹಿನ್ನೆಲೆಯ ಒಟ್ಟುಗೂಡಿದ ನಿರ್ಧಾರವಾಗಿತ್ತು. ಅದಕ್ಕಾಗಿ ನೀವು ಶ್ರೀಮತಿ ಗಾಂಧಿ ಅವರನ್ನು ಮಾತ್ರ ಸಂಪೂರ್ಣವಾಗಿ ದೂಷಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಚಿದು ಹೇಳಿಕೆಗೆ ಹೈಕಮಾಂಡ್ ಅಸಮಾಧಾನ: ಪಿ.ಚಿದಂಬರಂ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕತ್ವ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಿರಿಯ ನಾಯಕರು ಸಾರ್ವಜನಿಕವಾಗಿ ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡುವ ಮೊದಲು ಎಚ್ಚರಿಕೆ ವಹಿಸಬೇಕು. ಪಕ್ಷದಿಂದ ಎಲ್ಲವನ್ನೂ ಪಡೆದ ಹಿರಿಯ ನಾಯಕರು ಇಂಥ ಹೇಳಿಕೆಗಳನ್ನು ನೀಡುವ ಪ್ರವೃತ್ತಿ ಮುಂದುವರೆಯಬಾರದು. ಇದರಿಂದ ಪಕ್ಷಕ್ಕೆ ಸಮಸ್ಯೆಗಳಾಗುತ್ತವೆ ಎಂದು ತಿಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಆಪರೇಷನ್ ಬ್ಲೂ ಸ್ಟಾರ್ ಕುರಿತು: ಇದು 1984ರ ಜೂನ್ 1ರಿಂದ 10ರ ನಡುವೆ, ಸಿಖ್ಖರ ಪವಿತ್ರ ಪೂಜಾ ಸ್ಥಳವಾದ ಪಂಜಾಬ್ ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ನಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆ. ಪ್ರತ್ಯೇಕವಾದಿ ಉಗ್ರರಾದ, ದಮ್‌ದಾಮಿ ತಕ್ಸಲ್ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಆತನ ಇತರೆ ಸಹಚರರನ್ನು ಮಟ್ಟ ಹಾಕಲು ನಡೆಸಿದ ಐತಿಹಾಸಿಕ ಮಿಲಿಟರಿ ಕಾರ್ಯಾಚರಣೆ. ಈ ಕಾರ್ಯಾಚರಣೆಗೆ ಪ್ರತೀಕಾರವಾಗಿ ಅದೇ ವರ್ಷದ ಕೊನೆಯಲ್ಲಿ (1984) ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಭೀಕರವಾಗಿ ಹತ್ಯೆ ಮಾಡಿದ್ದರು.

ಪಿ.ಚಿದಂಬರಂ ಕಾಂಗ್ರೆಸ್ ಪಕ್ಷದ ಹಿರಿಯ ಹಾಗು ಪ್ರಭಾವಿ ನಾಯಕ. ಕೇಂದ್ರದಲ್ಲಿ ಈ ಹಿಂದೆ ಗೃಹ ಮತ್ತು ಹಣಕಾಸು ಸಚಿವರಾಗಿದ್ದವರು. ಅನೇಕ ಬಾರಿ ಬಜೆಟ್ ಮಂಡಿಸಿದ್ದಾರೆ. ಇವರ ಪುತ್ರ ಕಾರ್ತಿ ಚಿದಂಬರಂ ಲೋಕಸಭೆ ಸದಸ್ಯರು.

ಇದನ್ನೂ ಓದಿ: ಕಾಂಗ್ರೆಸ್ ಪಂಚ ಗ್ಯಾರಂಟಿ ಟೀಕಿಸಲು ಬಿಜೆಪಿ ದೇವೇಗೌಡರನ್ನು ಕಣಕ್ಕಿಳಿಸಿದೆ:ಸುರ್ಜೇವಾಲ

Last Updated : October 12, 2025 at 4:42 PM IST