ಚಿತ್ತೂರು (ಆಂಧ್ರಪ್ರದೇಶ) : ಹಾವಿನ ದ್ವೇಷ 12 ವರ್ಷ ಎಂಬ ಮಾತಿದೆ. ಆದರೆ, ಈ ವ್ಯಕ್ತಿಯ ವಿಚಾರದಲ್ಲಿ ಅದು ಹೆಚ್ಚೇ ಆಗಿದೆ. ಈಗ ಆತನಿಗೆ 50 ವರ್ಷ. ಮೊದಲ ಬಾರಿಗೆ ಹಾವು ಕಚ್ಚಿದ್ದು 20ನೇ ವರ್ಷದಲ್ಲಿ. ಅಂದಿನಿಂದ ಪ್ರತಿವರ್ಷವೂ ಆತನಿಗೆ ಹಾವುಗಳು ಕಚ್ಚುತ್ತಲೇ ಇವೆ. ಪ್ರತಿ ಬಾರಿಯೂ ಪ್ರಾಣಾಪಾಯದಿಂದ ಪಾರಾಗುತ್ತಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಮ್ಮರಗುಂಟ ಗ್ರಾಮದ ಸುಬ್ರಹ್ಮಣ್ಯಂ, ಹಾವಿನ ಕಡಿತದಿಂದ ನಿತ್ಯವೂ ಭೀತಿಯಲ್ಲಿ ಬದುಕುತ್ತಿರುವ ವ್ಯಕ್ತಿ. ಹಾವುಗಳು ಈತನನ್ನು ಶತ್ರುವಿನಂತೆ ಕಾಡುತ್ತಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಕಚ್ಚಿವೆ. ಆಸ್ಪತ್ರೆಗೆ ಅಲೆದು ಅಲೆದು ಚಿಕಿತ್ಸೆಯ ಬಿಲ್ ಕಟ್ಟಲೂ ಈತ ಪರದಾಡುವಂತಾಗಿದೆ.
ಸರ್ಪಗಳು ಕಚ್ಚುತ್ತಿರುವುದೇಕೆ? : ಸುಬ್ರಮಣಿಯಂ ಅವರು ಎಲ್ಲೇ ಹೋದರೂ ಹಾವು ಕಚ್ಚೀತು ಎಂಬ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹಾವುಗಳು ಈ ವ್ಯಕ್ತಿಯನ್ನು ಬೆಂಬಿಡದೇ ಕಾಡುತ್ತಿರುವುದು ಏಕೆ ಎಂಬುದು ನಿಗೂಢವಾಗಿದೆ. ಈವರೆಗೂ ಹತ್ತಕ್ಕೂ ಹೆಚ್ಚು ಬಾರಿ ಕಚ್ಚಿವೆ. ಕೆಲವೊಮ್ಮೆ ವರ್ಷಕ್ಕೆ 4-5 ಬಾರಿ ಕಡಿದಿವೆ. ಕುಟುಂಬ ಸದಸ್ಯರು ಸರ್ಪ ದೋಷ ಪರಿಹಾರ, ರಾಹು ಕೇತು ಪೂಜೆ ಮುಂತಾದ ಪರಿಹಾರ ಮಾಡಿಸಿದರೂ, ನಾಗಪ್ಪನ ಅವಕೃಪೆ ಮಾತ್ರ ತಪ್ಪಿಲ್ಲ.
ಕೂಲಿ ಕೆಲಸ ಮಾಡಿಕೊಂಡಿರುವ ಸುಬ್ರಹ್ಮಣ್ಯಂ ಅವರಿಗೆ ಮೊದಲ ಬಾರಿ ತಮ್ಮ 20ನೇ ವಯಸ್ಸಿನಲ್ಲಿ ಹಾವು ಕಚ್ಚಿತ್ತು. ಅದಾದ ಬಳಿಕ ಪ್ರತಿವರ್ಷವೂ ಸರ್ಪ ದಾಳಿ ನಡೆದಿವೆ. ಪ್ರತಿ ಬಾರಿ ಆಸ್ಪತ್ರೆ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಊರು ಬಿಟ್ಟರೂ ಕಡಿತ ತಪ್ಪಲಿಲ್ಲ: ಊರಲ್ಲಿ ಹಾವಿನ ಕಡಿತ ಹೆಚ್ಚಾದ ಕಾರಣ ಸುಬ್ರಹ್ಮಣ್ಯಂ ಅವರು, ಕರ್ನಾಟಕದ ಬೆಂಗಳೂರಿಗೆ ವಲಸೆ ಬಂದಿದ್ದರು. ಅಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆಯೂ ಅವರಿಗೆ ಹಾವು ಕಚ್ಚಿದೆ. ತಕ್ಷಣವೇ ಚಿಕಿತ್ಸೆ ಪಡೆದ ಬಳಿಕ ಅವರು ಬದುಕುಳಿದಿದ್ದರು. ಊರು ಬಿಟ್ಟು ಬಂದರೂ ಹಾವಿನ ಕಾಟ ಮಾತ್ರ ತಪ್ಪಿರಲಿಲ್ಲ.
ಪ್ರಾಣ ಭೀತಿಯಿಂದಾಗಿ ಬೆಂಗಳೂರಿನಿಂದ ವಾಪಸಾದ ಅವರು, ಹುಟ್ಟೂರಿನಲ್ಲಿಯೇ ಮತ್ತೆ ಕೆಲಸಕ್ಕೆ ಅಣಿಯಾದರು. ಕೆಲ ದಿನಗಳ ಹಿಂದಷ್ಟೇ ಜಮೀನಿನಲ್ಲಿ ಕೆಲಸ ಮಾಡುವಾಗ ಮತ್ತೆ ಹಾವು ಕಚ್ಚಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಗಾಗಿಯೇ ಏರುತ್ತಿರುವ ಸಾಲ: ಪದೇ ಪದೆ ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕಾರಣ, ಚಿಕಿತ್ಸೆಗಾಗಿ ಸಾಲ ಮಾಡುವಂತಾಗಿದೆ. ಚೇತರಿಸಿಕೊಂಡ ನಂತರ ಕೂಲಿ ಕೆಲಸ ಮಾಡಿ ಈ ಸಾಲ ತೀರಿಸುತ್ತಿದ್ದಾರೆ. ಅಷ್ಟರಲ್ಲಿ ಮತ್ತೆ ಹಾವು ಕಚ್ಚಿ, ಮತ್ತೆ ಸಾಲ ಮಾಡುವಂತಾಗಿದೆ. ಇದರಿಂದ ನಾವು ಗಂಭೀರ ಸಮಸ್ಯೆಗೆ ತುತ್ತಾಗಿದ್ದೇವೆ. ಪರಿಹಾರ ಕಾಣದೇ ಪರಿತಪಿಸುತ್ತಿದ್ದೇವೆ ಎಂದು ಸುಬ್ರಮಣಿಯಂ ಅವರ ಪತ್ನಿ ಶಾರದಮ್ಮ ಅವರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: 'ಸುಳ್ಳು ಹಾವು': ಇದರಲ್ಲಿ ವಿಷದ ಪ್ರಮಾಣ ಎಷ್ಟಿರುತ್ತೆ ಗೊತ್ತಾ?
'ಹಾವು ಕಡಿತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಮಾಡಿ'; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