ನವದೆಹಲಿ: 1955ರ ವಕ್ಫ್ ಮಂಡಳಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದನ್ನು ಮುಸ್ಲಿಮ್ ಪಂಥದ ಅಖಿಲ ಭಾರತ ಸೂಫಿ ಸಜ್ಜದಾನಶಿನ್ ಪರಿಷತ್ತು (ಎಐಎಸ್‌ಎಸ್‌ಸಿ) ಸ್ವಾಗತಿಸಿದೆ. ಸರ್ಕಾರದ ಕ್ರಮಕ್ಕೆ ತಮ್ಮ ಬೆಂಬಲ ಇರುವುದಾಗಿ ಘೋಷಿಸಿದೆ. ಜೊತೆಗೆ, ಎಲ್ಲರೂ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದೆ.
ದೆಹಲಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಎಸ್‌ಎಸ್‌ಸಿ ಅಧ್ಯಕ್ಷ ಸೈಯದ್ ನಾಸೆರುದ್ದೀನ್ ಚಿಸ್ತಿ, "ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದೀಗ, ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಇದಕ್ಕೆ ಸೂಫಿ ವೇದಿಕೆಯಿಂದ ಸಕಲ ಬೆಂಬಲ ನೀಡಲಾಗುವುದು. ದರ್ಗಾಗಳನ್ನು ಸರ್ವೇ ಮಾಡಿ, ಅವುಗಳನ್ನು ರಕ್ಷಿಸಬೇಕಿದೆ" ಎಂದು ಹೇಳಿದರು.
"ವಕ್ಫ್ ಬೋರ್ಡ್ ವಿಚಾರದಲ್ಲಿ ಯಾವುದೇ ಪಕ್ಷಗಳು ರಾಜಕೀಯ ಮಾಡಬಾರದು. ತಿದ್ದುಪಡಿ ವಿರೋಧಿಸುವವರು, ಈ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಲಿ. ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು, ಅದನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಬೇಕು. ವಕ್ಫ್ ಮಂಡಳಿ ಮುಸ್ಲಿಮರ ಆಸ್ತಿಯಾಗಿದೆ. ಹೀಗಾಗಿ ಅದರ ರಕ್ಷಣೆ ಅಗತ್ಯವಿದೆ" ಎಂದರು.
ಮಂಡಳಿಯಲ್ಲಿನ ಭ್ರಷ್ಟಾಚಾರಕ್ಕೆ ತಡೆ: "ವಕ್ಫ್ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬೇಕಿದೆ. ಸರ್ಕಾರ ಮಸೂದೆಗೆ ತಿದ್ದುಪಡಿ ತರುತ್ತಿರುವುದರಿಂದ ಇದಕ್ಕೆ ಕಡಿವಾಣ ಬೀಳಲಿದೆ. ಈ ವಿಷಯದ ಬಗ್ಗೆ ಸೂಫಿ ವೇದಿಕೆಯು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಜೊತೆಗೆ ಪತ್ರವೂ ಬರೆಯಲಾಗಿದೆ. ಸರ್ಕಾರವು ತರುತ್ತಿರುವ ಮಸೂದೆಯು ಅಲ್ಪಸಂಖ್ಯಾತರು ಮತ್ತು ಮುಸ್ಲಿಮರ ಪರವಾಗಿರುತ್ತದೆ ಎಂಬ ವಿಶ್ವಾಸ ನಮಗಿದೆ. ಈ ಬಗ್ಗೆ ಕೆಲವರು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸಬಾರದು" ಎಂದು ಸೈಯದ್ ನಾಸೆರುದ್ದೀನ್ ಚಿಸ್ತಿ ಸಲಹೆ ನೀಡಿದರು.
"ವಕ್ಫ್ ಮಸೂದೆ ತಿದ್ದುಪಡಿಯ ಮೂಲಕ ಪ್ರತಿಯೊಬ್ಬರ ಹಕ್ಕು ರಕ್ಷಣೆಯಾಗಲಿದೆ. ಮಂಡಳಿಯಲ್ಲಿ ನಡೆಯುತ್ತಿರುವ ಎಗ್ಗಿಲ್ಲದ ಭ್ರಷ್ಟಾಚಾರವೂ ಕೊನೆಗೊಳ್ಳುತ್ತದೆ. ಸೂಕ್ತ ಮಾರ್ಪಾಡುಗಳೊಂದಿಗೆ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದರು.
ಸೂಫಿ ನಾಯಕರ ಜೊತೆ ಸಭೆ: ಇದಕ್ಕೂ ಮೊದಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಆಗಸ್ಟ್ 5ರಂದು ದೇಶದ ವಿವಿಧ ದರ್ಗಾಗಳ ಪ್ರಮುಖ ಸಂತರನ್ನು ಒಳಗೊಂಡಿರುವ ಅಖಿಲ ಭಾರತ ಸೂಫಿ ಸಜ್ಜದಾನ್ಶಿನ್ ಪರಿಷತ್ ಜೊತೆಗೆ ಸಭೆ ನಡೆಸಿದ್ದರು. ಕಾಯ್ದೆ ತಿದ್ದುಪಡಿ ಬಗ್ಗೆ ಮುಸ್ಲಿಂ ನಾಯಕರ ಜೊತೆಗೆ ಚರ್ಚಿಸಿದ್ದರು.
ಈ ಬಗ್ಗೆ ತಮ್ಮ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ದೇಶದ ವಿವಿಧ ದರ್ಗಾಗಳ ಮುಖ್ಯಸ್ಥರನ್ನು ಒಳಗೊಂಡಿರುವ ಅಖಿಲ ಭಾರತ ಸೂಫಿ ಸಜ್ಜದಾನಶಿನ್ ಪರಿಷತ್ತಿನ (ಎಐಎಸ್‌ಎಸ್‌ಸಿ) ನಿಯೋಗವು ಭೇಟಿಯಾಗಿ ಮಾತುಕತೆ ನಡೆಸಿದೆ. ಸಮುದಾಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ವಕ್ಫ್ ಮಂಡಳಿ ಕಾಯ್ದೆ ತಿದ್ದುಪಡಿಗೆ ಪರ-ವಿರೋಧ: ರಾಜ್ಯಸಭೆಯಲ್ಲಿ ಮೊದಲು ಮಂಡನೆ ಸಾಧ್ಯತೆ - Waqf Act Amendment