ಹೈದರಾಬಾದ್: ಇತ್ತೀಚಿಗೆ ವಿದೇಶಿ ಉದ್ಯೋಗ ಅರಸಿ ತಮ್ಮ ಬಳಿಗೆ ಬರುವ ಯುವಜನರನ್ನು ಕೆಲ ಏಜೆನ್ಸಿಗಳು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ದಲ್ಲಾಳಿಗಳು ಉದ್ಯೋಗ ಕೊಡಿಸುವ ನೆಪದಲ್ಲಿ ಗಲ್ಫ್ ದೇಶಗಳಿಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದರು. ಪ್ರಸ್ತುತ ಸೈಬರ್ ವಂಚಕರು, ಸಾಫ್ಟ್‌ವೇರ್ ಉದ್ಯೋಗ ಕೊಡಿಸುವ ಮತ್ತು ರಷ್ಯಾ ಸೇನೆಯಲ್ಲಿ ಭದ್ರತಾ ಸಿಬ್ಬಂದಿ ಹುದ್ದೆ ಕೊಡಿಸುವ ಭರವಸೆ ನೀಡುತ್ತಾ ತಮ್ಮ ವಂಚನೆಯ ಜಾಲವನ್ನು ವಿಸ್ತರಿಸಿಕೊಂಡಿದ್ದಾರೆ.
ಇತ್ತೀಚಿನ ಪ್ರಕರಣಗಳು: ನಾರಾಯಣಪೇಟೆಯ ಸೈಯದ್ ಮೊಹಮ್ಮದ್ ಸೂಫಿಯಾನ್ ಕೆಲಸಕ್ಕೆಂದು ರಷ್ಯಾಕ್ಕೆ ಹೋಗಿ ವಂಚನೆಗೊಳಗಾಗಿದ್ದರು. ಅವರು ಇತ್ತೀಚೆಗೆ ರಷ್ಯಾ ಸೇನೆಯಿಂದ ಬಿಡುಗಡೆಯಾಗಿದ್ದರು. ವಂಶಿಕೃಷ್ಣ ಮತ್ತು ಸಾಯಿಪ್ರಸಾದ್ ಎಂಬುವವರು ಕಾಂಬೋಡಿಯಾದಲ್ಲಿ ಡಾಟಾ ಎಂಟ್ರಿ ಆಪರೇಟರ್ ಕೆಲಸಕ್ಕೆಂದು ಹೋಗಿ ಶೋಷಣೆ ಎದುರಿಸಿದ್ದರು. ಇಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೊಲೀಸರು ಯುವಜನತೆಯನ್ನು ಒತ್ತಾಯಿಸುತ್ತಿದ್ದಾರೆ.
ಸಾಮಾನ್ಯ ವಂಚನೆ ತಂತ್ರಗಳು: ಕೆಲ ವಂಚಕ ಏಜೆನ್ಸಿಗಳು, ಇಟ್ಟಿಗೆ ತಯಾರಿ, ಪ್ಲಂಬಿಂಗ್ ಮತ್ತು ಕಡಿಮೆ ವಿದ್ಯಾರ್ಹತೆ ಅಗತ್ಯವಿರುವ ಕೃಷಿ ಕೆಲಸಕ್ಕಾಗಿ ಮೊದಲು ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಅವರು ಆಗಾಗ್ಗೆ ಪಾಸ್‌ಪೋರ್ಟ್‌ಗಳ ಮೇಲೆ "ಇಮಿಗ್ರೇಷನ್ ಚೆಕ್ ರಿಕ್ವೈರ್ಡ್" (ECR) ಸ್ಟ್ಯಾಂಪ್ ಹಾಕುತ್ತಾರೆ. ಇದು ವ್ಯಕ್ತಿಯ ಕಡಿಮೆ ವಿದ್ಯಾರ್ಹತೆ ಮತ್ತು ವಿದೇಶಿ ಉದ್ಯೋಗದ ಬಗ್ಗೆ ಅರಿವಿನ ಕೊರತೆ ಸೂಚಿಸುತ್ತದೆ. ಈ ಸ್ಟಾಂಪ್ ಅನ್ನು ಸಾಮಾನ್ಯವಾಗಿ ಪಿಯುಸಿ ಮಟ್ಟಕ್ಕಿಂತ ಕಡಿಮೆ ಶಿಕ್ಷಣ ಹೊಂದಿರುವವರಿಗೆ ಹಾಕಲಾಗುತ್ತದೆ.
