ಸೂರತ್ (ಗುಜರಾತ್) : ಇಲ್ಲಿನ ವಜ್ರದ ಕಾರ್ಖಾನೆಯಲ್ಲಿ ನೀರು ಕುಡಿದು 118 ಮಂದಿ ಅಸ್ವಸ್ಥರಾಗಿದ್ದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಲುಷಿತ ನೀರಿನಿಂದ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿರಲಿಲ್ಲ. ಬದಲಾಗಿ, ಇದು ಸಾಮೂಹಿಕ ಕೊಲೆ ಯತ್ನ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕುಡಿಯುವ ನೀರಿನಲ್ಲಿ ವಿಷಕಾರಿ ರಾಸಾಯನಿಕ ಬೆರೆಸಿದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರ್ಖಾನೆಯಲ್ಲಿ ಸಿಸಿಟಿವಿ ಪರಿಶೀಲನೆ ವೇಳೆ ಇಂಥದ್ದೊಂದು ಅನುಮಾನ ಮೂಡಲು ಕಾರಣವಾಗುವ ದೃಶ್ಯಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ ಸೇವಿಸಿದ ಕಾರ್ಮಿಕರು: ಅನ್ಭಾ ಡೈಮಂಡ್ ಕಂಪನಿಯಲ್ಲಿ ಏಪ್ರಿಲ್ 9 ರಂದು ಈ ಘಟನೆ ನಡೆದಿತ್ತು. ಕಂಪನಿಯಲ್ಲಿ 120ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಕುಡಿಯುವ ನೀರಿನ ಫಿಲ್ಟರ್‌ನಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಉದ್ಯೋಗಿಯೊಬ್ಬ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದ. ಪರಿಶೀಲಿಸಿದಾಗ, ಅದರೊಳಗೆ ಸೆಲ್ಲೋಫೋಸ್ (ವಿಷಕಾರಿ ವಸ್ತು) ಪತ್ತೆಯಾಗಿತ್ತು. ಅದಾಗಲೇ ಈ ನೀರನ್ನ ಎಲ್ಲ ಕಾರ್ಮಿಕರು ಕುಡಿದಿದ್ದರು. ಇದರಿಂದ ಒಟ್ಟು 118 ಉದ್ಯೋಗಿಗಳು ಅಸ್ವಸ್ಥರಾಗಿದ್ದರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ 111 ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ವಿಷಕಾರಿ ನೀರನ್ನು ಕುಡಿದ 118 ಉದ್ಯೋಗಿಗಳಲ್ಲಿ 111 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನೂ 7 ಮಂದಿ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮೂಹಿಕ ಹತ್ಯೆಗೆ ಯತ್ನ: ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರಿಗೆ ಇದು ಸಾಮೂಹಿಕ ಹತ್ಯೆ ಯತ್ನ ಎಂಬ ಅಂಶಗಳು ಕಂಡುಬಂದಿವೆ. ಕೆಲವರು ಬೇಕಂತಲೇ ಕುಡಿಯುವ ನೀರಿನ ಫಿಲ್ಟರ್ನಲ್ಲಿ 10 ಸೆಲ್‌ಫೋಸ್‌ನ ಸ್ಯಾಚೆಟ್ (ಪ್ಯಾಕೆಟ್) ಅನ್ನು ಬೆರೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ದೊರೆತ ಪ್ಯಾಕೆಟ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಇದರಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಅಲೋಕ್ ಕುಮಾರ್, ಸೆಲ್ಲೋಫೋಸ್ ಪೌಚ್ ಅನ್ನು ನೀರಿಗೆ ಹಾಕಿದ್ದರ ಹಿಂದಿನ ಉದ್ದೇಶ ಅಪಾಯಕಾರಿಯಾಗಿದೆ. ಸಾಮೂಹಿಕ ಹತ್ಯೆಗೆ ಯತ್ನ ನಡೆಸಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಇದಲ್ಲದೆ, ಅಪರಾಧ ವಿಭಾಗವೂ ನೆರವು ನೀಡುತ್ತಿದೆ ಎಂದರು.
ಫಿಲ್ಟರ್ ಇರುವ ಜಾಗದಲ್ಲಿ ಸಿಸಿಟಿವಿ ಕ್ಯಾಮರಾಗಳು ಇಲ್ಲ. ಇದರಿಂದಾಗಿ ಕಿರಾತಕರು ಕೃತ್ಯ ಎಸಗಲು ಸಲೀಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: I.N.D.I.A ಬಣ ಅಸ್ತಿತ್ವದಲ್ಲಿದೆಯೇ?: ಕಾಂಗ್ರೆಸ್ ವಿರುದ್ಧ ಉದ್ಧವ್ ಶಿವಸೇನೆ ಮತ್ತೆ ಆಕ್ರೋಶ