ವಿಕಾರಾಬಾದ್ (ತೆಲಂಗಾಣ) : 108 ಆಂಬ್ಯುಲೆನ್ಸ್ ಸೇವೆಯ ತುರ್ತು ವೈದ್ಯಕೀಯ ತಂತ್ರಜ್ಞರ (ಇಎಂಟಿ) ತ್ವರಿತ ಕ್ರಮದಿಂದ ಸಾವಿನ ಬಾಗಿಲು ತಟ್ಟಿದ್ದ ನವಜಾತ ಶಿಶುವಿನ ಜೀವವೊಂದರ ಜೀವ ಉಳಿದಿದೆ. ಮಗು ಸತ್ತೇ ಹೋಯಿತು ಅಂತ ಕೈಚೆಲ್ಲಿ ಕುಳಿತಾಗ ಆಂಬ್ಯುಲೆನ್ಸ್ ಸಿಬ್ಬಂದಿಯ ತುರ್ತು ವೈದ್ಯಕೀಯ ಕ್ರಮದಿಂದಾಗಿ ಸಾವಿನ ದವಡೆಯಿಂದ ಪಾರಾಗಿ ಬಂದಿದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಶನಿವಾರ ತಡ ರಾತ್ರಿ ಈ ಚಮತ್ಕಾರ ನಡೆದಿದೆ.
ಪೆದ್ದೆಮುಲ್ ಮಂಡಲದ ಬಂದಮಿಡಿಪಲ್ಲಿ ಗ್ರಾಮದ ಮಹಿಳೆ ನಾಗಮ್ಮಗೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಪತಿ ಕಿಷ್ಟಪ್ಪ ಆಂಬ್ಯುಲೆನ್ಸ್ ಮೂಲಕ ಪಕ್ಕದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ಸಮಯಯದಲ್ಲಿ ದಾರಿ ಮಧ್ಯೆದಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲೆನ್ಸ್ ಸಿಬ್ಬಂದಿ ಬೇರೆ ದಾರಿ ಇಲ್ಲದೇ ವಾಹನದಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಪ್ರಯತ್ನಿಸತೊಡಗಿದ್ದರು. ತೀವ್ರ ತೊಳಲಾಟ ಹಾಗೂ ಹರಸಾಹಸದ ಬಳಿಕ ಕೇವಲ ಮಗುವಿನ ಒಂದು ಕಾಲು ಮಾತ್ರ ಹೊರ ಬಂದಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು.
ಆಂಬ್ಯುಲೆನ್ಸ್ ಸಿಬ್ಬಂದಿಗೆ ಪೋಷಕರ ಧನ್ಯವಾದ: ಈ ಸಮಯದಲ್ಲಿ ಮಗುವಿನಲ್ಲಿ ಯಾವುದೇ ಚಲನವಲನಗಳು ಕಾಣಿಸಿಕೊಳ್ಳದಿದ್ದರಿಂದ ಇನ್ನೇನು ಮುಗಿದೇ ಹೋಯಿತು ಎಂದು ಎಲ್ಲರೂ ಕೈಚೆಲ್ಲಿ ಕುಳಿತಿದ್ದರು. ಇದಕ್ಕೂ ಮುನ್ನ ಜನಿಸಿದ ಮಗುವನ್ನು ಕಳೆದುಕೊಂಡಿದ್ದ ದಂಪತಿ ದೇವರು ಮತ್ತೊಮ್ಮೆ ನಮಗೆ ಅನ್ಯಾಯ ಮಾಡಿದನೆಂದು ಕಣ್ಣೀರು ಹಾಕತೊಡಗಿದ್ದರು. ಪರಿಸ್ಥಿತಿ ಅರಿತ 108 ಆಂಬ್ಯುಲೆನ್ಸ್ ಸಿಬ್ಬಂದಿ, ಕೊನೆಯ ಪ್ರಯತ್ನ ಎಂಬಂತೆ ಸಿಪಿಆರ್ (Cardiopulmonary Resuscitation) ಪ್ರಯೋಗಿಸುವ ಮೂಲಕ ಸಾವಿನ ಬಾಗಿಲು ತಟ್ಟಿದ್ದ ನವಜಾತ ಶಿಶುವನ್ನು ಉಳಿಸಿದ್ದಾರೆ. ಇವರ ತ್ವರಿತ ಕ್ರಮದಿಂದ ಮಗು ಗರ್ಭದಲ್ಲಿ ಚಲಿಸಲು ಪ್ರಾರಂಭಿಸತೊಡಗಿದ್ದು, ಆಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಹಲವು ವೈದ್ಯಕೀಯ ಪ್ರಯತ್ನಗಳ ಬಳಿಕ ಗಂಡು ಮಗು ಜನಿಸಿದ್ದು, ದಂಪತಿ ಹಾಗೂ ಕುಟುಂಬಸ್ಥರು ಆಂಬ್ಯುಲೆನ್ಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.