ಇತ್ತೀಚಿಗೆ ಸೈಬರ್ ಕ್ರೈಮ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಉತ್ತರ ಭಾರತದ ಮೂಲದ ಸೈಬರ್ ವಂಚಕರು ಈ ಹಿಂದೆ ವಂಚನೆ ಕೃತ್ಯಗಳಲ್ಲಿ ಪ್ರಾಬಲ್ಯ ಹೊಂದಿದ್ದರು. ಸದ್ಯ ಕಾಂಬೋಡಿಯಾ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಲ್ಲಿ ವಂಚನೆಗಾಗಿ ತೆಲುಗು ಭಾಷೆ ಮಾತನಾಡುವವರನ್ನು ಸೈಬರ್ ಖದೀಮರು ನೇಮಿಸಿಕೊಳ್ಳುತ್ತಿದ್ದಾರೆ.ಈ ವಂಚಕರು ತೆಲುಗು ಮಾತನಾಡುವ ಸಂತ್ರಸ್ತರನ್ನು ಬಳಸಿಕೊಂಡು ಇತರರಿಗೆ ಆಮಿಷವೊಡ್ಡಲು ಕಾಲ್ ಸೆಂಟರ್‌ಗಳಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ, ಅವರನ್ನು ಶೋಷಿಸುತ್ತಾರೆ.
ಮುನ್ನೆಚ್ಚರಿಕೆ ಕ್ರಮಗಳು:
ಏಜೆನ್ಸಿಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ: ವಿದೇಶದಲ್ಲಿ ಯಾವುದೇ ಉದ್ಯೋಗಾವಕಾಶ ಸ್ವೀಕರಿಸುವ ಮುನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯು ನಿರ್ವಹಿಸುವ ಇ-ವಲಸಿಗರ (e-Immigrants) ಪೋರ್ಟಲ್‌ನಲ್ಲಿ ಏಜೆನ್ಸಿಯ ಕುರಿತ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ.
ವಿಮೆ ಮತ್ತು ಕಾನೂನು ಸುರಕ್ಷತೆ: ವಿದೇಶದಲ್ಲಿ ಮರಣ ಹೊಂದಿದರೆ 10 ಲಕ್ಷ ರೂ.ಗಳವರೆಗೆ ವಿಮೆ ಒದಗಿಸುವ 'ಪ್ರವಾಸಿ ಭಾರತಿ ಬಿಮಾ ಯೋಜನೆ' ಅಡಿಯಲ್ಲಿ ತಮ್ಮ ಉದ್ಯೋಗ ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮ ಸಂಪರ್ಕಗಳನ್ನು ತಿಳಿದುಕೊಳ್ಳಿ: ನಿಮ್ಮನ್ನು ವಿದೇಶದಲ್ಲಿ ನೇಮಿಸಿಕೊಳ್ಳುವ ಕಂಪನಿಯ ವಿವರಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಪಡೆಯಿರಿ ಮತ್ತು ಪರಿಶೀಲಿಸಿ. ಅಗತ್ಯವಿದ್ದರೆ ಸಮಸ್ಯೆಗಳು ಉಂಟಾದಾಗ ಸಂಪರ್ಕಿಸಲು ನೀವು ವಿಶ್ವಾಸಾರ್ಹ ವ್ಯಕ್ತಿಗಳ, ಸಂಸ್ಥೆಯ ನಂಬರ್ಗಳನ್ನು ಹೊಂದಿದ್ದೀರಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ದಾರಿತಪ್ಪಿಸುವ ಉದ್ಯೋಗಾವಾಶಗಳ ಬಗ್ಗೆ ಎಚ್ಚರ ವಹಿಸಿ: ವಿಸಿಟ್ ವೀಸಾದಲ್ಲಿ ಆಗಮಿಸಿದ ನಂತರ ಉದ್ಯೋಗ ವೀಸಾಗಳ ಭರವಸೆ ನೀಡುವ ಏಜೆನ್ಸಿಗಳ ಬಗ್ಗೆ ಜಾಗರೂಕರಾಗಿರಿ.