ಅಹಮದಾಬಾದ್(ಗುಜರಾತ್): ಗುರುವಾರ(ನಿನ್ನೆ) ಮಧ್ಯಾಹ್ನ ಪತನಗೊಂಡ ಏರ್ ಇಂಡಿಯಾ ವಿಮಾನ AI171ರ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಅಹಮದಾಬಾದ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಅಪ್ಪಳಿಸಿದ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಛಾವಣಿಯ ಮೇಲೆ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ವಿಮಾನ ಅಪಘಾತಕ್ಕೆ ಕಾರಣ ಕಂಡುಹಿಡಿಯಲು ಬ್ಲ್ಯಾಕ್ ಬಾಕ್ಸ್ ಪ್ರಮುಖವಾಗಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋದ ತಂಡ ಗುಜರಾತ್ ಸರ್ಕಾರದ 40 ಸಿಬ್ಬಂದಿ ಸಹಯಾದಿಂದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್(DFDR) ಅಥವಾ ಬ್ಲ್ಯಾಕ್ ಬಾಕ್ಸ್ ಅನ್ನು ಪತ್ತೆ ಮಾಡಿದೆ.
ಬ್ಲ್ಯಾಕ್ ಬಾಕ್ಸ್ ಎಂದರೇನು?: ಬ್ಲ್ಯಾಕ್ ಬಾಕ್ಸ್ ಎಂಬುದು ವಿಮಾನ ಹಾರಾಟದ ಸಮಯದಲ್ಲಿ ಅದರ ಬಗ್ಗೆ ಮಾಹಿತಿಯನ್ನು ದಾಖಲಿಸುವ ಒಂದು ಸಣ್ಣ ಸಾಧನ. ಇದು ವಿಮಾನ ಅಪಘಾತಗಳ ತನಿಖೆಗೆ ಸಹಾಯ ಮಾಡುತ್ತದೆ. ವಿಮಾನ ಹಾರಾಟದ ವೇಗ, ಎತ್ತರ, ಎಂಜಿನ್ ಕಾರ್ಯಕ್ಷಮತೆ ಮತ್ತು ಕಾಕ್‌ಪಿಟ್ ಆಡಿಯೋದಂತಹ ನಿರ್ಣಾಯಕ ಮಾಹಿತಿಯನ್ನು ಒಳಗೊಂಡಿರುತ್ತದೆ.
ಇದರಲ್ಲಿ ಪೈಲಟ್‌ಗಳು ಮತ್ತು ವಾಯು ಸಂಚಾರ ನಿಯಂತ್ರಣದ ನಡುವಿನ ಸಂವಹನವೂ ದಾಖಲಾಗಿರುತ್ತದೆ. ಇದನ್ನು ತೀವ್ರ ತಾಪಮಾನ, ನೀರು ಮತ್ತು ತೀವ್ರ ಪ್ರಭಾವವನ್ನು ತಡೆದುಕೊಳ್ಳುವಂತೆ ತಯಾರಿಸಲಾಗಿದೆ. ಎಂತಹದೇ ಪರಿಸ್ಥಿತಿಗಳಲ್ಲಿಯೂ ಪ್ರಮುಖ ಡೇಟಾ ನಾಶವಾಗದಂತೆ ಇದನ್ನು ರಚನೆ ಮಾಡಲಾಗಿದೆ.
ಬ್ಲ್ಯಾಕ್ ಬಾಕ್ಸ್ ಎಂದು ಇದನ್ನು ಕರೆದರೂ, ಇದು ಶಿಲೆಗಳ ರಾಶಿಯಲ್ಲಿ ಮತ್ತು ನೀರಿನ ಅಡಿಯಲ್ಲಿ ಸುಲಭವಾಗಿ ಗೋಚರವಾಗುವಂತೆ ಪ್ರಕಾಶಮಾನವಾದ ಕಿತ್ತಳೆ ಬಣ್ಣದದಲ್ಲಿರುವ ಸಾಧನವಾಗಿದೆ. ಡಿವಿಆರ್ ಎನ್ನುವುದು ಸಿಸಿಟಿವಿ ಕ್ಯಾಮೆರಾಗಳಿಂದ ವಿಡಿಯೊ ರೆಕಾರ್ಡ್ ಮಾಡಲು ಮತ್ತು ಸಂಗ್ರಹಿಸಲು ವಿನ್ಯಾಸಗೊಳಿಸಲಾದ ಎಲೆಕ್ಟ್ರಾನಿಕ್ ಸಾಧನವಾಗಿದೆ.
