ರಾಯ್ಪುರ (ಛತ್ತೀಸಗಢ): ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಓರ್ವ ನಕ್ಸಲ್ನನ್ನು ಬೇಟೆಯಾಡಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ನ ಕೋಬ್ರಾ ಕಮಾಂಡೋ ಹುತಾತ್ಮರಾಗಿದ್ದಾರೆ.
ಜಿಲ್ಲೆಯ ಉಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಟುಮ್ರೆಲ್ ಪ್ರದೇಶದಲ್ಲಿ ಕಾರ್ಯಾಚಾರಣೆ ಸಾಗಿದ್ದು, ಸಿಆರ್ಪಿಎಫ್ನ 21ನೇ ಬಟಾಲಿಯನ್ ಕೋಬ್ರಾ ಘಟಕ ಮತ್ತು ಛತ್ತೀಸ್ಗಢ ಪೊಲೀಸ್ ಡಿಆರ್ಜಿ ಮತ್ತು ಎಸ್ಟಿಎಫ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕೋಬ್ರಾ ಕಮಾಂಡೋ ಹುತಾತ್ಮನಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಾವೋವಾದಿಯನ್ನು ಹತನಾಗಿದ್ದು, ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗಾಯಗೊಂಡ ಕಮಾಂಡೋ ಚಿಕಿತ್ಸೆಗಾಗಿ ಐಎಎಫ್ ಹೆಲಿಕಾಪ್ಟರ್ ಸೇವೆಯನ್ನು ಪಡೆದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋ ಬಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ವಿಶೇಷ ಅರಣ್ಯ ಯುದ್ಧ ಘಟಕವಾಗಿದೆ. ಇದು ರಾಜ್ಯದಲ್ಲಿನ ಎಡಪಂಥೀಯ ತೀವ್ರವಾದಿಗಳ ವಿರುದ್ಧ ನಡೆಸುವ ಪ್ರಮುಖ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: 8 ಲಕ್ಷ ರೂ. ಬಹುಮಾನ ಘೋಷಿತ ಮೋಸ್ಟ್ ವಾಂಟೆಡ್ ನಕ್ಸಲ್ ಎನ್ಕೌಂಟರ್ನಲ್ಲಿ ಹತ
ಮುಂದಿನ ವರ್ಷ ಅಂದರೆ 2026ರ ಮಾರ್ಚ್ ಒಳಗೆ ನಕ್ಸಲ್ ಮುಕ್ತ ಸಮಾಜ ನಿರ್ಮಾಣ ಮಾಡುವ ಪಣವನ್ನು ಕೇಂದ್ರ ಸರ್ಕಾರ ಹೊಂದಿದ್ದು, ರಾಜ್ಯದಲ್ಲಿನ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಛತ್ತೀಸ್ಗಢದ ಬಸ್ತಾರ್ ಪ್ರದೇಶ ಮಾವೋವಾದಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆ ಸ್ಥಳವಾಗಿದೆ.
ಬುಧವಾರ ನಾರಾಯಣಪುರ- ಬಿಜಾಪುರ್ ಗಡಿಯಲ್ಲಿ ನಡೆದ ನಕ್ಸಲರ ವಿರುದ್ಧದ ಎನ್ಕೌಂಟರ್ನಲ್ಲಿ 27 ನಕ್ಸಲರನ್ನು ಬೇಟೆಯಾಡಲಾಗಿತ್ತು. ಈ ಪೈಕಿ ನಕ್ಸಲರ ಟಾಪ್ ಕಮಾಂಡರ್ ಆಗಿದ್ದ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜುನನ್ನು ಜಿಲ್ಲಾ ಸಶಸ್ತ್ರ ಪಡೆಯು ನಾರಾಯಣಪುರ - ಬಿಜಾಪುರ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಹೊಡೆದುರುಳಿಸಿತ್ತು. ಇದು ನಕ್ಸಲರ ವಿರುದ್ಧ ನಡೆದ ಬಹು ದೊಡ್ಡ ಕಾರ್ಯಾಚರಣೆ ಎಂದು ವರದಿಯಾಗಿದೆ. ಬಸವರಾಜು ಕುರಿತು ಸುಳಿವು ನೀಡಿದವರಿಗೆ ಅಥವಾ ಆತನನ್ನು ಹಿಡಿದುಕೊಟ್ಟವರಿಗೆ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
ಇದನ್ನೂ ಓದಿ: ಛತ್ತೀಸ್ ಗಢದಲ್ಲಿ ಪ್ರಮುಖ ನಕ್ಸಲ್ ನಾಯಕ ಬಸವ ರಾಜು ಸೇರಿ 27 ನಕ್ಸಲರ ಎನ್ ಕೌಂಟರ್