ಫಾರೂಖಾಬಾದ್ (ಉತ್ತರಪ್ರದೇಶ) : ಇಲ್ಲಿನ ಸಂತ ಕಬೀರ್ ನಗರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ತಾನೇ ಖುದ್ದು ನಿಂತು ಮದುವೆ ಮಾಡಿಸಿದ ಘಟನೆ ನಡೆದಿತ್ತು. ಅಂಥಹದ್ದೇ ಇನ್ನೊಂದು ಪ್ರಕರಣ ಫಾರೂಖಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯು ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದಾನೆ.
ತನ್ನ ಪತ್ನಿಯು ಆಕೆಯ ಪ್ರಿಯಕರನ ಜೊತೆ ವಿವಾಹವಾಗಲು ಒಪ್ಪಿದ ಯುವಕನ ಹೆಸರು ರಾಹುಲ್. ಈತ 2 ವರ್ಷಗಳ ಹಿಂದಷ್ಟೇ ವೈಷ್ಣವಿ ಎಂಬಾಕೆಯನ್ನು ವಿವಾಹವಾಗಿದ್ದ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಪತ್ನಿಯಿಂದ ಆತ ದೂರವಾಗಿದ್ದ. ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ, ವೈಷ್ಣವಿ ತನ್ನ ಪ್ರಿಯಕರನ ಜೊತೆಗೆ ವಿವಾಹವಾಗಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದುವೆಗೆ ನನ್ನ ಸಮ್ಮತಿ ಇದೆ: ಈ ಬಗ್ಗೆ ಹೇಳಿಕೆ ನೀಡಿರುವ ರಾಹುಲ್, ನಾವಿಬ್ಬರೂ ಭಿನ್ನ ಹಾದಿ ತುಳಿದಿದ್ದೆವು. ಆಕೆ ತನ್ನ ಪ್ರಿಯಕರನ ಜೊತೆ ವಿವಾಹವಾಗಿದ್ದಾಳೆ. ಇದಕ್ಕೆ ನನ್ನ ಸಮ್ಮತಿ ಇದೆ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ವೈಷ್ಣವಿ ಕೂಡ ಈ ಬಗ್ಗೆ ಮಾತನಾಡಿದ್ದು, ಮೊದಲ ಪತಿಯ ಜೊತೆಗೆ ಯಾವುದೋ ಕಾರಣಕ್ಕಾಗಿ ಅಭಿಪ್ರಾಯ ಭೇದ ಉಂಟಾಗಿತ್ತು. ಹೀಗಾಗಿ, ಮತ್ತೊಬ್ಬ ವ್ಯಕ್ತಿಯ ಜೊತೆ ವಿವಾಹವಾಗಿದ್ದೇನೆ. ಮೊದಲ ಪತಿ ನನ್ನ ಜೊತೆ ಬದುಕಲು ಬಯಸಲಿಲ್ಲ. ನನಗೂ ಇಷ್ಟವಿರಲಿಲ್ಲ. ನನ್ನ ಕುಟುಂಬದ ಒಪ್ಪಿಗೆಯೊಂದಿಗೆ ನಾನು ಎರಡನೇ ಬಾರಿಗೆ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ.
ವಿಚ್ಛೇದನ ಪಡೆಯದೇ ಎರಡನೇ ವಿವಾಹ: ವೈಷ್ಣವಿ ಅವರ ತಾಯಿ ಮೀನಾ ಎರಡನೇ ವಿವಾಹದ ವೇಳೆ ಹಾಜರಿದ್ದು, ಈ ಮದುವೆಗೆ ನನ್ನ ಮಗಳು ಮತ್ತು ಆಕೆಯ ಮೊದಲ ಪತಿ ಪರಸ್ಪರ ಒಪ್ಪಿಕೊಂಡಿದ್ದಾರೆ. ಇಬ್ಬರೂ ಇನ್ನೂ ವಿಚ್ಛೇದನ ಪಡೆದಿಲ್ಲ. ಅಫಿಡವಿಟ್ ಆಧಾರದ ಮೇಲೆ ಈ ಮದುವೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.
ಭಯ ಹುಟ್ಟಿಸಿರುವ ಮೀರತ್ ಕೊಲೆ ಘಟನೆ: ಮೀರತ್ನಲ್ಲಿ ಇತ್ತೀಚೆಗೆ ಮುಸ್ಕಾನ್ ಎಂಬಾಕೆ ತನ್ನ ಪ್ರಿಯಕರ ಸಾಹಿಲ್ ಜೊತೆಗೂಡಿ ಪತಿ ಸೌರಭ್ ಅವರನ್ನು ಕೊಂದು ಡ್ರಮ್ನಲ್ಲಿ ತುಂಬಿಸಿಟ್ಟ ಪ್ರಕರಣ ನಡೆದಿತ್ತು. ಇದಾದ ಬಳಿಕ ಪತಿಯರು ತಮ್ಮ ಪತ್ನಿಯನ್ನು ಅವರು ಬಯಸಿದ ಪ್ರಿಯಕರನ ಜೊತೆ ವಿವಾಹವಾಗಲು ಒಪ್ಪಿಗೆ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮೀರತ್ ಘಟನೆಯು ಹಲವರಲ್ಲಿ ಭಯ ಹುಟ್ಟಿಸಿದೆ.
ಕಬೀರ್ನಗರ ಪ್ರಕರಣ: ಉತ್ತರಪ್ರದೇಶದ ಕಬೀರ್ನಗರದಲ್ಲಿ ಇತ್ತೀಚೆಗೆ ಪತಿಯು ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿದ್ದ. ದಂಪತಿಗೆ ಮೊದಲು ಇಬ್ಬರು ಮಕ್ಕಳಿದ್ದರು. ಆದರೆ, ಪತ್ನಿಯು ಬೇರೊಬ್ಬ ವ್ಯಕ್ತಿಯ ಪ್ರೇಮಪಾಶಕ್ಕೆ ಬಿದ್ದಿದ್ದಳು. ಇದನ್ನರಿತ ಆತ ಇಬ್ಬರಿಗೆ ವಿವಾಹ ಮಾಡಿಸಿದ್ದ. ಆದರೆ, ಇದನ್ನು ಪ್ರಿಯಕರನ ತಾಯಿ ವಿರೋಧಿಸಿ ಆಕೆಯನ್ನು ಮರಳಿ ಮೊದಲ ಪತಿಯ ಮನೆಗೆ ಕಳುಹಿಸಿದ್ದಳು.
ಇದನ್ನೂ ಓದಿ; ಅಚ್ಚರಿ - ವಿಭಿನ್ನ..! ಪತ್ನಿಯ ಇಷ್ಟದಂತೆ ಪ್ರಿಯಕರನೊಂದಿಗೆ ವಿವಾಹ ಮಾಡಿಸಿಕೊಟ್ಟು ಹೃದಯ ವೈಶಾಲ್ಯತೆ ಮೆರೆದ ಪತಿ
ಮದುವೆಯಾದ 20 ದಿನದಲ್ಲಿ ₹2 ಲಕ್ಷ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ!