ಹೈದರಾಬಾದ್: ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮತ್ತೆ ಮೈತ್ರಿ ಮಾಡಿಕೊಂಡಿವೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಹಳೆಯ ದೋಸ್ತಿಗಳು ಮತ್ತೆ ಒಂದಾಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಪೊಲೀಸ್ ಇಲಾಖೆಯ 'ಸಿಂಗಂ' ಎಂದೇ ಖ್ಯಾತಿ ಪಡೆದಿದ್ದ ಕೆ.ಅಣ್ಣಾಮಲೈ ಅವರನ್ನು ಹುದ್ದೆಯಿಂದ ಕೈಬಿಡಲಾಗಿದೆ.
ಎಐಎಡಿಎಂಕೆ ಮತ್ತು ಬಿಜೆಪಿ ಮತ್ತೆ ಮೈತ್ರಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಎಐಎಡಿಎಂಕೆ ನಾಯಕ ಇ.ಕೆ.ಪಳನಿಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ, ಉಭಯ ಪಕ್ಷಗಳ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು.
Stronger together, united towards Tamil Nadu’s progress!
— Narendra Modi (@narendramodi) April 11, 2025
Glad that AIADMK joins the NDA family. Together, with our other NDA partners, we will take Tamil Nadu to new heights of progress and serve the state diligently. We will ensure a government that fulfils the vision of the…
ತಮಿಳುನಾಡು ಅಭಿವೃದ್ಧಿಗೆ ಮೈತ್ರಿ: ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ತಮಿಳುನಾಡಿನ ಪ್ರಗತಿಗಾಗಿ ಎಐಎಡಿಎಂಕೆ ಮತ್ತು ಬಿಜೆಪಿ ಮತ್ತೆ ಮೈತ್ರಿ ಹಾದಿ ತುಳಿದಿವೆ. ಎಐಎಡಿಎಂಕೆ ಎನ್ಡಿಎ ಕೂಟ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ. ನಮ್ಮ ಇತರ ಎನ್ಡಿಎ ಪಾಲುದಾರರೊಂದಿಗೆ ಒಟ್ಟಾಗಿ, ತಮಿಳುನಾಡನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ. ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಎಂಜಿಆರ್ ಮತ್ತು ಜಯಲಲಿತಾ ಅವರ ಕನಸನ್ನು ಈಡೇರಿಸುವ ಸರ್ಕಾರವನ್ನು ನಾವು ಮುಂದಿನ ದಿನಗಳಲ್ಲಿ ರಚಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ತಮಿಳುನಾಡಿನ ಪ್ರಗತಿಗಾಗಿ ಮತ್ತು ತಮಿಳು ಸಂಸ್ಕೃತಿಯ ಅನನ್ಯತೆ ಕಾಪಾಡಲು, ಭ್ರಷ್ಟ ಮತ್ತು ವಿಭಜಕ ಡಿಎಂಕೆ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತುಹಾಕುವುದು ನಮ್ಮ ಧ್ಯೇಯವಾಗಿದೆ. ಮೈತ್ರಿಕೂಟ ಅದನ್ನು ಸಾಕಾರ ಮಾಡಲಿದೆ ಎಂದು ಹೇಳಿದ್ದಾರೆ.
ಎಐಎಡಿಎಂಕೆಗೆ ನಾಯಕತ್ವ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ತಮಿಳುನಾಡಿನಲ್ಲಿ ಪಳನಿಸ್ವಾಮಿ ಅವರೇ ಎನ್ಡಿಎ ಕೂಟವನ್ನು ಮುನ್ನಡೆಸಲಿದ್ದಾರೆ. ಮೈತ್ರಿಕೂಟದ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ. ಎನ್ಡಿಎ ಕೂಟದ ಸರ್ಕಾರವನ್ನು ರಚಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
The Tamil Nadu BJP has received a nomination for the post of state president only from Shri @NainarBJP Ji.
— Amit Shah (@AmitShah) April 11, 2025
As the President of the Tamil Nadu BJP unit, Shri @annamalai_k Ji has made commendable accomplishments. Whether it is carrying the policies of PM Shri @narendramodi Ji to…
ಅಣ್ಣಾಮಲೈ ಜಾಗಕ್ಕೆ ನಾಗೇಂದ್ರನ್: ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ವಿರೋಧಿಸುತ್ತಲೇ ಬಂದಿದ್ದ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಬಿಜೆಪಿಯು ಹುದ್ದೆಯಿಂದ ಕೈಬಿಟ್ಟಿದೆ. ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಮತ್ತೆ ಮೈತ್ರಿ ಮಾಡಿಕೊಂಡಿದ್ದು, ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ನಾಗೇಂದ್ರನ್ ಅವರು ಎಐಎಡಿಎಂಕೆ ತೊರೆದು ಇತ್ತೀಚೆಗೆ ಬಿಜೆಪಿ ಸೇರಿದ್ದರು. ಈಗ ಅವರಿಗೇ ಅಧ್ಯಕ್ಷ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಎರಡೂ ಪಕ್ಷಗಳ ನಡುವಿನ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ, ನಾಗೇಂದ್ರನ್ ಅವರಿಗೆ ಅಧ್ಯಕ್ಷ ಹುದ್ದೆ ಹಸ್ತಾಂತರವೂ ಯಾವುದೇ ವಿರೋಧವಿಲ್ಲದೇ ನಡೆದಿದೆ.
ಇದನ್ನೂ ಓದಿ: ಆಕ್ಷೇಪಾರ್ಹ ಹೇಳಿಕೆ: ಪಕ್ಷದ ಉನ್ನತ ಸ್ಥಾನದಿಂದ ಸಚಿವ ಪೊನ್ಮುಡಿ ವಜಾ ಮಾಡಿದ ಡಿಎಂಕೆ