ಮುಂಬೈ (ಮಹಾರಾಷ್ಟ್ರ) : ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸೇರಿದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಅಹಮದಾಬಾದ್ನಲ್ಲಿ ಪತನವಾಗಿ 241 ಜನರ ಸಾವಿಗೆ ಕಾರಣವಾಗಿದೆ. ಇದು ದೇಶದಲ್ಲಿಯೇ ಅತಿದೊಡ್ಡ ವಿಮಾನ ದುರಂತವಾಗಿ ಕಪ್ಪುಚುಕ್ಕೆ ಪಡೆದುಕೊಂಡಿದೆ.
ಭೀಕರ ದುರಂತಕ್ಕೆ ಮಿಡಿದಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇನ್ನು ಮುಂದೆ ತನ್ನ ವಿಮಾನಗಳಿಗೆ ಸಾಂಕೇತಿಕವಾಗಿ ಇಡಲಾದ '171' ಸರಣಿ ಸಂಖ್ಯೆಯನ್ನು ಕೈಬಿಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜೂನ್ 17 ರಿಂದ, ಅಹಮದಾಬಾದ್ - ಲಂಡನ್ನ ಗ್ಯಾಟ್ವಿಕ್ಗೆ ತೆರಳುವ ವಿಮಾನ ಸಂಖ್ಯೆಯಾದ 'AI 171' ಬದಲಿಗೆ ಅದನ್ನು 'AI 159' ಎಂದು ಬದಲಿಸಲಾಗುತ್ತದೆ. ಗ್ವಾಟ್ವಿಕ್ನಿಂದ ಹಿಂದಿರುಗುವ ವಿಮಾನದ ಸಂಖ್ಯೆಯು '160' ಎಂದಿರಲಿದೆ. ಪ್ರಯಾಣಿಕರಲ್ಲಿ ಗೊಂದಲ ತಪ್ಪಿಸಲು ಬುಕಿಂಗ್ ವ್ಯವಸ್ಥೆಯಲ್ಲೂ ಅಗತ್ಯ ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಅಗಲಿದವರಿಗೆ ಗೌರವದ ಸೂಚಕ: ಇದರ ಜೊತೆಗೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ತನ್ನ ವಿಮಾನ ಸಂಖ್ಯೆಯಾದ 'IX 171' ಅನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ. ವಿಮಾನ ಸಂಖ್ಯೆ '171' ಅನ್ನು ಸ್ಥಗಿತಗೊಳಿಸುವುದು ದುರಂತದಲ್ಲಿ ಅಗಲಿದ ಆತ್ಮಗಳಿಗೆ ಗೌರವ ಸೂಚಿಸುವ ಸಂಕೇತವಾಗಿದೆ. 2020 ರಲ್ಲಿ, ಕೋಯಿಕ್ಕೋಡ್‌ನಲ್ಲಿ ಇದೇ ಸರಣಿಯ ವಿಮಾನವು ಅಪಘಾತಕ್ಕೀಡಾದ ಆ ಸಂಖ್ಯೆಯನ್ನು ಬಳಸುವುದನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿಲ್ಲಿಸಿತ್ತು.
ಭೀಕರ ವಿಮಾನ ಅಪಘಾತಗಳ ನಂತರ ವಿಮಾನಯಾನ ಸಂಸ್ಥೆಗಳು ಅಪಘಾತಕ್ಕೀಡಾದ ವಿಮಾನ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸುವುದು ಸಹಜ. "ಇದು ಮೃತರಿಗೆ ಗೌರವ ಸಲ್ಲಿಸುವ ಮತ್ತು ಅವರ ಕುಟುಂಬಸ್ಥರ ಬೆಂಬಲವಾಗಿ ನಿಲ್ಲುವುದಾಗಿದೆ. ಅವರ ನೋವಿನಲ್ಲಿ ನಾವಿದ್ದೇವೆ ಎಂದು ಹೇಳುವ ಪರಿಯಾಗಿದೆ ಅಧಿಕಾರಿಯೊಬ್ಬರು ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ವಿಮಾನ ದುರಂತ: ಇನ್ನು, ಜೂನ್ 12 ರಂದು ಗುಜರಾತ್ನ ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ 'AI 171' ವಿಮಾನವು ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಸಮೀಪದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲಿನ ಕಟ್ಟಡದ ಮೇಲೆ ಪತನಗೊಂಡಿತ್ತು.
ದುರ್ಘಟನೆಯಲ್ಲಿ ವಿಮಾನದಲ್ಲಿ 242 ಪ್ರಯಾಣಿಕರ ಪೈಕಿ ಒಬ್ಬರು ಪಾರಾಗಿ 241 ಜನರು ಸಾವಿಗೀಡಾಗಿದ್ದರು. ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು, ಪಕ್ಕದ ನಿವಾಸಿಗಳು ಸೇರಿ ಸಾವಿನ ಸಂಖ್ಯೆ 274ಕ್ಕೆ ಏರಿದೆ. ಏರ್ ಇಂಡಿಯಾ ಮಾಲೀಕತ್ವದ ಟಾಟಾ ಗ್ರೂಪ್, ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ.ಗಳ ಪರಿಹಾರ ನೀಡುವುದಾಗಿ ಘೋಷಿಸಿದೆ.
ಭೀಕರ ಅಪಘಾತದ ನಂತರ, ಪ್ರಧಾನಿ ನರೇಂದ್ರ ಮೋದಿ, ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರೊಂದಿಗೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಕೈಕ ಬದುಕುಳಿದವರನ್ನು ಪ್ರಧಾನಿ ಭೇಟಿಯಾದರು.
ಇದನ್ನೂ ಓದಿ: ಜೀವನದ ಮೊದಲ 'ಯಾನ'ವನ್ನೇ ಕೊನೆಗೊಳಿಸಿದ 'ವಿಮಾನ' ದುರಂತ; ಮಗನ ಕಾಣಲು ಹೊರಟ ಅಮ್ಮ ಬಾರದೂರಿಗೆ ಪಯಣ!
ಅಹಮದಾಬಾದ್ ವಿಮಾನ ದುರಂತ: ಡಿಎನ್ಎ ಪರೀಕ್ಷೆ ಬಳಿಕ ಶವಗಳ ಸಾಗಾಟಕ್ಕೆ 200 ಆಂಬ್ಯುಲೆನ್ಸ್ ಸನ್ನದ್ಧ