ಬಟಿಂಡಾ(ಪಂಜಾಬ್): ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕಪಾಠ ಕಲಿಸಲು ಭಾರತೀಯ ಸೇನೆ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಬಟಿಂಡಾದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಶಂಕೆ ವ್ಯಕ್ತವಾಗಿದೆ.
ಬಂಧಿತ ವ್ಯಕ್ತಿ ಮೂಲತಃ ಬಿಹಾರದ ಸಮಷ್ಟಿಪುರಕ್ಕೆ ಸೇರಿದಾತ. ಕಳೆದ 10 ವರ್ಷಗಳಿಂದ ಬಟಿಂಡಾದ ಬೀಂಟ್ ನಗರದಲ್ಲಿ ವಾಸಿಸುತ್ತಿದ್ದ. ಆತನನ್ನು ಬಂಧಿಸಿ, ಮೊಬೈಲ್ ತಪಾಸಣೆ ನಡೆಸಿದಾಗ, ಮಹಿಳೆಯ ಜೊತೆ ಸಂವಹನ ನಡೆಸಿರುವ ಬಗ್ಗೆ ದಾಖಲೆ ಸಿಕ್ಕಿವೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಟಿಂಡಾದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡುವ ವ್ಯಕ್ತಿಯೊಬ್ಬ, ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆತನ ಮೊಬೈಲ್ನ ವಾಟ್ಸ್ ಆ್ಯಪ್ನಲ್ಲಿ ಪಾಕಿಸ್ತಾನಿ ಮಹಿಳೆಯ ಜೊತೆ ಚಾಟ್ ಮಾಡಿರುವ ಬಗ್ಗೆ ಮಾಹಿತಿ ಇದೆ. ಇದು ಹನಿಟ್ರ್ಯಾಪ್ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿಯ ಮೊಬೈಲ್ ಫೋನ್‌ನ ವಾಟ್ಸ್ ಆ್ಯಪ್ ಸಂವಹನವು ಅನುಮಾನಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಮಹಿಳೆಯ ಜೊತೆ ಆತ ಸಂಭಾಷಣೆ ನಡೆಸಿರುವ ದಾಖಲೆ ಇದೆ. ಆದರೆ, ಅದು 2023ರಲ್ಲಿ ನಡೆಸಿದ ಸಂವಹನವಾಗಿದೆ. ಇದು ಹನಿಟ್ರ್ಯಾಪ್ ಆಗಿರುವ ಸಾಧ್ಯತೆಯ ಮೇಲೆ ತನಿಖೆ ನಡೆಯುತ್ತಿದೆ. ಯಾರೋ ವ್ಯಕ್ತಿ ಹುಡುಗಿಯ ಸೋಗಿನಲ್ಲಿ ಆರೋಪಿಯೊಂದಿಗೆ ಸಂದೇಶ ಕಳುಹಿಸುವುದು, ಗೂಗಲ್‌ನಿಂದ ಫೋಟೋಗಳನ್ನು ಡೌನ್‌ಲೋಡ್ ಮಾಡಿ ಕಳುಹಿಸಿರುವ ಅನುಮಾನವಿದೆ.
ಬಂಧಿತ ವ್ಯಕ್ತಿಯು ಅನಕ್ಷರಸ್ಥನಾಗಿದ್ದರಿಂದ ಈ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಆರೋಪಿಯು ಪಾಕಿಸ್ತಾನದ ಮಹಿಳೆಗೆ ಯಾವುದೇ ಮಾಹಿತಿಯನ್ನು ಕಳುಹಿಸಿದ್ದಾನೆಯೇ, ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಸಿಬ್ಬಂದಿಯ ತನಿಖೆ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ದೇಶಾದ್ಯಂತ ಸೇನಾ ಕಂಟೋನ್ಮೆಂಟ್‌ಗಳಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ತನಿಖೆ ನಡೆಸಲಾಗುತ್ತಿದೆ. ಬಟಿಂಡಾ ಕಂಟೋನ್ಮೆಂಟ್‌ನಲ್ಲಿಯೂ ಸಹ, ಸೇನೆಯ ಗುಪ್ತಚರ ವಿಭಾಗವು ಹಲವಾರು ದಿನಗಳಿಂದ ಕಂಟೋನ್ಮೆಂಟ್‌ನೊಳಗೆ ಖಾಸಗಿಯಾಗಿ ಕೆಲಸ ಮಾಡುತ್ತಿರುವವರ ತನಿಖೆ ನಡೆಸುತ್ತಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಪಾಕಿಸ್ತಾನದ ಮಹಿಳೆಯ ಜೊತೆ ಸಂಭಾಷಣೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತೀಯ ಸೇನೆಯ ಸೈಟ್ಗಳ ಮೇಲೆ ದಾಳಿಗೆ ಪಾಕಿಸ್ತಾನ ಹ್ಯಾಕರ್ಗಳಿಂದ ವಿಫಲ ಯತ್ನ