ನವದೆಹಲಿ: 2016 ರಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದೇ ವೇಳೆ ವಿಚಾರಣಾ ನ್ಯಾಯಾಲಯದ ಎದುರು ಶರಣಾಗಲು ಒಂದು ವಾರಗಳ ಕಾಲಾವಕಾಶ ಕೂಡಾ ನೀಡಿದೆ.
ಇಂದಿನಿಂದ ಒಂದು ವಾರದ ಅವಧಿಯಲ್ಲಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ / ಜೈಲು ಪ್ರಾಧಿಕಾರದ ಮುಂದೆ ಶರಣಾಗುವಂತೆ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಕುಲಕರ್ಣಿ ಮತ್ತು ಇತರ ಆರೋಪಿಗಳು ತಮ್ಮ ಮೇಲೆ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿ ಸಾಕ್ಷಿಗಳನ್ನು ಸಂಪರ್ಕಿಸಲು ಮತ್ತು ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಸಿಬಿಐ ಸಲ್ಲಿಸಿದ ಮೇಲ್ಮನವಿ ಅಂಗೀಕರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ, ಸಂದರ್ಭಗಳ ಸಂಪೂರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿವಾದಿ ವಿನಯ್ ಕುಲಕರ್ಣಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಬೇಕು ಎಂದು ಈ ನ್ಯಾಯಾಲಯವು ನಿರ್ಧರಿಸಿದೆ. ಆರೋಪಿ ಸಂಖ್ಯೆ 15 ಅಂದರೆ, ಪ್ರತಿವಾದಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲಾಗಿದೆ. ಇಂದಿನಿಂದ 1 ವಾರದ ಅವಧಿಯಲ್ಲಿ ಪ್ರತಿವಾದಿಯು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ / ಜೈಲು ಪ್ರಾಧಿಕಾರದ ಮುಂದೆ ಶರಣಾಗಬೇಕು. ನಮ್ಮ ಯಾವುದೇ ಅವಲೋಕನಗಳಿಂದ ಪ್ರಭಾವಿತರಾಗದೇ, ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿವಾದಿ ವಿನಯ್ ಕುಲಕರ್ಣಿ ವಿರುದ್ಧ ಸಿಬಿಐ ಮಾಡಿರುವ ಆರೋಪ ಗಳಿಗೆ ಸಂಬಂಧಿಸಿದಂತೆ ವಿವರವಾದ ಅವಲೋಕನಗಳನ್ನು ಮಾಡುವುದನ್ನು ಪ್ರಜ್ಞಾಪೂರ್ವಕವಾಗಿ ತಡೆಯುವುದು ಸೂಕ್ತವೆಂದು ಪರಿಗಣಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದು ಏನೇ ಇರಲಿ, ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪರ್ಯಾಯವಾಗಿ ಅಂತಹ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರತಿವಾದಿಯು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಸೂಚಿಸಲು ಸಾಕಷ್ಟು ದಾಖಲೆಗಳಿವೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಶಾಸಕರ ಪರ ವಕೀಲರ ವಾದ ಏನು?: ಶಾಸಕ ವಿನಯ್ ಕುಲಕರ್ಣಿ ಪರವಾಗಿ ಹಾಜರಾದ ಹಿರಿಯ ವಕೀಲ ಮಣೀಂದರ್ ಸಿಂಗ್, ತಮ್ಮ ಕಕ್ಷಿದಾರರ ಮೇಲೆ ವಿಧಿಸಲಾದ ಯಾವುದೇ ಷರತ್ತು ಗಳನ್ನು ಉಲ್ಲಂಘಿಸಲಾಗಿಲ್ಲ ಎಂದು ವಾದಿಸಿ, ಜಾಮೀನು ರದ್ದುಗೊಳಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು. ತಮ್ಮ ಕಕ್ಷಿದಾರರು ಜವಾಬ್ದಾರಿಯುತ ಶಾಸಕರಾಗಿದ್ದು, ಅವರು ನ್ಯಾಯಾಂಗದ ಆದೇಶದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ ಎಂದು ಸಿಂಗ್ ವಾದಿಸಿದರು.
ಸಿಬಿಐ ಪರ ವಕೀಲರು ವಾದವೇನು?: ಸಿಬಿಐ ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಸಹ-ಆರೋಪಿ ಚಂದ್ರಶೇಖರ್ ಇಂಡಿ ಮತ್ತು ಕುಲಕರ್ಣಿ ತಮ್ಮ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ. ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಸಂಪರ್ಕಿಸಲು ಮತ್ತು ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.
ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ವಿನಯ್ ಕುಲಕರ್ಣಿ ಅವರಿಗೆ 2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಜಾಮೀನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಸಾಕ್ಷಿಗಳಿಗೆ ಆಮಿಷ ಒಡ್ಡಿರುವುದರಿಂದ ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿತ್ತು. ಇದೀಗ ಸಿಬಿಐ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ವಿನಯ್ ಕುಲಕರ್ಣಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇದನ್ನು ಓದಿ:ಆರ್ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್
ಕಾಲ್ತುಳಿತ ಪ್ರಕರಣದಲ್ಲಿ ಕೆಎಸ್ಸಿಎ ಸದಸ್ಯರಿಗೆ ರಿಲೀಫ್: ಆತುರದ ಕ್ರಮ ಬೇಡ ಎಂದ ಹೈಕೋರ್ಟ್