ಉಕ್ಕು ಮತ್ತು ಟೈಟಾನಿಯಂನಂತಹ ಹೆಚ್ಚು ಬಾಳಿಕೆ ಬರುವ ವಸ್ತುಗಳಿಂದ ನಿರ್ಮಿಸಲಾದ ಈ ಸಾಧನವು ಎರಡು ಪ್ರಮುಖ ಘಟಕಗಳನ್ನು ಹೊಂದಿದೆ. DFDR ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ (CVR). DFDR ತಾಂತ್ರಿಕ ಹಾರಾಟದ ನಿಯತಾಂಕಗಳನ್ನು ದಾಖಲಿಸುತ್ತದೆ. CVR ಕಾಕ್‌ಪಿಟ್‌ನಿಂದ ಆಡಿಯೋವನ್ನು ಸೆರೆಹಿಡಿಯುತ್ತದೆ. ಇದರಲ್ಲಿ ಪೈಲಟ್ ಚರ್ಚೆಗಳು ಮತ್ತು ವಾಯು ಸಂಚಾರ ನಿಯಂತ್ರಣದ ಜೊತೆಗೆ ರೇಡಿಯೋ ವಿನಿಮಯಗಳು ಕೂಡ ಸೇರಿವೆ.
ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಹುಡುಕಲು ತಜ್ಞರ ತಂಡವನ್ನು ನಿಯೋಜಿಸಲಾಗಿತ್ತು. ಅವರು ಲೋಹದ ಕಟ್ಟರ್ಗಳಂತಹ ವಿಶೇಷ ಉಪಕರಣಗಳನ್ನು ಬಳಸಿ, ಶೋಧ ಕಾರ್ಯ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿ.ಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ (ಡಿಜಿಟಲ್ ವಿಡಿಯೋ ರೆಕಾರ್ಡರ್) ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.
"ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚುವಲ್ಲಿ ನಮ್ಮ ತಂಡವು ವಿಧಿವಿಜ್ಞಾನ ಮತ್ತು ನಾಗರಿಕ ವಿಮಾನಯಾನ ತಜ್ಞರಿಗೆ ಸಹಾಯ ಮಾಡಿದೆ" ಎಂದು ಅಗ್ನಿಶಾಮಕ ದಳದ ಉಪ ಮುಖ್ಯ ಅಧಿಕಾರಿ ಧ್ರುಮಿತ್ ಗಾಂಧಿ ತಿಳಿಸಿದ್ದಾರೆ.
ಭಯಾನಕ ವಿಮಾನ ಅಪಘಾತ: 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1.39ಕ್ಕೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮೆಘಾನಿನಗರದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಅಪ್ಪಳಿಸಿತ್ತು. ಇದು ಬೋಯಿಂಗ್ ಕಂಪನಿಯ 787 ಡ್ರೀಮ್‌ಲೈನರ್ ವಿಮಾನ (AI171)ವಾಗಿದೆ.
ಇದನ್ನೂ ಓದಿ: ಹಾಸ್ಟೆಲ್ ಕಟ್ಟಡದ ಬಳಿ ಪುಟ್ಟದಾದ ಟೀ ಕೆಟಲ್ ನಡೆಸುತ್ತಿದ್ದ ಕುಟುಂಬ: ವಿಮಾನ ದುರಂತದಲ್ಲಿ 15 ವರ್ಷದ ಬಾಲಕ ಸಾವು, ತಾಯಿ ಗಂಭೀರ