ಆಗ್ರಾ, ಉತ್ತರಪ್ರದೇಶ: ಗುರುವಾರ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಆಗ್ರಾ ಮೂಲದ ದಂಪತಿ ನೀರಜ್ ಮತ್ತು ಅಪರ್ಣಾ ಕೂಡ ಮೃತಪಟ್ಟಿದ್ದು, ಇವರ ಕಥೆಯೂ ಇತರರಿಗಿಂತ ಭಿನ್ನವಾಗಿಲ್ಲ. ವಿಮಾನ ದುರಂತದಲ್ಲಿ ಮೃತಪಟ್ಟವರ ಕರುಣಾಜನಕ ಕಥೆಗಳು ದಿನಕಳೆದಂತೆ ಒಂದೊಂದೇ ಹೊರಬೀಳುತ್ತಿದ್ದು, ಈ ದಂಪತಿಯ ಕಥೆ ಕೂಡ ವಿಚಿತ್ರ.
ಮೂಲತಃ ಆಗ್ರಾ ಜಿಲ್ಲೆಯ ಅಕೋಲಾ ಗ್ರಾಮವರಾದ ನೀರಜ್ ಲವಾನಿಯಾ, ಪತ್ನಿ ಅಪರ್ಣಾ ಲವಾನಿಯಾ ಅವರನ್ನು 10 ದಿನಗಳ ಮಟ್ಟಿಗೆ ಲಂಡನ್‌ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ದಂಪತಿಯ ಪ್ರವಾಸ ಹೀಗೆ ಮರಳಿ ಬಾರದ ಪಯಣವಾಗಿ ಅಂತ್ಯಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಕಳೆದ ಹಲವು ಹರ್ಷಗಳ ಹಿಂದೆಯೇ ಆಗ್ರಾದ ಅಕೋಲಾ ಗ್ರಾಮದಿಂದ ಗುಜರಾತ್‌ಗೆ ಶಿಫ್ಟ್ ಆಗಿದ್ದ ನೀರಜ್, ವಡೋದರಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಸಿ ನೆಲ್ಸನ್ (ನೆಲ್ಸನ್ ಐಕ್ಯೂ) ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನೀರಜ್, ತಮ್ಮ ಕುಟುಂಬದೊಂದಿಗೆ ವಡೋದರಾದ ಫೆದರ್ ಸ್ಕೈ ವಿಲಾಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಕೇವಲ 10 ದಿನಗಳ ಪ್ರವಾಸಕ್ಕೆಂದು ಲಂಡನ್‌ಗೆ ತೆರಳುತ್ತಿದ್ದರು. ಆದರೆ, ಅವರು ಪ್ರಯಾಣಿಸುತ್ತಿದ್ದ ಬೋಯಿಂಗ್ ಕಂಪನಿಯ (787–8 ಡ್ರೀಮ್‌ಲೈನರ್) ವಿಮಾನ ಅಪಘಾತವಾಗಿದೆ ಎಂಬ ಸುದ್ದಿ ಕೇಳಿ ನಡುಕ ಬಂದಿತು. ಅಷ್ಟರಲ್ಲೇ ಅಣ್ಣ ನೀರಜ್ ಹಾಗೂ ಅತ್ತಿಗೆ ಅಪರ್ಣಾ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಸುದ್ದಿ ಬಂದಿತು ಎಂದು ಅಕೋಲಾದಲ್ಲಿರುವ ಅವರ ಅಣ್ಣ ಸತೀಶ್ ಲವಾನಿಯಾ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸಂಸದರಿಂದ ಕುಟುಂಬಸ್ಥರಿಗೆ ಸಾಂತ್ವನ: ಅಪಘಾತಕ್ಕೀಡಾದ ವಿಮಾನದಲ್ಲಿ ದಂಪತಿ ಮೃತಪಟ್ಟ ಸುದ್ದಿ ಆಗ್ರಾಗೆ ತಲುಪಿದ್ದು, ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಅವರ ಮನೆಗೆ ಆಗಮಿಸುತ್ತಿದ್ದಾರೆ. ಫತೇಪುರ್ ಸಿಕ್ರಿ ಸಂಸದ ರಾಜ್‌ಕುಮಾರ್ ಚಾಹರ್ ಕೂಡ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ ಎಂದು ಸಹೋದರ ಸತೀಶ್ ಶೋಕ ವ್ಯಕ್ತಪಡಿಸಿದ್ದಾರೆ.

