ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಕೇಂದ್ರದ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲು ನಿರಾಕರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇದೀಗ ಅದೇ ಮಾದರಿಯ ಕಲೈಂಜರ್ ಕೈವಿನೈ ತಿಟ್ಟಂ (ಕೆಕೆಟಿ) ಎಂಬ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಏಪ್ರಿಲ್ 18ರಂದು ಕಂಚೀಪುರಂನ ಕುಂದ್ರತೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಕುಶಲಕರ್ಮಿಗಳಿಗೆ ಆರ್ಥಿಕ ಸಹಾಯ ಒದಗಿಸಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ತರಬೇತಿ ನೀಡಲು ರಾಜ್ಯ ಸರ್ಕಾರದ ರೂಪಿಸಿರುವ ಯೋಜನೆ ಇದಾಗಿದೆ. ಈ ಮೂಲಕ ಅವರ ಜೀವನ ಸುಧಾರಿಸಿ, ಸ್ವಾವಲಂಬಿ ಉದ್ಯಮಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಇಟ್ಟಿಗೆ ಕಾರ್ಮಿಕರು, ಕುಂಬಾರಿಕೆ, ಮಿಶ್ರಲೋಹ ತಯಾರಿಕೆ, ಮರಗೆಲಸ, ಆಭರಣ ತಯಾರಿಕೆ, ಶಿಲ್ಪಕಲೆ ರಚನೆ, ಗಾಜಿನ ಕೆಲಸ, ಕಟ್ಟಡ ನಿರ್ಮಾಣ, ದೋಣಿ ನಿರ್ಮಾಣ, ಹಗ್ಗ ಮತ್ತು ಚಾಪೆ ತಯಾರಿಕೆ, ಸಂಗೀತ ವಾದ್ಯಗಳ ತಯಾರಿಕೆ, ನೇಯ್ಗೆ ಮತ್ತು ಚಿತ್ರಕಲೆ ಸೇರಿದಂತೆ 25ಕ್ಕೂ ಹೆಚ್ಚು ಸಾಂಪ್ರದಾಯಿಕ ವ್ಯಾಪಾರಗಳಿಗೆ ಯೋಜನೆಯಿಂದ ಪ್ರಯೋಜನ ಸಿಗಲಿದೆ. ಈ ಯೋಜನೆಗೆ ಅರ್ಹತೆ ಪಡೆಯಲು ಅರ್ಜಿದಾರರು 35 ವರ್ಷ ದಾಟಿದ್ದು, ಪಟ್ಟಿ ಮಾಡಲಾದ ಯಾವುದಾದರೂ ವ್ಯಾಪಾರದಲ್ಲಿ ಕನಿಷ್ಠ 5 ವರ್ಷದ ಅನುಭವ ಹೊಂದಿರಬೇಕು.
ಈ ಕುರಿತು ಮಾತನಾಡಿದ ರಾಜ್ಯ ಸಚಿವ ಟಿ.ಎಂ.ಅನ್ಬರಸನ್, "ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಹೋಲಿಸಿದರೆ ಕೆಟಿಟಿ ಯೋಜನೆ ವಿಶೇಷತೆ ಹೊಂದಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ" ಎಂದಿದ್ದಾರೆ.
ವಿಶ್ವಕರ್ಮ ಯೋಜನೆ ಜಾತಿ ಆಧಾರಿತ ವೃತ್ತಿಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ, ಕೆಕೆಟಿ ಸಮಗ್ರ ಮತ್ತು ಎಲ್ಲರ ಬೆಂಬಲಕ್ಕೆ ಒದಗಿಸಿರುವ ಯೋಜನೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಯೋಜನೆ ಎಲ್ಲರನ್ನೂ ಒಳಗೊಳ್ಳುವ ಮುಂದಾಲೋಚನೆಯ ಮತ್ತು ಉತ್ತಮ ಭವಿಷ್ಯದ ದೃಷ್ಟಿಕೋನ ಹೊಂದಿದೆ. ಸಾಂಪ್ರದಾಯಿಕ ಕುಟುಂಬಗಳಿಗೆ ವೃತ್ತಿಗೆ ಸೀಮಿತವಾಗದೆ, ಉದ್ಯಮದ ಆಯ್ಕೆಗೆ ಅವಕಾಶ ಮಾಡಿಕೊಡುತ್ತದೆ.
ಸಾಲ ಬೆಂಬಲ ವ್ಯವಸ್ಥೆ ರಚನೆಯನ್ನು ಈ ಯೋಜನೆ ಹೊಂದಿದೆ. ಹಾಗೆಯೇ ವಿಶ್ವಕರ್ಮ ಯೋಜನೆಗಿಂತ ಭಿನ್ನವಾಗಿದ್ದು, ಕೆಕೆಟಿ 3 ಲಕ್ಷ ರೂ.ಗಳ ಸಾಲ ಬೆಂಬಲ ನೀಡಲಿದೆ. ಶೇ.25 ರಷ್ಟು ಬಂಡವಾಳ ಸಬ್ಸಿಡಿ, ಶೇ 5.ರಷ್ಟು ಬಡ್ಡಿ ಸಬ್ಸಿಡಿ ಹೊಂದಿದೆ.
ಈ ಯೋಜನೆ ವಾರ್ಷಿಕವಾಗಿ 10,000 ಕುಶಲಕರ್ಮಿಗಳಿಗೆ ಪ್ರಯೋಜನ ನೀಡಲಿದೆ. ಸಾಂಪ್ರದಾಯಿಕ, ಜಾತಿ ಆಧಾರಿತ ವ್ಯಾಪಾರ ಆಧರಿಸಿಲ್ಲ. ಸಬ್ಸಿಡಿ ಆಧಾರಿತ ಸಾಲ, ಉದ್ಯಮದ ಅಭಿವೃದ್ಧಿ ಮತ್ತು ಕೌಶಲ್ಯ ತರಬೇತಿಗೆ ಸಹಾಯ ಮಾಡಿ, ವ್ಯಾಪಾರ ವಿಸ್ತರಣೆಗೆ ಸಹಾಯ ಮಾಡಲಿದೆ ಎಂದು ಸಚಿವರು ವಿವರಿಸಿದ್ದಾರೆ.
2024ರ ನವೆಂಬರ್ 27ರಂದು ಸಿಎಂ ಸ್ಟಾಲಿನ್, ಪ್ರಧಾನಿ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ರಾಜ್ಯದಲ್ಲಿ ಜಾರಿ ತರುವುದಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: ತಮಿಳುನಾಡು ನೀಟ್ ವಿನಾಯಿತಿ ಮಸೂದೆ ತಿರಸ್ಕರಿಸಿದ ಕೇಂದ್ರ; ತೀವ್ರವಾಗಿ ಖಂಡಿಸಿದ ಸ್ಟಾಲಿನ್
ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಸಿಎಂ ಸ್ಟಾಲಿನ್