ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿದೆ.
11 ಜನರ ಸಾವಿನ ಬಳಿಕ ಪ್ರತಿಪಕ್ಷ ಹಾಗೂ ಬಿಜೆಪಿ ನಾಯಕರ ಟೀಕೆಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಖಂಡಿಸಿದ್ದು, ದುರಂತದ ಬಗ್ಗೆ ಕೇಸರಿ ಪಕ್ಷವು ಕೊಳಕು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.
ಸಿಎಂ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್: ಘಟನೆಯ ಹೊಣೆ ಹೊತ್ತು ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ. ದುರಂತದ ನಂತರ ಸರ್ಕಾರದ ಕ್ರಮಗಳನ್ನು ಟೀಕಿಸುತ್ತಿರುವ ಬಿಜೆಪಿ, ಬೆಂಗಳೂರು ಪೊಲೀಸ್ ಆಯುಕ್ತರನ್ನು ರಾತ್ರೋರಾತ್ರಿ ಬದಲಾಯಿಸಿದ್ದು ಆಘಾತಕಾರಿ ಎಂದು ಹೇಳಿದೆ. ಆದರೆ ಸಿಎಂ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಇದು ರಾಜಕೀಯ ಮಾಡುವ ಸಮಯವಲ್ಲ: ಬಿಜೆಪಿ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ಮಯೂರ ಎಸ್ ಜಯಕುಮಾರ್, ಉತ್ತಮ ಆಡಳಿತ ನೀಡಿದ ಮತ್ತು ನಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸಿದ ಮುಖ್ಯಮಂತ್ರಿಯೊಂದಿಗೆ ನಾವು ಇದ್ದೇವೆ. ಅನಿರೀಕ್ಷಿತ ದುರಂತದ ಬಗ್ಗೆ ನಾವೆಲ್ಲರೂ ದುಃಖಿತರಾಗಿದ್ದೇವೆ. ರಾಜಕೀಯ ಮಾಡುವ ಸಮಯ ಇದಲ್ಲ. ಘೋರ ಘಟನೆಯಲ್ಲಿ ಮೃತಪಟ್ಟವರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವತ್ತ ಗಮನ ಹರಿಸಬೇಕಾಗಿದೆ. ಈ ಸಮಯದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡು ಕೊಳಕು ರಾಜಕೀಯ ಮಾಡುತ್ತಿದೆ ಎಂದು ಈಟಿವಿ ಭಾರತ್ ಜತೆ ಮಾತನಾಡಿ ಆಕ್ರೋಶ ಹೊರ ಹಾಕಿದರು.
ಪಹಲ್ಗಾಮ್ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ಕೊಟ್ಟರಾ?: ದುರುಂತಕ್ಕೆ ಸಂಬಂದಿಸಿದಂತೆ ಸಿಎಂ ಅವರನ್ನು ಪದಚ್ಯುತಗೊಳಿಸುವಂತೆ ಕೇಸರಿ ಪಕ್ಷ ಒತ್ತಾಯಿಸಿದೆ. ಆದರೆ ವಿವಿಧ ರೈಲು ಅಪಘಾತಗಳು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದ್ದರೂ ಕೇಂದ್ರ ಸರ್ಕಾರ ಹೊಣೆ ಹೊರಲಿಲ್ಲ, ಯಾವುದೇ ಕೇಂದ್ರ ಸಚಿವರು ರಾಜೀನಾಮೆ ನೀಡಿದರಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಿವಿಧ ರೈಲು ಅಪಘಾತಗಳಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರೈಲ್ವೆ ಸಚಿವರು ನೈತಿಕ ಜವಾಬ್ದಾರಿಯನ್ನು ತೆಗೆದುಕೊಂಡು ರಾಜೀನಾಮೆ ನೀಡಿದ್ದಾರೆಯೇ? ಅದೇ ರೀತಿ, ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆಯೇ?" ಎಂದು ಜಯಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ:ಏನಿದು G7 ಒಕ್ಕೂಟ, ಹೀಗೆಂದರೇನು?: ಜಾಗತಿಕ ಆರ್ಥಿಕ ಶಕ್ತಿ ಕ್ಲಬ್ನ ಮಹತ್ವ ಎಷ್ಟು?