ನವದೆಹಲಿ: ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ ಗಡಿ ಪ್ರದೇಶದ ಮನೆಗಳಿಗೆ ಹೆಚ್ವುವರಿಯಾಗಿ ಪರಿಹಾರ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಇತ್ತೀಚಿಗೆ ಈ ಹೆಚ್ಚುವರಿ ಪರಿಹಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಈ ಬೆನ್ನಲ್ಲೇ ಪ್ರಕಟಣೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ಹಾನಿಗೊಳಗಾದ 2,060 ಮನೆಗಳಿಗೆ ಹೆಚ್ಚುವರಿಯಾಗಿ 25 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದಾರೆ ಎಂದು ಪಿಐಬಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಈ ವೇಳೆ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ ಮನೆಗಳಿಗೆ ಹೆಚ್ಚುವರಿ ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಸಂಪೂರ್ಣ ಹಾನಿಗೊಳಗಾದ ಪ್ರತಿ ಮನೆಗೆ 2 ಲಕ್ಷ ರೂಪಾಯಿ ಹಾಗೂ ಭಾಗಶಃ ಹಾನಿಗೊಳಗಾದ ಪ್ರತಿ ಮನೆಗೆ 1 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು.
ಅದರಂತೆ ಇದೀಗ ಕೇಂದ್ರ ಗೃಹ ಸಚಿವಾಲಯ, ಪ್ರಧಾನಿ ಮೋದಿ ಅವರ ಘೋಷಣೆಯಂತೆ ಪರಿಹಾರವನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಪೂಂಚ್ ಹೊರತಾಗಿ ಪಂಜಾಬ್‌ನ ಗಡಿ ಪ್ರದೇಶದಲ್ಲಿಯೂ ಇದೇ ರೀತಿ ಪರಿಹಾರ ನೀಡಲಾಗುವುದು.
ಇನ್ನು ಮೇ 29 ಮತ್ತು 30 ರಂದು ಪೂಂಚ್‌ಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಂಬ್ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವುದಾಗಿ ತಿಳಿಸಿ, ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದರು. ಈ ವೇಳೆ ಹಾನಿ ಪರಿಹಾರವನ್ನು ತಕ್ಷಣವೇ ನೀಡುವ ಭರವಸೆ ನೀಡಿದ್ದರು.
ಆಪರೇಷನ್ ಸಿಂಧೂರ್ ಬಳಿಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಪಾಕಿಸ್ತಾನದ ಶೆಲ್ ದಾಳಿ ನಡೆಸಲಾಗಿತ್ತು. ಗುರುದ್ವಾರಗಳು, ದೇವಾಲಯಗಳು, ಮಸೀದಿಗಳು ಸೇರಿದಂತೆ ವಸತಿ ಪ್ರದೇಶಗಳು, ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ಶೆಲ್ ದಾಳಿ ನಡೆಸಲಾಗಿತ್ತು. ಇದರಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾದವು.
ಶೆಲ್ ದಾಳಿ ಸಂದರ್ಭದಲ್ಲಿ ಗಡಿ ಜಿಲ್ಲೆಗಳಿಂದ ಒಟ್ಟು 3.25 ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು. 15 ಸಾವಿರ ಜನರಿಗೆ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದರು. ಗಡಿ ಜಿಲ್ಲೆಗಳಲ್ಲಿ ಒಟ್ಟು 394 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಪೂಂಚ್ ಜಿಲ್ಲೆಯಲ್ಲೇ 62 ಆಂಬ್ಯುಲೆನ್ಸ್‌ಗಳನ್ನು ಇರಿಸಲಾಗಿತ್ತು. ತುರ್ತು ಸೇವೆಗಳು, ಜಾನುವಾರುಗಳು, ಅಗತ್ಯ ಸರಬರಾಜು ಇತ್ಯಾದಿಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ಒಟ್ಟು 2818 ನಾಗರಿಕ ರಕ್ಷಣಾ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಪೂಂಚ್ ಶೆಲ್ ದಾಳಿ ಸಂತ್ರಸ್ತರನ್ನು ಭೇಟಿಯಾದ ಶಾ; ಶೀಘ್ರದಲ್ಲೇ ಪರಿಹಾರ ಪ್ಯಾಕೇಜ್ ಬಿಡುಗಡೆಯ ಭರವಸೆ -