ಕೋಟಾ, ರಾಜಸ್ಥಾನ: ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದು, ತನ್ನ ಆಯಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಕೋಟಾ ನಿವಾಸಿ ಮಯಾಂಕ್ ಸೇನ್ ಕೂದಲೆಳೆ ಅಂತರದಲ್ಲಿ ಪಾರಾದ ವೈದ್ಯಕೀಯ ವಿದ್ಯಾರ್ಥಿ. ನನ್ನದು ಗ್ರೇಟ್ ಎಸ್ಕೇಪ್ ಎಂದು ಉದ್ಘರಿಸುವ ಮೂಲಕ ವಿದ್ಯಾರ್ಥಿ ಮಯಾಂಕ್ ನಿಟ್ಟುಸಿರು ಬಿಟ್ಟಿದ್ದಾನೆ.
ಅಹಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮಾಯಾಂಕ್ ಸೇನ್, ತಾನು ಉಳಿದುಕೊಂಡಿದ್ದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದು ಪತನಗೊಂಡಾಗ ತಾನು ಹೇಗೆ ಬಚಾವ್ ಆದೆ ಎಂಬುದರ ಬಗ್ಗೆ ಹೇಳಿಕೊಳ್ಳುತ್ತಲೇ ಘಟನೆಯನ್ನು ನೆನೆದು ನಿಟ್ಟುಸಿರು ಬಿಟ್ಟಿದ್ದಾನೆ.
ಗುರುವಾರ ಮಧ್ಯಾಹ್ನ 1:15ಕ್ಕೆ ಊಟ ಮಾಡಿದ ನಂತರ ತಾನು ಮೆಸ್‌ನಿಂದ ಹೊರಬಂದೆ. ಅಲ್ಲಿಂದ ಹೊರಬಂದ ಸ್ವಲ್ಪ ಸಮಯದರಲ್ಲೇ ವಿಮಾನದ ಬಾಲವು ಮೆಸ್ ಮೇಲೆ ಬಿದ್ದಿತು. ನಾನು ಅಲ್ಲಿಂದ ಬರುವುದಕ್ಕೂ ವಿಮಾನವು ಕಟ್ಟಡದ ಮೇಲೆ ಬೀಳುವುದಕ್ಕೂ ಕೂದಲೆಳೆ ಅಂತರ ಮಾತ್ರ. ಸ್ವಲ್ಪ ತಡವಾಗಿದ್ದರೆ, ತನ್ನ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ಮಾಯಾಂಕ್ ಘಟನೆ ನೆನೆದು ನಿಟ್ಟುಸಿರು ಬಿಡುತ್ತಿದ್ದಾನೆ.
ಇತರ ವೈದ್ಯರು ಊಟ ಮಾಡುತ್ತಿದ್ದರು: ವಿಮಾನ ಕಟ್ಟಡಕ್ಕೆ ಬಂದು ಗುದ್ದಿದಾಗ ಇನ್ನೂ ಕೆಲವು ಇಂಟರ್ನ್‌ಗಳು ಮತ್ತು ಇತರ ವೈದ್ಯರು ಊಟ ಮಾಡುತ್ತಿದ್ದರು. ಅಪಘಾತದಲ್ಲಿ ಕೆಲವರು ಸಿಲುಕಿಕೊಂಡರು. ಕ್ಷಣಾರ್ಧದಲ್ಲೇ ಬೆಂಕಿ ಮತ್ತು ಧೂಳು ತುಂಬಿಕೊಂಡಿದ್ದರಿಂದ ಏನು ಆಗುತ್ತಿದೆ ಅಂತಲೂ ಗೊತ್ತಾಗಲಿಲ್ಲ. ಇದು ನನ್ನ ಕಣ್ಣ ಮುಂದೆ ನಡೆದ ದುರಂತ ಎಂದು ಮಾಯಾಂಕ್ ಬೇಸರ ವ್ಯಕ್ತಪಡಿಸಿದ್ದಾನೆ.

