ನವದೆಹಲಿ: ಈ ವರ್ಷ ಅವಧಿಗೆ ಮುನ್ನವೇ ಆಗಮಿಸಿದ್ದ ನೈರುತ್ಯ ಮುಂಗಾರು ಎರಡು ವಾರದ ಬಿಡುವಿನ ಬಳಿಕ ಮತ್ತೆ ಚುರುಕುಗೊಂಡಿದ್ದು, ಗುರುವಾರದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಐಎಂಡಿ ಮಾಹಿತಿ ಪ್ರಕಾರ, ಜೂನ್ 12 ರಿಂದ 15ರ ವರೆಗೆ ಕೊಂಕಣ ಮತ್ತು ಗೋವಾದ ಮೇಲೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ ವಾಯುವ್ಯ ಭಾರತದಲ್ಲಿ ಶಾಖದ ಅಲೆ ಪರಿಸ್ಥಿತಿ ಮುಂದುವರೆಯಲಿದೆ. ಗುರುವಾರದವರೆಗೆ ರಾಜಸ್ಥಾನದ ಹಲವು ಭಾಗಗಳಲ್ಲಿ ಶಾಖದ ಅಲೆ ಮುಂದುವರೆಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ವಾಡಿಕೆ ಮುಂಗಾರು ಪ್ರವೇಶದ ಅವಧಿಗಿಂತ ಒಂದು ವಾರದ ಮೊದಲೇ ಅಂದರೆ, ಮೇ 24ರಂದು ನೈರುತ್ಯ ಮಾನ್ಸೂನ್ ಕೇರಳ ಪ್ರವೇಶಿಸಿತ್ತು. 2009ರ ಬಳಿಕ ಇಷ್ಟು ಬೇಗ ಇದೇ ಮೊದಲ ಬಾರಿಗೆ ಮಾನ್ಸೂನ್ ಅವಧಿ ಮುನ್ನ ಪ್ರವೇಶವಾಗಿದೆ. ವಾಡಿಕೆಯಂತೆ ಮಾನ್ಸೂನ್ ಜೂನ್ 1ರಂದು ಕೇರಳಕ್ಕೆ ಪ್ರವೇಶಿಸುತ್ತದೆ.
ಈ ಬಾರಿ ಮುಂಗಾರು ಆರಂಭದ ಬಳಿಕ ಕಳೆದ ತಿಂಗಳು ದೇಶದಲ್ಲಿ ಸರಾಸರಿ 126.7 ಮಿಲಿ ಮೀಟರ್ ಮಳೆಯಾಗಿದೆ. ಕೇರಳ ಪ್ರವೇಶಿಸಿದ ಮುಂಗಾರು ದೇಶದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ನಿರಂತರ ಮಳೆಗೆ ಕಾರಣವಾಗಿತ್ತು. ಕೇರಳ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದಲ್ಲಿ ಭಾರೀ ಮಳೆ ಅಬ್ಬರಿಸಿತು. ಆದ್ರೆ ಮೇ 29ರ ಬಳಿಕ ಮುಂಗಾರು ಮಳೆ ಕೊಂಚ ಬಿಡುವು ನೀಡಿತ್ತು. ಇದೀಗ ಮತ್ತೆ ಮುಂಗಾರು ನಾಳೆಯಿಂದ (ಜೂನ್ 12) ಚುರುಕುಗೊಳ್ಳಲಿದ್ದು, ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ: ಕೇರಳದಲ್ಲಿ ಮುಂಗಾರು ಅಬ್ಬರ: ತಗ್ಗು ಪ್ರದೇಶಗಳು ಜಲಾವೃತ, ಜನರು ಆಶ್ರಯ ತಾಣಗಳಿಗೆ ಶಿಫ್ಟ್
ದೇಶಾದ್ಯಂತ ನೈಋತ್ಯ ಮಾನ್ಸೂನ್ ಮಳೆ ದೀರ್ಘಾವಧಿಯ ಸರಾಸರಿಯ ಶೇ. 106 ರಷ್ಟು ಇರಲಿದೆ. ಭಾರತದಲ್ಲಿ ಈ ಮಳೆ ಅವಧಿಯ ದೀರ್ಘ ಕಾಲ 868.6ಎಂಎಂ ಆಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯು ಮುಂಗಾರು ಋತುವಿನಲ್ಲಿ ರೈತರು ಹೆಚ್ಚಿನ ಬೆಳೆಗಳನ್ನು ಬಿತ್ತಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಕೃಷಿ ವಲಯಕ್ಕೆ ಶುಭ ಸೂಚನೆಯಾಗಿದೆ. ಲಕ್ಷಾಂತರ ಭಾರತೀಯರಿಗೆ ಕೃಷಿ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಸಾಂಪ್ರದಾಯಿಕವಾಗಿ, ಭಾರತೀಯ ಕೃಷಿಯು ವಿಶೇಷವಾಗಿ ಖಾರಿಫ್ ಋತುವಿನಲ್ಲಿ ಮಾನ್ಸೂನ್ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಬಾರಿ ಮಳೆ ರೈತರಿಗೆ ಸಕಾರಾತ್ಮಕವಾಗಿರಲಿದೆ ಎಂದು ಮುನ್ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ಎಂಟು ದಿನಗಳ ಮುಂಚಿತವಾಗಿಯೇ ಕೇರಳಕ್ಕೆ ಆಗಮಿಸಿದ ಮುಂಗಾರು; ಭಾರತೀಯ ಹವಾಮಾನ ಇಲಾಖೆ