ಘಟನೆ ಬಗ್ಗೆ ಪೋಷಕರು ಹೇಳಿದ್ದಿಷ್ಟು: ''ಮೊದಲ ಗರ್ಭಾವಸ್ಥೆಯಲ್ಲಿ ಹೆಣ್ಣು ಮಗುವನ್ನು ನಾವು ಕಳೆದುಕೊಂಡಿದ್ದೆವು. ಹಾಗಾಗಿ ಎರಡನೇ ಗರ್ಭಾವಸ್ಥೆಯಲ್ಲಿ ಹೆರಿಗೆ ಕಷ್ಟವಾಗಬಹುದು ಎಂದು ವೈದ್ಯರು ಹೇಳಿದ್ದರು. ಇದರಿಂದಾಗಿ, ನಾವು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೆವು. ಶನಿವಾರ ಮಧ್ಯರಾತ್ರಿ, ಹೆರಿಗೆ ನೋವು ಶುರುವಾದ ತಕ್ಷಣ 108ಕ್ಕೆ ಕರೆ ಮಾಡಿದೆವು. ಆಂಬ್ಯುಲೆನ್ಸ್ ಮೂಲಕ ತಾಂಡೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು. ಥಟ್ಟೇಪಲ್ಲಿ ಎಂಬಲ್ಲಿ ಹೆರಿಗೆ ನೋವು ತೀವ್ರವಾಗತೊಡಗಿತ್ತು. ಮಗು ಹೊಟ್ಟೆಯಲ್ಲಿ ಪಕ್ಕಕ್ಕೆ ತಿರುಗಿದಾಗ ಮತ್ತು ಅದರ ಕಾಲುಗಳು ಮಾತ್ರ ಗರ್ಭದಿಂದ ಹೊರಬಂದಾಗ ಪರಿಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣ ಆಂಬ್ಯುಲೆನ್ಸ್ ಸಿಬ್ಬಂದಿ ವಾಹನವನ್ನು ಸ್ಥಳದಲ್ಲೇ ನಿಲ್ಲಿಸಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಮಗುವಿನ ಚಲನವಲನಗಳು ಕಾಣಿಸಿಕೊಳ್ಳದ್ದರಿಂದ ಕೈಚೆಲ್ಲಿ ಕುಳಿತಿದ್ದೆವು. ಮಗು ಸತ್ತಿದೆ ಎಂದು ಭಾವಿಸಿದ್ದೆವು. ಆಂಬ್ಯುಲೆನ್ಸ್ ಸಿಬ್ಬಂದಿಯ ತುರ್ತು ಪ್ರಜ್ಞೆಯಿಂದ ಹಾಗೂ ದೇವರ ಆಶೀರ್ವಾದರಿಂದ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದಳು. ಜನಿಸಿದ ತಕ್ಷಣ ಮಗುವಿನ ಬಾಯಿಯಿಂದ ದ್ರವ ಹೊರತೆಗೆದರು. ಹಲವು ವೈದ್ಯಕೀಯ ಪ್ರಯತ್ನಗಳ ಬಳಿಕ ಮಗು ಅಳಲು ಪ್ರಾರಂಭಿಸಿತು. ನರ್ಸ್‌ಗಳು ನಿಜವಾಗಿಯೂ ದೇವರಂತೆ ಬಂದು ತಮ್ಮ ಮಗುವಿನ ಜೀವವನ್ನು ಉಳಿಸಿದ್ದಾರೆ'' ಎಂದು ಕಿಷ್ಟಪ್ಪ ಸೇರಿದಂತೆ ಮಗುವಿನ ಪೋಷಕರು ಖುಷಿ ಹಂಚಿಕೊಂಡಿದ್ದಾರೆ.
ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ತಾಂಡೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಕೂಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಜಿಲ್ಲಾಸ್ಪತ್ರೆಯಲ್ಲಿ 4 ದಿನದ ಮಗು ಸಾವು - ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಆರೋಪ - BABY DEATH