ಜೈಪುರ: ಉತ್ತರ ಪ್ರದೇಶದ ಕಾಳಿಂದಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿಸುವ ದುರುದ್ದೇಶದಿಂದ ಟ್ರ್ಯಾಕ್ ಮೇಲೆ ಎಲ್ಪಿಜಿ ಸಿಲಿಂಡರ್ ಇಟ್ಟ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಈ ಘಟನೆಯ ಬೆನ್ನಲ್ಲೇ ಇಂಥದ್ದೇ ದುಷ್ಕೃತ್ಯ ರಾಜಸ್ಥಾನದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಜ್ಮೀರ್ ಜಿಲ್ಲೆಯಲ್ಲಿ ಸರಕು ತುಂಬಿದ ಗೂಡ್ಸ್ ರೈಲಿನ ಹಳಿ ತಪ್ಪಿಸಲು ದುಷ್ಕರ್ಮಿಗಳು ಟ್ರ್ಯಾಕ್ ಮೇಲೆ ಸಿಮೆಂಟ್ ಬ್ಲಾಕ್ ಇಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
70 ಕೆ.ಜಿ ತೂಕದ ಎರಡು ಸಿಮೆಂಟ್ ಬ್ಲಾಕ್ಗೆ ರೈಲು ಡಿಕ್ಕಿ ಹೊಡೆದಿದೆ. ಫುಲೇರಾ-ಅಹಮದಾಬಾದ್ ಮಾರ್ಗದ ಸರಕು ಸಾಗಣೆಗಾಗಿಯೇ ಇರುವ ಫ್ರೈಟ್ ಕಾರಿಡಾರ್‌ನ ಸರಧ್ನಾ ಮತ್ತು ಬಂಗಾಡ್ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.
ದುಷ್ಕರ್ಮಿಗಳು ಹಳಿಗಳ ಮೇಲೆ ಬಿಸಾಕಿದ್ದ ಸಿಮೆಂಟ್ ಬ್ಲಾಕ್ಸ್ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ ಎಂದು ವಾಯುವ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುವುದು ಎಂದು ಫ್ರೈಟ್ ಕಾರಿಡಾರ್ ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೆ ಮುನ್ನಾ ದಿನ ಭಿವಾನಿ-ಪ್ರಯಾಗ್ರಾಜ್ ಮಾರ್ಗದ ಕಾಳಿಂದಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿಸಲು ಕಾನ್ಫುರದಲ್ಲಿ ದುಷ್ಕರ್ಮಿಗಳು ಎಲ್ಪಿಜಿ ಸಿಲಿಂಡರ್ ಜೊತೆಗೆ ಪೆಟ್ರೋಲ್ ಮತ್ತು ಬೆಂಕಿಪೊಟ್ಟಣವನ್ನು ಟ್ರಾಕ್ ಮೇಲೆ ಎಸೆದಿದ್ದರು. ಇದನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿ, ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು.
ಇದನ್ನೂ ಓದಿ: ರೈಲು ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟ ದುಷ್ಕರ್ಮಿಗಳು! ತುರ್ತು ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ ಲೋಕೋ ಪೈಲಟ್