ನೀರಜ್ ಮತ್ತು ಅರ್ಪಣಾ ಬೆಳಿಗ್ಗೆ 9ಗಂಟೆಗೆ ಟ್ಯಾಕ್ಸಿ ಮೂಲಕ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅವರ 15 ವರ್ಷದ ಮಗಳು ತನ್ನ ಅಜ್ಜಿಯೊಂದಿಗೆ ಮನೆಯಲ್ಲಿಯೇ ಇದ್ದಳು. ವಿಮಾನ ನಿಲ್ದಾಣವನ್ನು ಸುರಕ್ಷಿತವಾಗಿ ತಲುಪಿದ ಬಳಿಕ ನನಗೆ ಕರೆ ಮಾಡಿ ತಿಳಿಸಿದ್ದರು. ಇದು ನೀರಜ್ ಮಾಡಿದ ಕೊನೆಯ ಕರೆ. ಕೆಲವೇ ಹೊತ್ತಲ್ಲಿ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾದ ಸುದ್ದಿ ಬಂದಿತು. ತಕ್ಷಣ, ನಾವು ನೀರಜ್ ಮತ್ತು ಅಪರ್ಣಾ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದೆವು ಎಂದು ಸತೀಶ್ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬಹಳ ಹಿಂದೆಯೇ ಇಂತಹದ್ದೊಂದು ಪ್ರವಾಸ ಮಾಡುವ ಆಲೋಚನೆ ಮಾಡಿದ್ದರು. ಕಾರಣಾಂತರಗಳಿಂದ ಆಗಿರಲಿಲ್ಲ. ಪತ್ನಿಯ 50ನೇ ಹುಟ್ಟುಹಬ್ಬವಿತ್ತು. ಅದರ ನಿಮಿತ್ತವಾಗಿ ನೀರಜ್ 10 ದಿನಗಳ ಮಟ್ಟಿಗೆ ಲಂಡನ್‌ಗೆ ಪ್ರವಾಸಕ್ಕೆ ತೆರಳುವ ಪ್ಲಾನ್ ಮಾಡಿದ್ದರು. ಆದರೆ, ವಿಮಾನ ದುರಂತ ಎಲ್ಲ ಖುಷಿಯನ್ನು ಕಸಿದುಕೊಂಡಿತು ಎಂದು ಸಹೋದರ ಸತೀಶ್ ತಮ್ಮ ಅಳಲು ತೋಡಿಕೊಂಡರು.
ಅಕೋಲಾದ ಸರಸ್ವತಿ ವಿದ್ಯಾ ಮಂದಿರದಲ್ಲಿ 5ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ ನೀರಜ್, ಚಾಹರ್ವತಿ ಇಂಟರ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಮಾಡಿದ್ದರು. ಆಗ್ರಾ ಕಾಲೇಜಿನಿಂದ ಬಿಎಸ್ಸಿ ಉತ್ತೀರ್ಣರಾಗಿದ್ದ ಅವರು, ಪದವಿ ಪಡೆದ ನಂತರ 1995ರಲ್ಲಿ ಅಕೋಲಾವನ್ನು ತೊರೆದಿದ್ದರು. ಜೈಪುರ, ನವದೆಹಲಿ, ಹೈದರಾಬಾದ್, ಪುಣೆಯಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಕೆಲವು ದಿನಗಳ ಕಾಲ ನೆದರ್ಲ್ಯಾಂಡ್ಸ್‌ನಲ್ಲಿಯೂ ಇದ್ದರು. ಸದ್ಯ ಗುಜರಾತ್‌ನ ವಡೋದರಾದಲ್ಲಿ ನೆಲೆಸಿದ್ದರು.