ಅಪ್ಪಳಿಸುವ ತುಸು ಮುಂಚೆ ಅಲ್ಲಿಂದ ಹೊರಟಿದ್ದ ಮಯಾಂಕ್: ಸಿವಿಲ್ ಆಸ್ಪತ್ರೆಯಲ್ಲಿ ಬೆಳಗಿನ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಯಾಂಕ್, ಅಂದು ಸಂಜೆ ಎಂದಿನಂತೆ ತರಗತಿಗಳಿಗೆ ಹಾಜರಾಗುವ ಸಿದ್ಧತೆಯಲ್ಲಿದ್ದರು. ಹಾಗಾಗಿ ಮಧ್ಯಾಹ್ನ 12ರಿಂದ 2:00ರ ನಡುವಿನ ಊಟದ ಸಮಯದಲ್ಲಿ ಮೆಸ್‌ಗೆ ಬಂದಿದ್ದರು. ವಿಮಾನ ಪ್ರಾಧ್ಯಾಪಕರ ಫ್ಲಾಟ್ ಮತ್ತು ಮೆಸ್ ಕಟ್ಟಡದ ಮೇಲೆಯೇ ಏಕಾಏಕಿ ಅಪ್ಪಳಿಸಿದ್ದು, ಅದಕ್ಕೂ ಮುನ್ನ ಮಯಾಂಕ್ ಅಲ್ಲಿಂದ ತೆರಳಿದ್ದರು.

ಅಪಘಾತದ ಸ್ಥಳ ನಾನಿದ್ದಲ್ಲಿಂದ ಕೇವಲ 300 ಮೀಟರ್ ದೂರ: ಗುರುವಾರ ಮಧ್ಯಾಹ್ನ 1:00 ಗಂಟೆಗೆ ಊಟಕ್ಕೆ ಬಂದಿದ್ದೆ. ಊಟ ಮಾಡಲು ಸುಮಾರು 15 ನಿಮಿಷ ತೆಗೆದುಕೊಂಡೆ. ಊಟದ ತಕ್ಷಣ ನಾನು ನನ್ನ ಹಾಸ್ಟೆಲ್ ಕೋಣೆಗೆ ಹೋದೆ. ಅಲ್ಲಿಂದ ಹೋದ 15 ನಿಮಿಷಗಳ ನಂತರ, ನನಗೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ನಾನು ಹೊರಗೆ ಬಂದು ನೋಡಿದಾಗ, ಭಾರಿ ಪ್ರಮಾಣದ ಹೊಗೆ ಮತ್ತು ಬೆಂಕಿ ಆವರಿಸಿತ್ತು. ಅಪಘಾತ ಸಂಭವಿಸಿದ ಸ್ಥಳ ಮತ್ತು ನನ್ನ ಹಾಸ್ಟೆಲ್ ಕೊಠಡಿಗೆ ಕೇವಲ 300 ಮೀಟರ್ ದೂರ ಮಾತ್ರ. ನಾನು ಸೇರಿದಂತೆ ಕೆಲವು ವಿದ್ಯಾರ್ಥಿಗಳು ಸ್ವಲ್ಪದರಲ್ಲೇ ಬದುಕುಳಿದೆವು. ಆದರೆ, ಮೆಸ್‌ನಲ್ಲಿ ಊಟ ಮಾಡುತ್ತಿದ್ದ ನನ್ನ ಕೆಲವು ಸ್ನೇಹಿತರು ಸಿಲುಕಿದ್ದು ಬೇಸರ ತರಿಸಿದೆ. ನಾನು ಸಮಯಕ್ಕೆ ಮುಂಚಿತವಾಗಿ ಬಂದಿದ್ದು ನನ್ನ ಅದೃಷ್ಟ. ಸ್ವಲ್ಪ ಕೆಲಸ ಇದ್ದುದರಿಂದ ನಾನು ಬೇಗನೆ ಊಟ ಮಾಡಿ ಹೊರ ಬಂದೆ. ಆ ಅರೆ ಗಳಿಗೆ ನನ್ನನ್ನು ಉಳಿಸಿದೆ ಎಂದು ಮಯಾಂಕ್ ಹೇಳಿಕೊಂಡಿದ್ದಾರೆ.

ನಾನು ಉಳಿದುಕೊಂಡಿರುವ ಹಾಸ್ಟೆಲ್ ಕಟ್ಟಡದ ಮೇಲೆಯೇ ವಿಮಾನ ಅಪ್ಪಳಿಸಿರುವ ಸುದ್ದಿ ಕೇಳಿ ನನ್ನ ಕುಟುಂಬ ಭಯಭೀತವಾಗಿತ್ತು. ಫೋನ್ ಮಾಡಿ ಮಾತನಾಡಿದ ಬಳಿಕ ನಿಟ್ಟುಸಿರುವ ಬಿಟ್ಟರು.